ಬಜೆಟ್ 2021: ಚಿನ್ನ ಮತ್ತು ಬೆಳ್ಳಿ ಮೇಲಿನ ಕಸ್ಟಮ್ಸ್ ಸುಂಕ ಇಳಿಕೆ, ಆದರೂ ಬೆಲೆ ಇಳಿಕೆ ಸಾಧ್ಯತೆ ಕಡಿಮೆ
ಗಗನದತ್ತ ಮುಖ ಮಾಡಿರುವ ಚಿನ್ನ, ಬೆಳ್ಳಿ ದರಗಳನ್ನು ನಿಯಂತ್ರಿಸುವ ಸಂಬಂಧ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಸ್ಟಮ್ಸ್ ಸುಂಕ ಇಳಿಕೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
Published: 01st February 2021 02:09 PM | Last Updated: 01st February 2021 02:53 PM | A+A A-

ಚಿನ್ನದ ದರ (ಸಂಗ್ರಹ ಚಿತ್ರ)
ನವದೆಹಲಿ: ಗಗನದತ್ತ ಮುಖ ಮಾಡಿರುವ ಚಿನ್ನ, ಬೆಳ್ಳಿ ದರಗಳನ್ನು ನಿಯಂತ್ರಿಸುವ ಸಂಬಂಧ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಸ್ಟಮ್ಸ್ ಸುಂಕ ಇಳಿಕೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಸಂಸತ್ ನಲ್ಲಿ ಇಂದು ಕೇಂದ್ರ ಬಜೆಟ್ 2021ನ್ನು ಮಂಡಿಸಿದ ನಿರ್ಮಲಾ ಸೀತಾರಾಮನ್ ಅವರು, ಚಿನ್ನ ಮತ್ತು ಬೆಳ್ಳಿ ದರಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಕ್ರಮ ಕೈಗೊಂಡಿದೆ ಎಂದು ಹೇಳಿದರು. ಪ್ರಸ್ತುತ ಚಿನ್ನ ಮತ್ತು ಬೆಳ್ಳಿ ಮೇಲೆ ಪ್ರಸ್ತುತ ಶೇ.12.5 ರಷ್ಟು ಕಸ್ಟಮ್ಸ್ ಸುಂಕವನ್ನುವಿಧಿಸಲಾಗುತ್ತಿದ್ದು, ಇದನ್ನು ಕ್ರಮೇಣ 2019ನೇ ವರ್ಷದಲ್ಲಿದ್ದ ಕಸ್ಟಮ್ಸ್ ಸುಂಕ ಅಂದರೆ ಶೇ.10ಕ್ಕೆ ಇಳಿಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಶೀಘ್ರದಲ್ಲೇ ಸರ್ಕಾರ ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ ಸುಂಕವನ್ನು ತರ್ಕಬದ್ಧಗೊಳಿಸುತ್ತೇವೆ. ಅಕ್ಟೋಬರ್ 1, 2021ರಿಂದ ಚಿನ್ನ ಮತ್ತು ಬೆಳ್ಳಿಯ ಮೇಲಿನ ಪರಿಷ್ಕೃತ ಕಸ್ಟಮ್ಸ್ ಸುಂಕ ದೇಶದಲ್ಲಿ ಜಾರಿಗೆ ಬರಲಿದೆ ಎಂದು ತಮ್ಮ ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಈ ಹಿಂದೆ ಚಿನ್ನದ ಮೇಲಿನ ಹೆಚ್ಚಿನ ಆಮದು ಕಸ್ಟಮ್ಸ್ ಸುಂಕವನ್ನು ಕೇಂದ್ರ ಸರ್ಕಾರ ಕಡಿಮೆ ಮಾಡಿದರೆ, ಇದು ವ್ಯಾಪಾರ ಕೊರತೆಯನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು. ಅಂತೆಯೇ ಪ್ರಸ್ತುತ ಕೇಂದ್ರ ಸರ್ಕಾರ ಕಸ್ಟಮ್ಸ್ ಸುಂಕವನ್ನು ಕಡಿತ ಮಾಡಿದರೂ ಚಿನ್ನ ಮತ್ತು ಬೆಳ್ಳಿಯ ದರಗಳು ಇಳಿಕೆಯಾಗುವ ಸಾಧ್ಯತೆ ಕಡಿಮೆ ಇದೆ. ಚಿನ್ನದ ಬೇಡಿಕೆ ಮತ್ತು ಲಭ್ಯತೆ ಮೇಲೆ ಇದು ಅವಲಂಭಿಸಿದೆ ಎಂದು ಹೇಳಲಾಗುತ್ತಿದೆ.