ಕೇಂದ್ರ ಬಜೆಟ್ 2022: ಕಿಸಾನ್ ಡ್ರೋಣ್, ನೈಸರ್ಗಿಕ ಕೃಷಿಗೆ ಉತ್ತೇಜನ, 2.37 ಲಕ್ಷ ಕೋಟಿ ಎಂಎಸ್ ಪಿ, ಕೃಷಿ ಕ್ಷೇತ್ರದ ಘೋಷಣೆಗಳು ಇಂತಿವೆ...
ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಕೃಷಿ ಕ್ಷೇತ್ರದ ಆಧುನೀಕರಣ, ಬಲವರ್ಧನೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೆಚ್ಚಿನ ಆದ್ಯತೆ ನೀಡಿದ್ದಾರೆ.
Published: 01st February 2022 03:20 PM | Last Updated: 01st February 2022 03:42 PM | A+A A-

(ಸಾಂಕೇತಿಕ ಚಿತ್ರ)
ನವದೆಹಲಿ: ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಕೃಷಿ ಕ್ಷೇತ್ರದ ಆಧುನೀಕರಣ, ಬಲವರ್ಧನೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೆಚ್ಚಿನ ಆದ್ಯತೆ ನೀಡಿದ್ದು ಸರ್ಕಾರ ಎಂಎಸ್ ಪಿ ಕಾರ್ಯಾಚರಣೆಗಳಲ್ಲಿ ಗೋಧಿ ಹಾಗೂ ಭತ್ತದ ಖರೀದಿಗೆ 2.37 ಲಕ್ಷ ಕೋಟಿ ರೂಪಾಯಿ ಸರ್ಕಾರ ಪಾವತಿಸಲಿದೆ ಎಂದು ಹೇಳಿದ್ದಾರೆ.
ಬಜೆಟ್ ನಲ್ಲಿ 2022-23 ನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಿಸಲಾಗಿದ್ದು, ಕೇಂದ್ರ ಸರ್ಕಾರ ಕಿಸಾನ್ ಡ್ರೋಣ್, ರಾಸಾಯನಿಕ ಮುಕ್ತ ಕೃಷಿಗೆ ಉತ್ತೇಜನ, ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ, ದೇಶಾದ್ಯಂತ ರೈತರಿಗೆ ಹೈಟೆಕ್ ಸೇವೆಗಳನ್ನು ಉತ್ತೇಜಿಸಲಾಗುವುದು ಎಂದು ಸೀತಾರಾಮನ್ ಘೋಷಿಸಿದ್ದಾರೆ.
ಸಮಗ್ರ ಅಭಿವೃದ್ಧಿ ಸರ್ಕಾರದ 4 ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದ್ದು, ಇದರ ಭಾಗವಾಗಿ ಬೆಳೆ ಸಮೀಕ್ಷೆಗಳಿಗೆ ಸರ್ಕಾರ ಕಿಸಾನ್ ಡ್ರೋಣ್ ಗಳನ್ನು ಉತ್ತೇಜಿಸಲಿದೆ. ಭೂ ದಾಖಲೆಗಳ ಡಿಜಿಟಲೀಕರಣ ಮಾಡುವುದರ ಜೊತೆಗೆ ಕೀಟನಾಶಕಗಳ ಸಿಂಪರಣೆಯನ್ನೂ ಆಧುನೀಕರಣಗೊಳಿಸಲಾಗುವುದು ಎಂದು ಸೀತಾರಾಮನ್ ತಿಳಿಸಿದ್ದಾರೆ.
ಕೃಷಿ ಸಂಬಂಧಿತ ಸ್ಟಾರ್ಟ್ ಅಪ್ ಹಾಗೂ ಗ್ರಾಮೀಣ ಉದ್ದಿಮೆಗಳಿಗೆ ನಬಾರ್ಡ್ ಮೂಲಕ ಆರ್ಥಿಕ ನೆರವು ನೀಡುವುದಕ್ಕಾಗಿ ಮಿಶ್ರ ಬಂಡವಾಳವನ್ನೊಳಗೊಂಡ ನಿಧಿಯನ್ನು ಸರ್ಕಾರ ಸ್ಥಾಪಿಸಲಿದೆ ಎಂದು ವಿತ್ತ ಸಚಿವರು ಬಜೆಟ್ ನಲ್ಲಿ ಘೋಷಿಸಿದ್ದಾರೆ.
ರೈತ-ಉತ್ಪಾದಕರ ಸಂಸ್ಥೆಗಳಿಗೆ (FPOs) ಅಂತರ-ಪ್ರದೇಶ ಬೆಂಬಲ, ರೈತರಿಗೆ ಬಾಡಿಗೆ ಆಧಾರದಲ್ಲಿ ಯಂತ್ರಗಳನ್ನು ನೀಡುವುದು ಈ ಸ್ಟಾರ್ಟ್ ಅಪ್ ಗಳ ಚಟುವಟಿಕೆಗಳಾಗಿರಲಿವೆ.
ದೇಶಾದ್ಯಂತ ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿಗೆ ಉತ್ತೇಜನ ನೀಡಲಾಗುತ್ತದೆ. ಮೊದಲ ಹಂತದಲ್ಲಿ ಗಂಗಾ ನದಿಯ ಪ್ರದೇಶದಲ್ಲಿ ಈ ಯೋಜನೆ ಜಾರಿಗೆ ಬರಲಿದೆ ಎಂದು ಸೀತಾರಾಮನ್ ಹೇಳಿದ್ದಾರೆ.
ನೈಸರ್ಗಿಕ, ಶೂನ್ಯ ಬಜೆಟ್ ಹಾಗೂ ಸಾವಯವ ಕೃಷಿ, ಆಧುನಿಕ ಕೃಷಿ, ಮೌಲ್ಯ ವರ್ಧನೆ ಹಾಗೂ ಮ್ಯಾನೇಜ್ಮೆಂಟ್ ನ ಅಗತ್ಯತೆಗಳಿಗೆ ಅನುಗುಣವಾಗಿ ಕೃಷಿ ವಿವಿಗಳಲ್ಲಿ ಪಠ್ಯ ಕ್ರಮಗಳನ್ನು ಬದಲಾವಣೆ ಮಾಡುವುದಕ್ಕೆ ರಾಜ್ಯಗಳಿಗೆ ಉತ್ತೇಜನ ನೀಡಲಾಗುವುದು ಎಂದು ಸೀತಾರಾಮನ್ ತಿಳಿಸಿದ್ದಾರೆ.
ಅಗ್ರೋ ಫಾರೆಸ್ಟ್ರಿ ಹಾಗೂ ಖಾಸಗಿ ಫೋರೆಸ್ಟ್ರಿಯನ್ನು ಉತ್ತೇಜಿಸುವುದಕ್ಕೆ ಶಾಸಕಾಂಗ ಬದಲಾವಣೆಗಳನ್ನು ಉತ್ತೇಜಿಸಲಾಗುವುದು ಎಸ್ ಸಿ/ಎಸ್ ಟಿ ರೈತರಿಗೆ ಆರ್ಥಿಕ ನೆರವು ನೀಡುವುದು ಬಜೆಟ್ ನಲ್ಲಿ ಕೃಷಿಗೆ ಸಂಬಂಧಿಸಿದ ಪ್ರಮುಖ ಘೋಷಣೆಗಳಾಗಿವೆ.