ಬ್ಯಾಂಕ್ ಗಳ ವಿಲೀನ; ನಿಮ್ಮ ಖಾತೆಗಳ ಮೇಲೆ ಬೀರುವ ಪರಿಣಾಮಗಳೇನು? ನೀವು ಮಾಡಬೇಕಾದ ಕೆಲಸವೇನು?

ಎಸ್ ಬಿಐ ಬೃಹತ್ ವಿಲೀನದ ಬಳಿಕ ಇದೀಗ ಕೇಂದ್ರ ಸರ್ಕಾರ ಮೂರನೇ ಸುತ್ತಿನ ಬ್ಯಾಂಕ್‌ ವಿಲೀನ ಘೋಷಣೆ ಮಾಡಿದೆ. ಈ ಮೂಲಕ 27 ಸಾರ್ವಜನಿಕ ಬ್ಯಾಂಕುಗಳ ಜಾಗದಲ್ಲಿ ಇನ್ನು ಮುಂದೆ ಕೇವಲ 12 ಬ್ಯಾಂಕ್ ಗಳು ಕಾರ್ಯಚರಿಸಲಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಎಸ್ ಬಿಐ ಬೃಹತ್ ವಿಲೀನದ ಬಳಿಕ ಇದೀಗ ಕೇಂದ್ರ ಸರ್ಕಾರ ಮೂರನೇ ಸುತ್ತಿನ ಬ್ಯಾಂಕ್‌ ವಿಲೀನ ಘೋಷಣೆ ಮಾಡಿದೆ. ಈ ಮೂಲಕ 27 ಸಾರ್ವಜನಿಕ ಬ್ಯಾಂಕುಗಳ ಜಾಗದಲ್ಲಿ ಇನ್ನು ಮುಂದೆ ಕೇವಲ 12 ಬ್ಯಾಂಕ್ ಗಳು ಕಾರ್ಯಚರಿಸಲಿವೆ.

ಈ ಹಿಂದೆ ಕೇಂದ್ರ ಸರಕಾರ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್‌ ಹೈದರಾಬಾದ್‌ ಅನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಜೊತೆ ವಿಲೀನ ಮಾಡಿತ್ತು. ಎರಡನೇ ಸುತ್ತಿನಲ್ಲಿ ವಿಜಯ ಬ್ಯಾಂಕ್‌ ಮತ್ತು ದೇನಾ ಬ್ಯಾಂಕ್‌ನ್ನು ಬ್ಯಾಂಕ್‌ ಆಫ್‌ ಬರೋಡದಲ್ಲಿ ವಿಲೀನಗೊಳಿಸಿತ್ತು. ಇದೀಗ ಮೂರನೇ ಸುತ್ತಿನಲ್ಲಿ ಹಲವು ಬ್ಯಾಂಕ್‌ ಗಳ ವಿಲೀನವನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. 

ಒರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌ ಮತ್ತು ಯುನೈಟೆಡ್‌ ಬ್ಯಾಂಕ್‌ಗಳು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ನೊಂದಿಗೆ ವಿಲೀನಗೊಳ್ಳಲಿದ್ದು, ಅಂತೆಯೇ ಸಿಂಡಿಕೇಟ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌ನೊಂದಿಗೆ ವಿಲೀನಗೊಳ್ಳಲಿದ್ದರೆ, ಕಾರ್ಪೊರೇಷನ್‌ ಬ್ಯಾಂಕ್‌ ಮತ್ತು ಆಂಧ್ರಾ ಬ್ಯಾಂಕ್‌ ಗಳು ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದೊಳಕ್ಕೆ ಸೇರಲಿವೆ. ಇದೇ ವೇಳೆ ಅಲಹಾಬಾದ್‌ ಬ್ಯಾಂಕ್‌ ಇಂಡಿಯನ್‌ ಬ್ಯಾಂಕ್‌ನಲ್ಲಿ ವಿಲೀನಗೊಳ್ಳಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರಕಟಿಸಿದ್ದಾರೆ.

ಹಾಗಾದರೇ ಈ ಬ್ಯಾಂಕ್ ಗಳ ವಿಲೀನ ಗ್ರಾಹಕರ ಮೇಲೆ ಪರಿಣಾಮ ಬೀರುತ್ತದೆಯೇ.. ಗ್ರಾಹಕರು ಏನೆಲ್ಲಾ ಮುಂಜಾಗ್ರತೆ ಕ್ರಮ ವಹಿಸಬೇಕು. ಇಲ್ಲಿದೆ ಮಾಹಿತಿ

  1. ಸಾಮಾನ್ಯವಾಗಿ ಬ್ಯಾಂಕ್ ಗಳ ವಿಲೀನವಾದಾಗ ವಿವಿಧ ಬ್ಯಾಂಕ್ ಗಳ ಖಾತೆದಾರರ ಖಾತೆ ಸಂಖ್ಯೆ ಬದಲಾವಣೆಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಗ್ರಾಹಕರು ವೀಲನ ಪ್ರಕ್ರಿಯೆ ಬಳಿಕ ತಮ್ಮ  ತಮ್ಮ ಬ್ಯಾಂಕ್ ಗಳಿಗೆ ತೆರಳಿ ಈ ಕುರಿತು ಮಾಹಿತಿ ಪಡೆಯಬೇಕು. ಬ್ಯಾಂಕ್ ಖಾತೆ ಬದಲಾವಣೆಯ ಕುರಿತು ಬ್ಯಾಂಕ್ ಗಳ ತಮ್ಮ ಖಾತೆದಾರರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಮೆಸೇಜ್ ಮಾಡುತ್ತವೆಯಾದರೂ ಖಾತೆಯ ಸ್ಥಿತಿಗತಿ ತಿಳಿಯುವುದು ಗ್ರಾಹಕರ ಜವಾಬ್ದಾರಿಯಾಗಿರುತ್ತದೆ.
  2. ಇನ್ನು ಬ್ಯಾಂಕ್ ಗಳ ವಿಲೀನದ ಬಳಿಕ ಬ್ಯಾಂಕ್ ಗಳ ಬ್ರಾಂಚ್ ಗಳ ಐಎಫ್‌ಎಸ್‌ಸಿ ಕೋಡ್‌ ಕೂಡ ಬದಲಾವಣೆಯಾಗುವ ಸಾಧ್ಯತೆ ಇರುತ್ತದೆ. ಸದ್ಯ ನೀವು ಹಲವು ಹಣಕಾಸು ವ್ಯವಹಾರಗಳಿಗೆ ನಿಮ್ಮ ಖಾತೆ ಸಂಖ್ಯೆ ಮತ್ತು ಐಎಫ್‌ಎಸ್‌ಸಿ ಕೋಡ್‌ಗಳನ್ನು ನೀಡಿರುತ್ತೀರಿ. ಸಂಬಳಕ್ಕೆ, ಬಿಲ್‌ಗಳ ಅಟೋ ಕ್ರೆಡಿಟ್‌ಗೆಲ್ಲ ಇದನ್ನೇ ನೀಡಿರುತ್ತೀರಿ. ಹೊಸ ಬ್ಯಾಂಕ್‌ನ ಜೊತೆ ನಿಮ್ಮ ಹಾಲಿ ಬ್ಯಾಂಕ್‌ ಖಾತೆ ಯಾವುದೇ ಬದಲಾವಣೆ ಆಗದೇ ವಿಲೀನವಾದಲ್ಲಿ ನೀವು ನೀಡಿದ ಖಾತೆ ಮತ್ತು ಐಎಫ್‌ಎಸ್‌ಸಿ ವಿವರಗಳನ್ನು ಬದಲಾವಣೆ ಮಾಡಬೇಕಾಗಿಲ್ಲ. ಇಲ್ಲದಿದ್ದಲ್ಲಿ ಒಂದಷ್ಟು ಕಿರಿಕಿರಿ ಅನುಭವಿಸಬೇಕಾಗುತ್ತದೆ.
  3. ಬ್ಯಾಂಕ್ ವಿಲೀನದ ಬಳಿಕ ಗ್ರಾಹಕರು ಮೊದಲಿಗೆ ಚೆಕ್‌ ಪುಸ್ತಕ ಬದಲಾಯಿಸಲು ಸಿದ್ಧರಾಗಬೇಕು. ಸದ್ಯ ಇರುವ ಚೆಕ್‌ ಪುಸ್ತಕಗಳು ಕೆಲವು ಸಮಯದವರೆಗೆ ಮಾನ್ಯತೆ ಹೊಂದಿರಲಿವೆ. ಆದರೆ ನಂತರದಲ್ಲಿ ಯಾವ ಬ್ಯಾಂಕ್‌ನ ಜೊತೆ ವಿಲೀನಗೊಳ್ಳಲಿದೆಯೋ ಅದೇ ಬ್ಯಾಂಕ್‌ನ ಚೆಕ್‌ ಪುಸ್ತಕಕ್ಕೆ ಬದಲಾಯಿಸಬೇಕಾಗುತ್ತದೆ.
  4. ಬ್ಯಾಂಕ್‌ನಿಂದ ನೀವು ಪಡೆದುಕೊಂಡ ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ಗಳನ್ನು ಹೊಸ ಬ್ಯಾಂಕ್‌ನ ಕಾರ್ಡ್‌ಗಳೊಂದಿಗೆ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಯಾವುದೇ ತೊಂದರೆಯಾಗದಿರಲು ಒಂದಷ್ಟು ಕಾಲ ಹಳೇ ಕಾರ್ಡ್‌ಗಳಿಗೆ ಮಾನ್ಯತೆ ಮುಂದುವರಿಸಿರುತ್ತಾರೆ. ಆ ಬಳಿಕ ನೂತನ ಬ್ಯಾಂಕ್ ನ ಕಾರ್ಡ್ ಗಳನ್ನೇ ಬಳಕೆ ಮಾಡಬೇಕು. ಹಳೆಯ ಕಾರ್ಡ್ ಗಳು ತಾನೇ ತಾನಾಗಿ ಡಿಯಾಕ್ಟಿವೇಟ್ ಆಗುತ್ತದೆ.
  5. ಫಿಕ್ಸೆಡ್‌ ಡೆಪಾಸಿಟ್‌ ಗಳನ್ನು ಇಟ್ಟಿದ್ದರೆ ಇವನ್ನು ಹೊಸ ಬ್ಯಾಂಕ್‌ಗೆ ಬದಲಾಯಿಸಬೇಕಿರುವುದರಿಂದ ಒಂದಷ್ಟು ಕಾಗದ ಪತ್ರಗಳ ಕೆಲಸವನ್ನು ಮುಗಿಸಬೇಕಾಗುತ್ತದೆ. ಉಳಿದ ಕೆಲವು ಬ್ಯಾಂಕ್‌ ವ್ಯವಹಾರಗಳಿಗೂ ಇದು ಅನ್ವಯವಾಗಬಹುದು. ಇನ್ನು ವಿಲೀನಗೊಳ್ಳಲಿರುವ ಬ್ಯಾಂಕ್‌ನಲ್ಲಿ ನಿಮ್ಮ ಸಾಲಗಳಿದ್ದರೆ ಅವುಗಳ ಭವಿಷ್ಯದ ಬಡ್ಡಿದರಗಳು ಏನಾಗುತ್ತವೆ ಎಂಬುದರ ಬಗ್ಗೆ ಸ್ಪಷ್ಟನೆ ಇಲ್ಲ. ಸಾಲದ ಬಡ್ಡಿ ದರಗಳು ಬ್ಯಾಂಕ್‌ನಿಂದ ಬ್ಯಾಂಕ್‌ಗೆ ವಿಭಿನ್ನವಾಗಿರುತ್ತವೆ.
  6. ಈ ಬ್ಯಾಂಕ್‌ಗಳ ಮೇಲೆ ಶೇರು ಹೂಡಿಕೆ ಮಾಡಿದ್ದರೆ, ಅಂತಹ ವ್ಯಕ್ತಿಗಳ ಮೇಲೂ ಈ ವಿಲೀನ ಪ್ರಕ್ರಿಯೆ ಪರಿಣಾಮ ಬೀರಲಿದೆ. 

ಬ್ಯಾಂಕ್ ಗಳ ವಿಲೀನದಿಂದ ಒಂದೇ ಲಾಭವೆಂದರೆ ಬ್ಯಾಂಕ್‌ ಶಾಖೆಗಳ ಸಂಖ್ಯೆ ಹೆಚ್ಚಾಗುತ್ತದೆ. ಹಾಗಾಗಿ ಬ್ಯಾಂಕಿಂಗ್‌ ಸಂಬಂಧಿ ಕೆಲಸಗಳು ಸ್ವಲ್ಪ ಸುಲಭವಾಗುತ್ತವೆ. ಉದಾಹರಣೆಗೆ ಈ ವಿಲೀನದೊಂದಿಗೆ ಪಿಎನ್‌ಬಿ ಬ್ಯಾಂಕ್‌ ಶಾಖೆಗಳ ಸಂಖ್ಯೆ 11,437ಕ್ಕೆ ಏರಿಕೆಯಾಗಲಿದ್ದು, ಸಾರ್ವಜನಿಕ ರಂಗದ ಎರಡನೇ ಅತೀ ದೊಡ್ಡ ಬ್ಯಾಂಕ್‌ ಎಂಬ ಹೆಗ್ಗಳಿಕೆ ಪಡೆಯಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com