ಬಡ್ಡಿ ದರಗಳ ಇಳಿತ: ಸರ್ವರೋಗ ಔಷಧಿ?

ಬಡ್ಡಿ ದರಗಳ ಇಳಿತ: ಸರ್ವರೋಗ ಔಷಧಿ?

ಸರ್ಕಾರದ ಆರ್ಥಿಕ ಮಂತ್ರಾಲಯಗಳು, ಕಾರ್ಪೊರೇಟ್ ವಲಯದ ವಕ್ತಾರರ ಮಾತನ್ನು ಅಕ್ಷರಶಃ ನಂಬುವುದಾದರೆ, ರಿಸರ್ವ್ ಬ್ಯಾಂಕ್ ಬಡ್ಡಿ ದರಗಳನ್ನು ಇಳಿಸಿದರೆ ಮಾತ್ರ ಪ್ರಗತಿಯ ವೇಗವನ್ನು ಹೆಚ್ಚಿಸಲು ಬೇಕಾದ ಅಧಿಕ ಬಂಡವಾಳವನ್ನು ಹೂಡುವುದು ಸಾಧ್ಯ. ಅದರ ಪರಿಣಾಮ ಆರ್ಥಿಕ ವ್ಯವಸ್ಥೆಯ ಮೇಲೂ ಆಗಲೇಬೇಕು. ಜನ ಸಂತುಷ್ಟರಾಗುತ್ತಾರೆ.
ಕಳೆದ ಒಂದು ವರ್ಷದಿಂದಲೂ, ಈ ಹೇಳಿಕೆ ಒಂದು ಮಹಾಮಂತ್ರದ ರೀತಿಯಲ್ಲೇ ಮೊಳಗುತ್ತಿದೆ. ಆದರೆ ಇದೆಷ್ಟರ ಮಟ್ಟಿಗೆ ಸರಿ? ಪ್ರಗತಿಯ ವೇಗ ಕುಂಠಿತವಾಗಿರುವುದಕ್ಕೆ ರಿಸರ್ವ್ ಬ್ಯಾಂಕಿನ ಹಣ ನೀತಿ ಎಷ್ಟರ ಮಟ್ಟಿಗೆ ಹೊಣೆ ಎನ್ನುವ ಪ್ರಶ್ನೆಯ ಗಂಭೀರ ಅಧ್ಯಯನ ಆಧರಿತ ವರದಿಗಳನ್ನು ಗಮನಿಸಿದರೆ, ಈ ವಾದದಲ್ಲಿ ಸ್ವಲ್ಪ ನಿಜ, ಹೆಚ್ಚು ಸತ್ವವಿಲ್ಲ ಎನಿಸುತ್ತಿದೆ.
ಅಬ್ಬಬ್ಬಾ ಎಂದರೆ ಬಡ್ಡಿದರಗಳನ್ನು ರಿಸರ್ವ್ ಬ್ಯಾಂಕ್ ಎಷ್ಟರ ಮಟ್ಟಿಗೆ ಇಳಿಸಬಹುದು? 0.25 ಶೇಕಡಾ, ಅಷ್ಟರಿಂದ ಅದೆಷ್ಟು ಪ್ರಮಾಣದ ಬಂಡವಾಳ ಹರಿದು ಬರಬಹುದು?
ಬಾಂಡುಗಳ ಹೂಡಿಕೆ ಆಗಬೇಕಾದ್ದು ವಸ್ತುಗಳ ತಯಾರಿಕಾ ವಲಯದಲ್ಲಿ. ಸೇವಾ ಸೌಲಭ್ಯಗಳ ವಲಯದಲ್ಲಿ ಅಲ್ಲ. ತಯಾರಿಕಾ ವಲಯದಲ್ಲಿ ಉತ್ಪಾದನೆ ಶಕ್ತಿಯನ್ನು ಹೆಚ್ಚಿಸುವುದಕ್ಕೆ ಇರುವ ಅಡೆತಡೆಗಳನ್ನು ಸರ್ಕಾರ ಇನ್ನೂ ತೆಗೆದಿಲ್ಲ.
ಕಾರ್ಖಾನೆಗಳ ವಿಸ್ತರಣೆಗೆ ಭೂಮಿಯೇ ಸಿಗುತ್ತಿಲ್ಲ, ಕಾಯಿದೆಯ ಅಡ್ಡಿ ಇದೆ. ಬಡ್ಡಿ ದರ ಇಳಿಯಬೇಕಾದರೆ ಇನ್‌ಫ್ಲೇಷನ್ ದರ ಇಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಆದರೆ ಸರ್ಕಾರ ರೈಲ್ವೆ ದರ ಏರಿಸುತ್ತದೆ, ಪೆಟ್ರೋಲಿಯಂ ಉತ್ಪನ್ನಗಳ ದರ ಹೆಚ್ಚಿಸಲಿದೆ, ಹಾಲಿನ ದರವೂ ಹೆಚ್ಚಲಿದೆ. ಇನ್‌ಫ್ಲೇಷನ್ ದರವನ್ನು ಈಗ ಸ್ವಲ್ಪ ಕಡಿಮೆ ತೋರಿಸಿದರೂ, ಈಗಲೂ ಅದು ಮೇಲ್ಮಟ್ಟದಲ್ಲೇ ಇದೆ.
ರಿಸರ್ವ್ ಬ್ಯಾಂಕ್ ಗವರ್ನರ್ ದುವ್ಯೂರಿ ಸುಬ್ಬರಾಯರು ಈ ಮಾತು ಹೇಳಿದ ಕೂಡಲೇ ಮುಂಬೈ ಸ್ಟಾಕ್ ಎಕ್ಸ್‌ಛೇಂಜ್‌ನ ಸಂವೇದಿ ಸೂಚ್ಯಂಕ- ಸೆನ್ಸೆಕ್ಸ್ 20,000 ಅಂಕಿಯ ಗೆರೆಯನ್ನು ಚುಂಬಿಸಲು ಹೊರಟಿದ್ದು, ಕುಸಿದು ಬಿದ್ದಿತ್ತು. ಕಾರ್ಪೊರೇಟ್ ವಲಯ, ಸರ್ಕಾರದ ನಾಯಕರು ವೆಚ್ಚವನ್ನು ಕಡಿಮೆ ಮಾಡುವ ಮಾತೇ ಆಡುತ್ತಿಲ್ಲ. ಅದನ್ನು ಬೆಂಬಲಿಸುವ ಅಂಕಿ-ಅಂಶಗಳಿಲ್ಲ, ಜನವರಿ 29 ರಿಸರ್ವ್ ಬ್ಯಾಂಕಿನ ಹಣ ನೀತಿ ಪ್ರಕಟ.

ಸಾಲ ಮನ್ನಾ- ದೋಷ
ಈಚಿನ ದಿನಗಳಲ್ಲಿ ಸರ್ಕಾರ ಬಡಜನರ ಒಳ್ಳೆಯದಕ್ಕೆಂದು ಕೈಗೊಂಡ ಕಲ್ಯಾಣ ಕಾರ್ಯಕ್ರಮಗಳಲ್ಲಿ ಸತ್ಪಾತ್ರರಿಗೆ ನೆರವು ಸಿಗುವುದರಲ್ಲಿ ಯಾರ ತಕರಾರೂ ಇರಬಾರದು. ಆದರೆ ಆ ನೆರವು ಅಪಾತ್ರರಿಗೂ ಸಿಗುವಂತಾದರೆ ಸರ್ಕಾರದ ಉದ್ದೇಶವೇ ಮಣ್ಣು ಪಾಲಾಗುತ್ತದೆ.
ಅದಕ್ಕೊಂದು ತಾಜಾ ಉದಾಹರಣೆ ಎಂದರೆ 2008ರ ಬಜೆಟ್‌ನಲ್ಲಿ ವಿತ್ತ ಮಂತ್ರಿ ಚಿದಂಬರಂ, ಕೃಷಿಪರ ಕೃಷಿ ಸಾಲವನ್ನು (ಬ್ಯಾಂಕ್‌ಗಳದ್ದು) ಸಂಪೂರ್ಣವಾಗಿ ಮನ್ನ ಮಾಡಿದ್ದು, ಈ ಯೋಜನೆಗೆ 60,000 ಕೋಟಿ ರುಪಾಯಿಗಳ ವೆಚ್ಚವಾಗಿದೆ. ಇಲ್ಲಿ ಈ ಯೋಜನೆಯ ವ್ಯಾಪ್ತಿಗೆ ಒಳಪಡದೇ ಇರುವ ಅಪಾತ್ರರಿಗೂ ಸೌಲಭ್ಯ ಸಿಕ್ಕಿರುವುದನ್ನು ಆಡಿಟರ್ ಜನರಲ್‌ರ ವಿಶೇಷ ತಂಡ ಪತ್ತೆ ಹಚ್ಚಿದೆ. ಅನೇಕ ಪ್ರಕರಣಗಳಲ್ಲಿ ಬ್ಯಾಂಕ್‌ಗಳಲ್ಲೇ ಸಾಲದ ದಾಖಲೆಗಳನ್ನೇ ತಿದ್ದಲಾಗಿದೆ ಎಂದು ಆಡಿಟ್ ವರದಿ ಹೇಳುತ್ತದೆ.
ಕೃಷಿ ಸಾಲ ಮನ್ನಾ ಯೋಜನೆಯನ್ನು ಜಾರಿಗೊಳಿಸಿದ್ದು ಸರ್ಕಾರಿ ಅಧಿಕಾರಿಗಳೇ. ಅಧಿಕಾರಿಗಳು ಕೊಟ್ಟ ಮಾಹಿತಿಯನ್ನು ಬ್ಯಾಂಕ್‌ಗಳು ಒಪ್ಪಿವೆ. ಕೆಲವು ಪ್ರಕರಣಗಳಲ್ಲಿ ಬ್ಯಾಂಕ್‌ಗಳ ದಾಖಲೆಗಳಲ್ಲೂ ಚಿತ್ತಾಗಿ ಸಂಖ್ಯೆಯೇ ಕಾಣದಂತೆ ಆಗಿದೆ. ಸರ್ಕಾರಕ್ಕೆ ಆಡಿಟ್ ವರದಿಯ ವಿವರಗಳನ್ನು ಕಳಿಸಿ ಕೊಡಲಾಗಿದೆ. ಉಳಿದಿದ್ದು ಸರ್ಕಾರಕ್ಕೇ ಬಿಟ್ಟಿದ್ದು.
ಕೊನೆ ಮಾತು: ರಾಜ್ಯ ಸರ್ಕಾರ ಹಾಲಿ ಮತ್ತು ಮಾಜಿ ನಾಯಕರು (ಮುಖ್ಯಮಂತ್ರಿಗಳು) ಕರ್ನಾಟಕ ರಾಜ್ಯ ದೇಶದಲ್ಲೇ ಮೊದಲು ಅಥವಾ ಎರಡನೇ ಸ್ಥಾನದಲ್ಲಿದೆ ಎಂದು ಆಗಾಗ ಹೇಳುತ್ತಿದ್ದಾರೆ. ಯೋಜನಾ ಆಯೋಗದ ಅಧಿಕೃತ ದಾಖಲೆಗಳನ್ನು ನೋಡಿದರೆ, ಯಾವ ವಿಷಯದಲ್ಲೇ ಆದರೂ, ದೇಶದಲ್ಲಿನ ಮೊದಲ ಐದು ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟದ ಹೆಸರು ಕಾಣಿಸುತ್ತಿಲ್ಲ.

-ಸತ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com