ಹೆಚ್ಚೆಚ್ಚು ತೆರಿಗೆ ಸಂಗ್ರಹವಾದರೆ ತೆರಿಗೆ ಪ್ರಮಾಣ ಕಡಿತ: ನಿರ್ಮಲಾ ಸೀತಾರಾಮನ್

ತೆರಿಗೆ ಸುಧಾರಣೆ ಇಂದಿನ ತುರ್ತು ಅಗತ್ಯವಾಗಿದೆ. ಜಿಎಸ್‌ಟಿ ಪದ್ಧತಿ ತಾಂತ್ರಿಕತೆಯನ್ನು ಅವಲಂಬಿಸಿದ್ದು, ಎರಡು ತೆರಿಗೆ ಹಾಗೂ ಇತರ ಹಲವು ತೆರಿಗೆ ಬದಲಿಗೆ ಒಂದೇ ತೆರಿಗೆ ನೀತಿಯನ್ನು ಇದು ಒಳಗೊಂಡಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Published: 05th October 2019 01:29 PM  |   Last Updated: 05th October 2019 02:17 PM   |  A+A-


Nirmala Sitharaman

ನಿರ್ಮಲಾ ಸೀತಾರಾಮನ್

Posted By : Sumana Upadhyaya
Source : UNI

ಧಾರವಾಡ: ತೆರಿಗೆ ಸುಧಾರಣೆ ಇಂದಿನ ತುರ್ತು ಅಗತ್ಯವಾಗಿದೆ. ಜಿಎಸ್‌ಟಿ ಪದ್ಧತಿ ತಾಂತ್ರಿಕತೆಯನ್ನು ಅವಲಂಬಿಸಿದ್ದು, ಎರಡು ತೆರಿಗೆ ಹಾಗೂ ಇತರ ಹಲವು ತೆರಿಗೆ ಬದಲಿಗೆ ಒಂದೇ ತೆರಿಗೆ ನೀತಿಯನ್ನು ಇದು ಒಳಗೊಂಡಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಅವರು ಇಂದು ನಗರದಲ್ಲಿ ಹಮ್ಮಿಕೊಂಡಿದ್ದ ತೆರಿಗೆ ಸಲಹೆಗಾರರ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿ, ಗ್ರಾಹಕರ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಈ ಪದ್ದತಿಯನ್ನು ಜಾರಿಗೆ ತರಲಾಗಿದೆ. ವಸ್ತುಗಳ ಮೇಲೆ ಹಾಕುತ್ತಿದ್ದ ಹಲವು ತೆರಿಗೆಗಳನ್ನು ತೆಗೆದು ಹಾಕಿ ಒಂದೇ ಪದ್ದತಿ ಜಾರಿತೆ ತರಲಾಗಿದೆ. ಜನರು ಇದರೊಂದಿಗೆ ಹೊಂದಾಣಿಕೆ ಆಗಬೇಕಿದೆ ಎಂದರು. ಜನರಿಗೆ ಇದನ್ನು ತಿಳಿದುಕೊಳ್ಳಲು ಸ್ವಲ್ಪ ಸಮಯಾವಕಾಶಬೇಕಾಗುತ್ತದೆ. ಜನರಿಗೆ ತಿಳುವಳಿಕೆ ನೀಡಲಾಗುತ್ತಿದ್ದು, ದೇಶದ ಸಣ್ಣ ಹಾಗೂ ಮಧ್ಯಮ ಉದ್ಯಮಿಗಳಿಗೆ ಹೊರೆಯಾಗದಂತೆ ಈ ನೀತಿಯನ್ನು ರೂಪಿಸಲಾಗಿದೆ ಎಂದರು.

ತೆರಿಗೆ ಸಲಹೆಗಾರರ ಮಾನ್ಯತೆಯನ್ನು ಕೇಂದ್ರ ಸರಕಾರ ಪರಿಗಣಿಸಲಿದೆ. ಶೀಘ್ರವಾಗಿ ಬೆಳೆಯುತ್ತಿರುವ ತೆರಿಗೆ ಪದ್ದತಿಯನ್ನು ಡಿಜಿಟಲೀಕರಣಗೊಳಿಸಲಾಗಿದ್ದು, ನೇರ ಹಾಗೂ ಪರೋಕ್ಷವಾಗಿ ಶೇಕಡಾ 85 ರಷ್ಟು ತೆರಿಗೆ ವಂಚನೆ, ಮೋಸ ತಡೆಯಲು ಪ್ರಯತ್ನ ನಡೆಸಲಾಗುತ್ತಿದೆ. ಹೀಗಾಗಿ ಜಿಡಿಪಿಯ ಮೇಲೆ ಹೊಡೆತ ಬಿದ್ದಿದೆ. ನೋಟು ಅಮಾನ್ಯೀಕರಣದ ಪರಿಣಾಮ ಸಾಕಷ್ಟು ಪ್ರಮಾಣದಲ್ಲಿ ಕಡಿಮೆ ಆಗಿದೆ. ತೆರಿಗೆದಾರರು ಮತ್ತು ಸಲಹೆಗಾರರು ಸಾಧ್ಯವಾದಷ್ಟೂ ಪ್ರಾಮಾಣಿಕತೆ ಅಳವಡಿಸಿಕೊಳ್ಳಬೇಕು, ತೆರಿಗೆ ಆರ್ಥಿಕ ಸ್ವಾತಂತ್ರ್ಯ ಬೇಕಾಗಿದೆ. ಈಗ ದೇಶಕ್ಕಾಗಿ ಬಲಿದಾನದ ಅಗತ್ಯವಿಲ್ಲ. ಆದರೆ ತೆರಿಗೆ ವ್ಯವಸ್ಥೆ ಬಲಪಡಿಸಬೇಕಾಗಿದೆ. ರೈತರಿಗೆ ಸೌಲಭ್ಯ, ರಸ್ತೆ, ಮೂಲಸೌಕರ್ಯ, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ತೆರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಬೇಕಾಗಿದೆ ಎಂದು ಹೇಳಿದರು.

ಹೆಚ್ಚು ಜನರು ತೆರಿಗೆ ಕಟ್ಟಿದರೆ ಹೆಚ್ಚು ಆದಾಯ ಘೋಷಣೆ ಮಾಡಿದರೆ ಅವರಿಗೆ ಪ್ರೋತ್ಸಾಹ ಸಿಗುತ್ತದೆ. ಹೆಚ್ಚಿನ ಆದಾಯ ಬರುವಂತೆ ನೋಡಿಕೊಳ್ಳಲು ಪ್ರಯತ್ನಿಸಬೇಕು ಎಂದು ಅವರು ಸಲಹೆ ನೀಡಿದರು. ತೆರಿಗೆ ಪ್ರಮಾಣ ಕಡಿಮೆ ಆಗಬೇಕಾದರೆ ಹೆಚ್ಚಿನ ತೆರಿಗೆ ಸಂಗ್ರಹ ಮಾಡಲು ಸಹಕರಿಸಬೇಕು ಎಂದು ನಿರ್ಮಲಾ ಸೀತಾರಾಮನ್ ಕರೆ ನೀಡಿದರು.

 

ಸ್ವಾತಂತ್ರ್ಯ ಪೂರ್ವದಲ್ಲಿ ಅಂದಿನ ತೆರಿಗೆ ಸಲಹೆಗಾರರು ತಮ್ಮ ವೃತ್ತಿ ತೊರೆದು ಮಹಾತ್ಮ ಗಾಂಧೀಜಿಯವರ ನೇತೃತ್ವದ ಚಳವಳಿಗೆ ಬೆಂಬಲ ಸೂಚಿಸಿದ್ದರು. ಇಂದು ವೃತ್ತಿ ತೊರೆಯುವುದು ಬೇಕಾಗಿಲ್ಲ, ಆದರೆ ಜನರಿಗೆ ಸಮರ್ಪಕ ತೆರಿಗೆಯ ಮೌಲ್ಯಮಾಪನ ಮಾಡಿ, ದೇಶಕ್ಕೆ ಕೊಡುಗೆ ನೀಡಬೇಕು ಎಂದು ಹೇಳಿದರು.

ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಕೇಂದ್ರ ಸಂಸದೀಯ ವ್ಯವಹಾರಗಳು ,ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಪ್ರಲ್ಹಾದ ಜೋಶಿ ಮಾತನಾಡಿ, ದೇಶದ ರಕ್ಷಣಾ ಮಂತ್ರಿಯಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿರುವ ನಿರ್ಮಲಾ ಸೀತಾರಾಮನ್ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಹಣಕಾಸು ಖಾತೆಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಸಾಮಾನ್ಯ ಕುಟುಂಬವೊಂದರಲ್ಲಿ ಜನಿಸಿ, ತಮ್ಮ ಶ್ರದ್ಧೆ ಮತ್ತು ಪ್ರತಿಭೆಗಳಿಂದಲೇ ಉನ್ನತ ಸ್ಥಾನಕ್ಕೇರಿದ್ದಾರೆ, ಅವರು ಹುಬ್ಬಳ್ಳಿ ಧಾರವಾಡಕ್ಕೆ ಆಗಮಿಸಿರುವುದು ಸಂತಸ ತಂದಿದೆ . ದೇಶದ ಆರ್ಥಿಕ ಪ್ರಗತಿಗೆ ಮಹತ್ವದ ಪಾತ್ರವಹಿಸುವ ತೆರಿಗೆ ಸಲಹೆಗಾರರು ಇಂದು ವೃತ್ತಿ ನೈತಿಕತೆ ಕುರಿತು ಪ್ರತಿಜ್ಞೆ ಸ್ವೀಕರಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ದೇಶದಲ್ಲಿ ಜಿ ಎಸ್ ಟಿ ಮೂಲಕ ಸಾಕಷ್ಟು ಬದಲಾವಣೆಗಳು ಉಂಟಾಗುತ್ತಿವೆ. ತೆರಿಗೆ ಸಲಹೆಗಾರರು ತಮ್ಮ ಕಕ್ಷಿದಾರರಿಗೆ ಸೂಕ್ತ ಕಾನೂನು ಸಲಹೆ ನೀಡಿ ನೆರವು ಒದಗಿಸಬೇಕು ಎಂದು ಕಿವಿ ಮಾತು ಹೇಳಿದರು.

ಬೃಹತ್,ಮಧ್ಯಮ ಕೈಗಾರಿಕೆ,ಸಾರ್ವಜನಿಕ ಉದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ತೆರಿಗೆ ಸಲಹೆಗಾರರು ಮತ್ತು ಚಾರ್ಟರ್ಡ್ ಅಕೌಂಟೆಂಟ್ ಗಳು ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ತೆರಿಗೆ ಪಾವತಿದಾರರ ನಡುವೆ ಅವರು ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಾರೆ. ಸರ್ಕಾರಕ್ಕೆ ಕಂದಾಯ ಮತ್ತು ತೆರಿಗೆಗಳೇ ಪ್ರಮುಖ ಸಂಪನ್ಮೂಲಗಳಾಗಿವೆ. ಅವುಗಳನ್ನು ನಿಯಮಾನುಸಾರ ಪಾವತಿಸಲು ತೆರಿಗೆ ಸಲಹೆಗಾರರು ತಮ್ಮ ಕಕ್ಷಿದಾರರಿಗೆ ಮಾರ್ಗದರ್ಶನ ನೀಡಬೇಕು ಎಂದರು.

ಕರ್ನಾಟಕ ಒಂದು ಪ್ರಮುಖ ಕೈಗಾರಿಕಾ ಪ್ರದೇಶವಾಗಿ ಅಭಿವೃದ್ಧಿ ಹೊಂದುತ್ತಿದೆ. ಕರಕುಶಲ ವಸ್ತುಗಳು, ಜವಳಿ, ಗಾರ್ಮೆಂಟ್ ಉದ್ಯಮ, ಬಂಕರಿಂಗ್ ಇಂಧನ, ಕೃಷಿ ಮತ್ತು ಕಡಲು ಸಾರಿಗೆ ಚಟುವಟಿಕೆಗಳ ಮೇಲಿನ ಜಿಎಸ್ ಟಿ ತೆರಿಗೆ ಕಡಿಮೆ ಮಾಡಬೇಕು.ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಹುಬ್ಬಳ್ಳಿಯನ್ನು ಈ ನಿಟ್ಟಿನಲ್ಲಿ ಇನ್ನಷ್ಟು ಅಭಿವೃದ್ಧಿ ಪಡಿಸಲು ಹುಬ್ಬಳ್ಳಿ-ಅಂಕೋಲ ರೈಲು ಮಾರ್ಗದ ಅಗತ್ಯವಿದೆ. ಕಲಬುರ್ಗಿ ಭಾಗದಲ್ಲಿ ತೊಗರಿಬೇಳೆ ಆಧಾರಿತ ಉದ್ಯಮಗಳ ಸ್ಥಾಪನೆಯಾಗಬೇಕು. ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳ ಉತ್ತೇಜನಕ್ಕೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು‌.

ಹಾವೇರಿ ಸಂಸದ ಶಿವಕುಮಾರ್ ಉದಾಸಿ, ಶಾಸಕ ಅರವಿಂದ ಬೆಲ್ಲದ, ಬೆಂಗಳೂರು ವಲಯದ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ವೈ.ಎನ್.ಶರ್ಮಾ ಮತ್ತಿತರರು ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ತೆರಿಗೆ ಸಲಹೆಗಾರರು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘದ ಸಂಸ್ಥಾಪಕ ಅಧ್ಯಕ್ಷ ದಿವಂಗತ ವಿ.ಬಿ.ಹೊಂಬಳವಅವರ ಪತ್ನಿ ಜಯಶ್ರೀ ಹೊಂಬಳ ಅವರನ್ನು ಸನ್ಮಾನಿಸಿ,ಗೌರವಿಸಲಾಯಿತು. ವಿದ್ಯೆ, ಸಂಗೀತ, ಜನಪದ ಹಾಗೂ ಶಾಸ್ತ್ರೀಯ ಕಲೆಗಳ ತವರೂರು ಎನಿಸಿರುವ ಧಾರವಾಡ ಜಿಲ್ಲೆಗೆ ತಾಯಿ ಸರಸ್ವತಿಯ ಆಶೀರ್ವಾದವಿದೆ. ನವರಾತ್ರಿಯ ಸಪ್ತಮಿ ದಿನದಂದು ಹುಬ್ಬಳ್ಳಿ ಧಾರವಾಡದಲ್ಲಿ ಇರುವ ಅವಕಾಶ ದೊರೆತಿರುವುದು ಸಂತಸ ತಂದಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹರ್ಷ ವ್ಯಕ್ತಪಡಿಸಿದರು.

Stay up to date on all the latest ವಾಣಿಜ್ಯ news with The Kannadaprabha App. Download now
facebook twitter whatsapp