'ಸುಪ್ರೀಂ' ಚಾಟಿ ನಂತರ ರಾತ್ರಿ 12 ಗಂಟೆಯೊಳಗೆ ಬಾಕಿ ಹಣ ಪಾವತಿಸುವಂತೆ ಟೆಲಿಕಾಂ ಕಂಪನಿಗಳಿಗೆ ಡಿಒಟಿ ಆದೇಶ

ಸುಪ್ರೀಂ ಕೋರ್ಟ್ ಚಾಟಿ ಬೀಸುತ್ತಿದ್ದಂತೆ ಎಚ್ಚೆತ್ತುಕೊಂಡ ಟೆಲಿಕಮ್ಯುನಿಕೇಷನ್ ಇಲಾಖೆ(ಡಿಒಟಿ), ಬಾಕಿ ಉಳಿಸಿಕೊಂಡಿರುವ ಹೊಂದಾಣಿಕೆ ಮಾಡಿದ ಒಟ್ಟು ವರಮಾನ(ಎಜಿಆರ್‌) ₹1.47 ಲಕ್ಷ ಕೋಟಿ ರೂ. ಅನ್ನು ಇಂದು ರಾತ್ರಿ 12 ಗಂಟೆಯೊಳಗೇ ಪಾವತಿಸುವಂತೆ ದೇಶದ ಟೆಲಿಕಾಂ ಕಂಪನಿಗಳಿಗೆ ಸೂಚಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಸುಪ್ರೀಂ ಕೋರ್ಟ್ ಚಾಟಿ ಬೀಸುತ್ತಿದ್ದಂತೆ ಎಚ್ಚೆತ್ತುಕೊಂಡ ಟೆಲಿಕಮ್ಯುನಿಕೇಷನ್ ಇಲಾಖೆ(ಡಿಒಟಿ), ಬಾಕಿ ಉಳಿಸಿಕೊಂಡಿರುವ ಹೊಂದಾಣಿಕೆ ಮಾಡಿದ ಒಟ್ಟು ವರಮಾನ(ಎಜಿಆರ್‌) ₹1.47 ಲಕ್ಷ ಕೋಟಿ ರೂ. ಅನ್ನು ಇಂದು ರಾತ್ರಿ 12 ಗಂಟೆಯೊಳಗೇ ಪಾವತಿಸುವಂತೆ ದೇಶದ ಟೆಲಿಕಾಂ ಕಂಪನಿಗಳಿಗೆ ಸೂಚಿಸಿದೆ.

ಟೆಲಿಕಾಂ ಕಂಪನಿಗಳು ಬಾಕಿ ಉಳಿಸಿ ಕೊಂಡಿರುವ ಹೊಂದಾಣಿಕೆ ಮಾಡಿದ ಒಟ್ಟು ವರಮಾನ(ಎಜಿಆರ್‌)ದ ಹಣ ಪಾವತಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ, ಕಂಪನಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ, ಸುಪ್ರೀಂ ಕೋರ್ಟ್ ಆದೇಶವನ್ನೇ ತಡೆ ಹಿಡಿದಿದ್ದ ಕೇಂದ್ರ ಟೆಲಿಕಮ್ಯುನಿಕೇಷನ್ ಇಲಾಖೆಯನ್ನು ಸರ್ವೋಚ್ಛ ನ್ಯಾಯಾಲಯ ಇಂದು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಬಳಿಕ ಎಚ್ಚೆತ್ತುಕೊಂಡ ಡಿಒಟಿ, ಇಂದು ಮಧ್ಯರಾತ್ರಿಯೊಳಗೆ ಬಾಕಿ ಪಾವತಿಸುವಂತೆ ಭಾರತಿ ಏರ್ಟೆಲ್ ಹಾಗೂ ವೊಡಾಫೋನ್ ಗೆ ಆದೇಶಿಸಿದೆ.

ವೊಡಾಫೋನ್ ಐಡಿಯಾ 50 ಸಾವಿರ ಕೋಟಿ, ಭಾರತಿ ಏರ್ಟೆಲ್ 35,586 ಕೋಟಿ ಹಾಗೂ ತನ್ನ ವ್ಯವಹಾರವನ್ನುಏರ್ಟೆಲ್ ಗೆ ಮಾರಾಟ ಮಾಡಿರುವ ಟಾಟಾ ಟೆಲೆ ಸರ್ವಿಸಸ್ 14 ಸಾವಿರ ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದ್ದಾರೆ.

ಈ ಮಧ್ಯೆ, 2019ರ ಅಕ್ಟೋಬರ್‌ನಲ್ಲಿ ಸರ್ಕಾರಕ್ಕೆ ಬಾಕಿ ಇರುವ ಶುಲ್ಕ ಪಾವತಿಸುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪು ಮರು ಪರಿಶೀಲಿಸುವಂತೆ ಕೋರಿ ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್‌ ಐಡಿಯಾ ಸಲ್ಲಿಸಿದ್ದ ಅರ್ಜಿಯನ್ನು ಜನವರಿ 16ರಂದು ಸುಪ್ರೀಂ ಕೋರ್ಟ್‌ ವಜಾಗೊಳಿಸಿತ್ತು. ಅಲ್ಲದೆ ಜನವರಿ 23ರೊಳಗೆ ಬಡ್ಡಿ ಹಾಗೂ ದಂಡ ಸಹಿತ ಬಾಕಿ ಮೊತ್ತ ಪಾವತಿಸುವಂತೆ ಸೂಚಿಸಿತ್ತು.

ಸರ್ಕಾರಕ್ಕೆ ದೂರಸಂಪರ್ಕ ಕಂಪನಿಗಳು ಪರವಾನಗಿ ಶುಲ್ಕ ₹92,642 ಕೋಟಿ ಹಾಗೂ ತರಂಗಾಂತರಗಳ ಬಳಕೆ ಶುಲ್ಕ ₹55,054 ಕೋಟಿ ಬಾಕಿ ಇರುವುದಾಗಿ ಸಚಿವ ರವಿಶಂಕರ್‌ ಪ್ರಸಾದ್‌ ಲೋಕಸಭೆಗೆ ತಿಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com