ಯುಪಿಎ ಆಡಳಿತದಲ್ಲಿ 'ಫೋನ್ ಬ್ಯಾಂಕಿಂಗ್' ಮೂಲಕ ಸಾಲ ಪಡೆದು ತಿಳಿದವರಿಂದಲೇ ವಂಚನೆ: ನಿರ್ಮಲಾ ಸೀತಾರಾಮನ್

ಯುಪಿಎ ಸರ್ಕಾರದ ಅವಧಿಯಲ್ಲಿ 'ಫೋನ್ ಬ್ಯಾಂಕಿಂಗ್' ಮೂಲಕ ಸಾಲ ಪಡೆದು ತಿಳಿದವರೇ ಮೋಸ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ:ಯುಪಿಎ ಸರ್ಕಾರದ ಅವಧಿಯಲ್ಲಿ 'ಫೋನ್ ಬ್ಯಾಂಕಿಂಗ್' ಮೂಲಕ ಸಾಲ ಪಡೆದು ತಿಳಿದವರೇ ಮೋಸ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದ್ದಾರೆ.

ಫೋನ್ ಬ್ಯಾಂಕಿಂಗ್ ಮೂಲಕ ಉದ್ದೇಶಪೂರ್ವಕವಾಗಿ ಸಾಲ ಮರುಪಾವತಿಸದಿದ್ದ ಉದ್ದಿಮೆದಾರರಿಂದ ಸಾಲ ಬಾಕಿಯನ್ನು ವಾಪಸ್ ಪಡೆಯಲು ಮೋದಿ ಸರ್ಕಾರ ಅವರ ಬೆನ್ನಟ್ಟುತ್ತಿದೆ ಎಂದು ಸಹ ಹೇಳಿದ್ದಾರೆ.

ದೇಶದ 50 ಪ್ರಮುಖ ಉದ್ದೇಶಪೂರ್ವಕವಾಗಿ ಸಾಲ ಹಿಂತಿರುಗಿಸದ ಉದ್ಯಮಿಗಳ 68 ಸಾವಿರದ 607 ಕೋಟಿ ರೂಪಾಯಿ ಸಾಲವನ್ನು ರೈಟಾಫ್ ಮಾಡಿರುವ ಸಂಬಂಧ ವಿರೋಧ ಪಕ್ಷಗಳ ಟೀಕೆಗೆ ಅವರು ಸರಣಿ ಟ್ವೀಟ್ ಗಳನ್ನು ಮಾಡುವ ಮೂಲಕ ಉತ್ತರಿಸಿದ್ದಾರೆ.

ನಿರ್ಮಲಾ ಸೀತಾರಾಮನ್ ಕಳೆದ ರಾತ್ರಿ ಮಾಡಿರುವ ಸರಣಿ ಟ್ವೀಟ್ ನಲ್ಲಿ ಹೇಳಿದ್ದೇನು?: ಕಾಂಗ್ರೆಸ್ ಪಕ್ಷ ಜನರನ್ನು ಹಾದಿತಪ್ಪಿಸಲು ಲಜ್ಜೆಗೆಟ್ಟ ರೀತಿ ಪ್ರಯತ್ನಿಸುತ್ತಿದೆ. ಅದು ಆರ್ಥಿಕ ವ್ಯವಸ್ಥೆಯನ್ನು ಸರಿಪಡಿಸಲು ಸೂಕ್ತ ರಚನಾತ್ಮಕ ಕ್ರಮ ಕೈಗೊಳ್ಳುವಲ್ಲಿ ಏಕೆ ವಿಫಲವಾಯಿತು ಎಂದು ಈ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಆಡಳಿತ ಪಕ್ಷದಲ್ಲಿರುವಾಗ ಮತ್ತು ಈಗ ವಿರೋಧ ಪಕ್ಷ ಸ್ಥಾನದಲ್ಲಿ ನಿಂತುಕೊಂಡು ಭ್ರಷ್ಟಾಚಾರ ಮತ್ತು ಅವ್ಯವಹಾರಗಳನ್ನು ನಿಯಂತ್ರಿಸಲು ಬದ್ಧತೆ ಅಥವಾ ಒಲವು ತೋರಿಸುವ ಯಾವುದೇ ಗುಣವನ್ನು ಕಾಂಗ್ರೆಸ್ ಹೊಂದಿಲ್ಲ ಎಂದು ಟೀಕಿಸಿದ್ದಾರೆ.

2009-2010 ಮತ್ತು 2013-2014ರ ನಡುವೆ ವಾಣಿಜ್ಯ ಬ್ಯಾಂಕುಗಳು 1,45,226 ಕೋಟಿ ರೂಪಾಯಿಗಳನ್ನು ರೈಟಾಫ್ ಮಾಡಿದ್ದವು. ಎನ್ ಡಿಎ ಸರ್ಕಾರವನ್ನು ಟೀಕೆ ಮಾಡುವ ಮೊದಲು ರಾಹುಲ್ ಗಾಂಧಿಯವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ರೈಟಾಫ್ ಎಂದರೆ ಏನೆಂದು ಕೇಳಬೇಕಾಗಿತ್ತು ಎಂದು ತಿರುಗೇಟು ನೀಡಿದ್ದಾರೆ.

2006ರಿಂದ 2008ರ ಮಧ್ಯೆ ದೊಡ್ಡ ಪ್ರಮಾಣದ ಅನುತ್ಪಾದಕ ಸಾಲಗಳು ಹುಟ್ಟಿಕೊಂಡವು ಎಂದು ಆರ್ ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರ ಹೇಳಿಕೆಯನ್ನು ಉಲ್ಲೇಖಿಸಿ, ಸಾಲ ಹಿಂತಿರುಗಿಸದೆ ವಂಚಿಸದೆ ಹಿನ್ನಲೆಯಿರುವ ಪ್ರಮುಖ ಉದ್ಯಮಿಗಳೇ ಈ ಸಾಲಗಳನ್ನು ಹೊಂದಿದ್ದರು ಎಂದು ಮಾಧ್ಯಮ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.

ಸಾಲ ಹಿಂತಿರುಗಿಸುವ ಸಾಮರ್ಥ್ಯವಿದ್ದರೂ ಹಿಂತಿರುಗಿಸದಿದ್ದವರನ್ನು ಉದ್ದೇಶಪೂರ್ವಕವಾಗಿ ಸಾಲ ಮರುಪಾವತಿ ಮಾಡದವರು ಎಂದು ಹೆಸರಿಸಲಾಯಿತು. ಇಂತವರು ಹಿಂದಿನ ಯುಪಿಎ ಸರ್ಕಾರದಿಂದ ಫೋನ್ ಬ್ಯಾಂಕಿಂಗ್ ಸೌಲಭ್ಯವನ್ನು ಚೆನ್ನಾಗಿಯೇ ಬಳಸಿಕೊಂಡರು ಎಂದು ಆಪಾದಿಸಿದ್ದಾರೆ.

ಬ್ಯಾಂಕಿನಿಂದ ಸಾಲ ಪಡೆದು ಹಿಂತಿರುಗಿಸದ ಪ್ರಮುಖ 50 ಉದ್ಯಮಿಗಳು ಯಾರ್ಯಾರು ಎಂದು ಸದನದಲ್ಲಿ ಕೇಳಿದ್ದೆ, ಅದಕ್ಕೆ ಹಣಕಾಸು ಸಚಿವೆ ಉತ್ತರಿಸಲಿಲ್ಲ. ಈಗ ಆರ್ ಬಿಐ, ಬ್ಯಾಂಕಿಗೆ ಹಣ ವಾಪಸ್ ಮಾಡದೆ ವಂಚಿಸಿದವರು ಎಂದು ನೀರವ್ ಮೋದಿ, ಮೆಹುಲ್ ಚೋಕ್ಸಿ ಮತ್ತು ಹಲವು ಬಿಜೆಪಿ ನಾಯಕರ ಸ್ನೇಹಿತರ ಹೆಸರು ಹೇಳಿದೆ. ಇದರಿಂದಾಗಿಯೇ ಅವರ ಹೆಸರುಗಳನ್ನು ಸಂಸತ್ತಿನಲ್ಲಿ ಹೇಳದೆ ಮರೆಮಾಚಲಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com