ದೇಶದಲ್ಲಿ ಆರ್ಥಿಕ ಹಿಂಜರಿತ ಅಲ್ಲ, ಆರ್ಥಿಕ ಒತ್ತಡ ಇದೆ : ಡಾ ಸಿ ರಂಗರಾಜನ್

ಜನರು ಹೆಚ್ಚಾಗಿ ಖರೀದಿ ಪ್ರಕ್ರಿಯೆಯಲ್ಲಿ ತೊಡಗಿದರೆ ಆಗ ಆರ್ಥಿಕತೆ ಹೆಚ್ಚಾಗುತ್ತದೆ ಎಂಬ ವಾದ ಮೇಲ್ನೋಟಕ್ಕೆ ಸರಿ ಎಂದು ಕಂಡು ಬಂದರೂ ಖರೀದಿಗೆ ಹಣ ಬೇಕಲ್ಲವೇ? ಆದಾಯ ಹೆಚ್ಚಳಕ್ಕೆ ಪೂರಕ ಕ್ರಮಗಳನ್ನು ಕೈಗೊಳ್ಳದ ಹೊರತು ಖರೀದಿ ಸಾಮರ್ಥ್ಯ ವೃದ್ಧಿಸಲು ಸಾಧ್ಯವಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ - ಆರ್ ಬಿ ಐ ನ ಮಾಜಿ ಗವರ್ನರ್....
ಡಾ ಸಿ ರಂಗರಾಜನ್
ಡಾ ಸಿ ರಂಗರಾಜನ್

ನೆರೆಹೊರೆಯವರು ನಿರುದ್ಯೋಗಿಯಾಗಿದ್ದರೆ ಅದು ರಿಸೆಷನ್, ನೀವೇ ನಿರುದ್ಯೋಗಿಯಾದರೆ ಅದು ಡಿಪ್ರೆಷನ್

ಬೆಂಗಳೂರು: ಜನರು ಹೆಚ್ಚಾಗಿ ಖರೀದಿ ಪ್ರಕ್ರಿಯೆಯಲ್ಲಿ ತೊಡಗಿದರೆ ಆಗ ಆರ್ಥಿಕತೆ ಹೆಚ್ಚಾಗುತ್ತದೆ ಎಂಬ ವಾದ ಮೇಲ್ನೋಟಕ್ಕೆ ಸರಿ ಎಂದು ಕಂಡು ಬಂದರೂ ಖರೀದಿಗೆ ಹಣ ಬೇಕಲ್ಲವೇ? ಆದಾಯ ಹೆಚ್ಚಳಕ್ಕೆ ಪೂರಕ ಕ್ರಮಗಳನ್ನು ಕೈಗೊಳ್ಳದ ಹೊರತು ಖರೀದಿ ಸಾಮರ್ಥ್ಯ ವೃದ್ಧಿಸಲು ಸಾಧ್ಯವಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ - ಆರ್ ಬಿ ಐ ನ ಮಾಜಿ ಗವರ್ನರ್ ಮತ್ತು ಪ್ರಧಾನಮಂತ್ರಿ ಕಾರ್ಯಾಲಯದ ಆರ್ಥಿಕ ಸಲಹಾ ಸಮಿತಿಯ ಮಾಜಿ ಅಧ್ಯಕ್ಷ ಡಾ ಸಿ ರಂಗರಾಜನ್ ಪ್ರತಿಪಾದಿಸಿದ್ದಾರೆ.

ನಗರದಲ್ಲಿಂದು ಇಕ್ಫೈ ಬ್ಯುಸಿನೆಸ್ ಸ್ಕೂಲ್ ಏರ್ಪಡಿಸಿದ್ದ “ಆರ್ಥಿಕ ಪ್ರಗತಿ ಚುರುಕುಗೊಳಿಸುವತ್ತ” ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ದೇಶದ ಆರ್ಥಿಕ ಸ್ಥಿತಿ ಗತಿಗಳನ್ನು ಸಮಗ್ರವಾಗಿ ಅವಲೋಕಿಸಿದರು.

ನಿಮ್ಮ ನೆರೆಹೊರೆಯವರು ನಿರುದ್ಯೋಗಿಯಾಗಿದ್ದರೆ ಅದು ರಿಸೆಷನ್, ನೀವೇ ನಿರುದ್ಯೋಗಿಯಾದರೆ ಅದು ಡಿಪ್ರೆಷನ್ ಎಂದು ಉದಾಹರಿಸುತ್ತಾ ದೇಶದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಬೆಳಕು ಚೆಲ್ಲಿದರು. ಸ್ಲೋ ಡೌನ್ ಎಂದರೆ ಪ್ರಗತಿ ದರ ಇದ್ದರೂ ಕಡಿಮೆ ಪ್ರಮಾಣದಲ್ಲಿದೆ ಎಂದರ್ಥ ಎಂದರು.

ಬಂಡವಾಳಶಾಹಿಯ ಪರಿಕಲ್ಪನೆಯಲ್ಲಿ ಆರ್ಥಿಕ ದರದ ಏರಿಳಿತವನ್ನು ಗಮನಿಸಬಹುದಾಗಿದ್ದು ಅದು ರಿಸೆಷನ್ ಅಂದರೆ ಆರ್ಥಿಕ ಹಿಂಜರಿತ. ಹಲವು ವಲಯಗಳಲ್ಲಿ ಸ್ಥಿರ, ದೀರ್ಘಾವಧಿ ಒತ್ತಡದ ಸ್ಥಿತಿ ಡಿಪ್ರೆಷನ್ ಆಗಿದ್ದು ಸೈಕ್ಲಿಕಲ್ (ಚಕ್ರದಂತೆ ಏರಿಕೆ ಮತ್ತು ಇಳಿಕೆ) ಮತ್ತು ಸ್ಟ್ರಕ್ಚರಲ್ (ಬೇಡಿಕೆ ಕುಸಿತದ ಪರಿಣಾಮ ಕಡಿಮೆ ಉತ್ಪಾದನೆ) ಅಂಶಗಳು ಇದಕ್ಕೆ ಕಾರಣ ಎಂದು ವಿವರಿಸಿದರು.

ಮೂಲತಃ ಆರ್ಥಿಕತೆಯ ಬೆಳವಣಿಗೆ ಎರಡು ಅಂಶಗಳನ್ನೊಳಗೊಂಡಿದೆ. ಅವು ಬಂಡವಾಳ ಹೂಡಿಕೆ ಮತ್ತು ಉತ್ಪಾದನೆ. ಆರ್ಥಿಕತೆ ಹೆಚ್ಚಲು ಉತ್ಪಾದನೆಯಾಗಬೇಕು. ಉತ್ಪಾದನೆಗೆ ಬಂಡವಾಳ ಅಗತ್ಯ. ಅಂತಿಮವಾಗಿ ಬೇಡಿಕೆ ಇದ್ದರೆ ಮಾತ್ರ ಬಂಡವಾಳ ಹೂಡಿಕೆಯಾಗಿ ಉತ್ಪಾದನೆ ಮಾಡಬಹುದು. ಆರ್ಥಿಕ ಸ್ಥಿತಿ ಇಳಿಮುಖವಾಗುತ್ತಿರುವುದನ್ನು ಸರಿಪಡಿಸಲು ಸರ್ಕಾರ ತೆರಿಗೆ ಕಡಿತ, ರೆಪೋ ದರ ಕಡಿತ ಮೊದಲಾದ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾದರೂ ಅವು ತಕ್ಷಣಕ್ಕೆ ಫಲ ನೀಡುವುದಿಲ್ಲ ಎಂದು ಅವರು ಪ್ರತಿಪಾದಿಸಿದರು.

ಆರ್ ಬಿ ಐ ರೆಪೊ ದರವನ್ನು ಶೇ 6.5 ರಿಂದ ಶೇ 5.2 ಕ್ಕೆ ಇಳಿಸಿದೆ. ಈ ದರ ಇಳಿಕೆಯಾದರೆ ಬ್ಯಾಂಕ್ ಗಳ ಬಡ್ಡಿ ದರ ಇಳಿಕೆಯಾಗಿ ಜನರು ಹೆಚ್ಚು ಸಾಲ ಪಡೆದು ಪ್ರಗತಿ ಸಾಧ್ಯ ಎಂದು ಆಶಿಸಲಾಗಿದೆ. ಆದರೆ ಇದು ಅಷ್ಟೇನೂ ಉತ್ತಮ ಬೆಳವಣಿಗೆಯಲ್ಲ. ಮರುಪಾವತಿಯಾಗದ ಸಾಲ (ಎನ್ ಪಿ ಎ) ಹೆಚ್ಚಳದ ಕಾರಣ ಬಡ್ಡಿ ದರ ಕಡಿಮೆ ಮಾಡಲು ಬ್ಯಾಂಕ್ ಗಳಿಗೆ ಸಾಧ್ಯವಿಲ್ಲ. ಹೀಗಾಗಿ ಆರ್ಥಿಕ ಸುಧಾರಣೆಗೆ ಆರ್ ಬಿ ಐ ಹಣಕಾಸು ನೀತಿಗಳಿಗೆ ತನ್ನದೇ ಆದ ಇತಿಮಿತಿಗಳಿವೆ. ಇನ್ನು ಸರ್ಕಾರದ ಕ್ರಮಗಳಾದ ಬ್ಯಾಂಕ್ ಗಳ ವಿಲೀನ, ಮರು ಬಂಡವಾಳ ಹೂಡಿಕೆ, ಸರ್ಚಾಜ್ ವಿಧಿಸುವುದು ಮೊದಲಾದ ಕ್ರಮಗಳು ಕೂಡ ಸಮರ್ಪಕವಾಗಿರಲಿಲ್ಲ. ಇದನ್ನು ಸರಿಪಡಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಪೊರೇಟ್ ಟ್ಯಾಕ್ಸ್ ಕಡಿತದಿಂದ ತಕ್ಷಣದ ಪ್ರಯೋಜನವೇನೂ ಇಲ್ಲ ಎಂದ ಅವರು, ತೆರಿಗೆ ಕಡಿಮೆಯಾಗಿ ಉಳಿದ ಮೊತ್ತದಿಂದ ಕಂಪೆನಿ ತನ್ನ ಡಿವಿಡೆಂಡ್ ಹೆಚ್ಚಳ ಮಾಡಬಹುದು ಅಥವಾ ಅದನ್ನು ಬೇರೆಡೆ ಬಂಡವಾಳ ಹೂಡಬಹುದು. ಆದರೆ ಇದು ಪ್ರಸಕ್ತ ವರ್ಷದಲ್ಲಿ ಏನಾದರೂ ಪರಿಣಾಮ ಬೀರಬಹುದೇ? ಇಲ್ಲ ಅದರ ಪರಿಣಾಮ ಸ್ಪಷ್ಟವಾಗಿಲ್ಲ. ಡಿವಿಡೆಂಡ್ ಘೋಷಣೆಯಾದರೆ ಬಹುಶಃ ಮುಂದಿನ ವರ್ಷ ಅದರ ಲಾಭ ಸಿಗಬಹುದು. ಹೀಗಾಗಿ ಈ ತೆರಿಗೆ ಕಡಿತ ಈ ವರ್ಷದ ಆರ್ಥಿಕತೆಯ ಚೇತರಿಕೆಗೆ ನೆರವಾಗದು ಎಂದರು.

1991 ರಲ್ಲಿ ದೇಶಕ್ಕೆ ತೀವ್ರ ಆರ್ಥಿಕ ಸಂಕಷ್ಟ ಎದುರಾಯಿತು. ಆದರೆ ಆಗ ಸಮಸ್ಯೆಗಳನ್ನು ಅವಕಾಶಗಳಾಗಿ ಪರಿವರ್ತಿಸಿಕೊಳ್ಳಲಾಯಿತು. ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ನೀತಿ ನಿರೂಪಣೆಗಳಲ್ಲಿ ಸ್ಥಿರತೆ ತರಲಾಯಿತು. ಸ್ಥಿರತೆ ಮತ್ತು ವಿನ್ಯಾಸದ ಸುಧಾರಣೆ ಅಂದಿನ ಸಮಸ್ಯೆಗೆ ಉತ್ತರವಾಗಿತ್ತು. ಆದರೆ ಈಗಿನ ಸ್ಥಿತಿಗೆ ಉತ್ತರ ಕಂಡುಕೊಳ್ಳಬೇಕಿದೆ. ಕಲ್ಲಿದ್ದಲು, ವಿದ್ಯುತ್ ಮತ್ತು ರೈಲ್ವೆ ಹೀಗೆ ಸಂಬಂಧಿತ ಎಲ್ಲ ವಲಯಗಳಲ್ಲೂ ಉತ್ಪಾದನೆ ಹೆಚ್ಚಾಗಿ ಬೇಡಿಕೆ ವೃದ್ಧಿಸಿದರೆ ಮಾತ್ರ ಸಮರ್ಪಕ ಅಭಿವೃದ್ಧಿ ಸಾಧ್ಯ ಎಂದರು.

ಸರ್ಕಾರ 1990 ರಲ್ಲಿ ನಿಯಮಗಳನ್ನು ಸಡಿಸಿಲಿತು. ಇದಕ್ಕೂ ಮೊದಲು ವಿದೇಶಗಳಿಗೆ ತೆರಳಿ ಅಲ್ಲಿನ ತಯಾರಿಕಾ ವಿಧಾನ, ಮಾರುಕಟ್ಟೆ ವಿಧಾನ ಅರಿಯಲು ಅವಕಾಶವಿರಲಿಲ್ಲ. ಜಾಗತಿಕ ವಲಯದ ಭಾಗವಾಗಲಯ ಭಾರತ ಬಯಸಿತು. ಆಮದು ಹೆಚ್ಚಾದಂತೆ ಬೆಲೆಗಳು ಹೆಚ್ಚಾದವು. ಇದು ಉತ್ತಮ ಮಾರ್ಗವಾಗಿರಲಿಲ್ಲ ಎಂದು ಇತಿಹಾಸವನ್ನು ಡಾ ಸಿ ರಂಗರಾಜನ್ ನೆನಪು ಮಾಡಿಕೊಟ್ಟರು.

ಸುಧಾರಣೆಗಳು ಪ್ರಗತಿಯ ವೇಗ ಹೆಚ್ಚುವಲ್ಲಿ ಸಹಕರಿಸಿವೆಯೇ ಎಂಬುದನ್ನು ಗಮನಿಸಬೇಕು. ಸ್ವಾತಂತ್ರ್ಯ ಬಂದ ನಂತರ ಮೂರು ದಶಕಗಳ ಅವಧಿಯಲ್ಲಿ ಭಾರತದ ಜನಸಂಖ್ಯೆ ಅತಿ ಹೆಚ್ಚಾಗಿದ್ದ ಕಾರಣ ತಲಾ ಆದಾಯ ಕಡಿಮೆ ಇತ್ತು. ಆಗ ಭಾರತದ ರಾಷ್ಟ್ರೀಯ ಆದಾಯ ಹೆಚ್ಚಲೇ ಇಲ್ಲ. 1990 ರಲ್ಲಿ ದೇಶದ ಆರ್ಥಿಕತೆ ಹೆಚ್ಚಿತಾದರೂ ಅದು ಸಮರ್ಪಕವಾಗಿ ಸೂಕ್ತ ಪ್ರಮಾಣದಲ್ಲಿ ಏರಿಕೆಯಾಗದ ಪರಿಣಾಮ 1992 ರಲ್ಲಿ ಭಾರತ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರಲಿಲ್ಲ.

2005-06 ಮತ್ತು 2007-08 ರಲ್ಲಿ ದೇಶ ಪ್ರಗತಿಪಥದಲ್ಲಿ ಸಾಗಿತು. 2008-09 ರಲ್ಲಿ ಜಾಗತಿಕ ಬಿಕ್ಕಟ್ಟಿನ ಪರಿಣಾಮ ದೇಶದ ಆರ್ಥಿಕತೆಯೂ ಕುಸಿದಿತ್ತು. ನಂತರದ ದಿನಗಳಲ್ಲಿ ಚೇತರಿಕೆ ಕಂಡು ಬಂದಿತ್ತು. ಆದರೆ ದುರದೃಷ್ಟವಷಾತ್ 2014 ರಿಂದ ಪ್ರಗತಿ ದರ ಕುಸಿಯುತ್ತಿದ್ದು ಇದೀಗ ಶೇ 6.8 ರಷ್ಟಕ್ಕೆ ತಲುಪಿದೆ. 2016-17 ರಲ್ಲಿ ಶೇ 8.6 ರಷ್ಟಿತ್ತು. ಇಷ್ಟೆಲ್ಲಾ ಇಳಿಕೆ ನಂತರ ಸರ್ಕಾರ ಪ್ರಗತಿ ಇಳಿಕೆಯಾಗುತ್ತಿದೆ ಎಂಬುದನ್ನು ಮನಗಂಡಿದೆ. ತಮ್ಮ ತಮ್ಮ ಜಿಡಿಪಿಗೆ ಅನುಗುಣವಾಗಿ ಕೇಂದ್ರ ರಾಜ್ಯ ಸರ್ಕಾರಗಳಿಂದ ಬಂಡವಾಳ ಹೂಡಿಕೆ ಹೆಚ್ಚಳ, ಖಾಸಗಿ – ಸರ್ಕಾರಿ ಸಹಭಾಗಿತ್ವದ ಮೂಲಕ ಕೆಲವು ಯೋಜನೆಗಳ ಅನುಷ್ಠಾನ ಮೊದಲಾದ ಕ್ರಮಗಳಿಗೆ ಸರ್ಕಾರ ಆದ್ಯತೆ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು.

2019-20 ನೇ ಸಾಲಿಗೆ ಶೇ 6 ರ ಪ್ರಗತಿಯ ಆಶಯವಿದ್ದು ಅಷ್ಟಾದರೂ ಸಾಧನೆಯಾಗಲಿ ಎಂಬ ಆಶಯವನ್ನು ರಂಗರಾಜನ್ ವ್ಯಕ್ತಪಡಿಸಿದರು.

ನ್ಯಾಕ್ ಹಿರಿಯ ಸಲಹೆಗಾರ ಡಾ.ಎಮ್.ಎಸ್.ಶ್ಯಾಮ್ ಸುಂದರ್, ಐಬಿಎಸ್ ನಿರ್ದೇಶಕ ಪ್ರೊ. ಜಿ.ವಿ.ಮುರಳೀಧರ ಮತ್ತಿತರರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com