2021ರ ಡಿಸೆಂಬರ್ ನಲ್ಲಿ ಭಾರತದ ಮೊಟ್ಟ ಮೊದಲ ಮಾನವ ರಹಿತ ಗಗನಯಾನ: ನಿರ್ಮಲಾ ಸೀತಾರಾಮನ್
2021ರ ಡಿಸೆಂಬರ್ ನಲ್ಲಿ ಭಾರತದ ಮೊಟ್ಟ ಮೊದಲ ಮಾನವ ರಹಿತ ಗಗನಯಾನ ಯೋಜನೆ ಆರಂಭವಾಗಲಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
Published: 02nd February 2021 01:20 PM | Last Updated: 02nd February 2021 02:02 PM | A+A A-

ಗಗನಯಾನ
ನವದೆಹಲಿ: 2021ರ ಡಿಸೆಂಬರ್ ನಲ್ಲಿ ಭಾರತದ ಮೊಟ್ಟ ಮೊದಲ ಮಾನವ ರಹಿತ ಗಗನಯಾನ ಯೋಜನೆ ಆರಂಭವಾಗಲಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಸೋಮವಾರ ಕೇಂದ್ರ ಬಜೆಟ್ 2021 ಮಂಡನೆ ವೇಳೆ ಮಾತನಾಡಿದ ನಿರ್ಮಲಾ ಸೀತಾರಾಮನ್ ಅವರು, 'ಇಸ್ರೋ ಕೈಗೊಳ್ಳಲು ಉದ್ದೇಶಿಸಿರುವ ಮಹತ್ವಾಕಾಂಕ್ಷೆಯ ದೇಶದ ಪ್ರಪ್ರಥಮ ಮಾನವ ಸಹಿತ ಗಗನಯಾನ ಯೋಜನೆಯ ಭಾಗವಾಗಿ ಭಾರತದ ನಾಲ್ಕು ಗಗನಯಾನಿಗಳು ಇದೀಗ ರಷ್ಯಾದಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಈ ವರ್ಷದ ಡಿಸೆಂಬರ್‌ನಲ್ಲಿ ಪ್ರಾಯೋಗಿಕವಾಗಿ ಮಾನವ ರಹಿತ ಗಗನಯಾನವನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಈ ಯೋಜನೆಗೆ 2020ರ ಡಿಸೆಂಬರ್ ನಲ್ಲೇ ಚಾಲನೆ ನೀಡಬೇಕಿತ್ತು. ಆದರೆ ಕೊರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ಈ ಯೋಜನೆ ಒಂದು ವರ್ಷ ಮುಂದೂಡಲಾಗಿದೆ. ಗಗನಯಾನ ಯೋಜನೆಗೆ 10,000 ಕೋಟಿ ರೂಗಳನ್ನು ಮೀಸಲಿಡಲಾಗಿದ್ದು, 2022ರ ವೇಳೆಗೆ ಭಾರತದ ಮೂರು ಗಗನಯಾನಿಗಳನ್ನು ಬಾಹ್ಯಾಕಾಶಕ್ಕೆ ಐದರಿಂದ ದಿನಗಳ ಕಳುಹಿಸಿ ಅಧ್ಯಯನ ನಡೆಸಲಾಗುತ್ತದೆ ಎಂದು ಹೇಳಿದರು.
ಇನ್ನು 2022ಕ್ಕೆ ಭಾರತ 75ನೇ ಸ್ವಾತಂತ್ಕ್ಯ ದಿನಾಚರಣೆ ಆಚರಿಸಲಿದ್ದು, ಈ ಮಹತ್ವದ ವರ್ಷದಲ್ಲೇ ಭಾರತದ ಮಹತ್ವಾಕಾಂಕ್ಷಿ ಗಗನಯಾನ ಕೂಡ ಆರಂಭವಾಗಲಿದೆ. ಈಗಾಗಲೇ ಇದೇ ವಿಚಾರವಾಗಿ ಇಸ್ರೋ ಕೂಡ ಕಾರ್ಯನಿರತವಾಗಿದ್ದು, ಮೊದಲು ಮಾನವ ರಹಿತ ಗಗನಯಾನ ಯೋಜನೆಯನ್ನು 2020ರ ಡಿಸೆಂಬರ್ ನಲ್ಲಿ ಚಾಲನೆ ಮಾಡಲು ಉದ್ದೇಶಿಸಲಾಗಿತ್ತು. ಎರಡನೇ ಮಾನವ ರಹಿತ ಯೋಜನೆಯನ್ನು 2021ರ ಜೂನ್ ನಲ್ಲಿ ಯೋಜಿಸಲು ಉದ್ದೇಶಿಸಲಾಗಿತ್ತು. ಯೋಜನೆಯ ಪ್ರಮುಖ ಮತ್ತು ನಿರ್ಣಾಯಕ ಮಾನವ ಸಹಿತ ಗಗನಯಾನ ಯೋಜನೆಯನ್ನು ಆರು ತಿಂಗಳ ಬಳಿಕ ಅಂದರೆ 2021ರ ಡಿಸೆಂಬರ್ ನಲ್ಲಿ ಚಾಲನೆ ನೀಡಲು ಯೋಜಿಸಲಾಗಿತ್ತು. ಇದೀಗ ಈ ಯೋಜನೆಯ ಡೆಡ್ ಲೈನ್ 2022ಕ್ಕೆ ಮುಂದೂಡಿದೆ.
ಕೇವಲ ಗಗನಯಾನ ಮಾತ್ರವಲ್ಲದೇ ಚಂದ್ರಯಾನ-3 ಸೇರಿದಂತೆ ಇಸ್ರೋದ ಬಹಳಷ್ಟು ಯೋಜನೆಗಳೂ ಕೂಡ ಕೊರೋನಾ ಸಾಂಕ್ರಾಮಿಕದಿಂದಾಗಿ ಮುಂದೂಡಲ್ಪಟ್ಟಿವೆ.