ಬಾಕಿ ಉಳಿಸಿಕೊಂಡ ಟೆಲಿಕಾಂ ಕಂಪನಿಗಳ ವಿರುದ್ಧ ದಂಡದ ಕ್ರಮಕ್ಕೆ ಮುಂದಾದ ಡಿಒಟಿ

ಸುಪ್ರೀಂ ಕೋರ್ಟ್ ಚಾಟಿ ಬೀಸುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಟೆಲಿಕಮ್ಯುನಿಕೇಷನ್ ಇಲಾಖೆ(ಡಿಒಟಿ), ನಿಗದಿತ ಸಮದಯಲ್ಲಿ ಬಾಕಿ ಪಾವತಿಸಲು ವಿಫಲವಾಗಿರುವ ಕಂಪನಿಗಳಿಗೆ ದಂಡ ವಿಧಿಸಲು ಮುಂದಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಸುಪ್ರೀಂ ಕೋರ್ಟ್ ಚಾಟಿ ಬೀಸುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಟೆಲಿಕಮ್ಯುನಿಕೇಷನ್ ಇಲಾಖೆ(ಡಿಒಟಿ), ನಿಗದಿತ ಸಮದಯಲ್ಲಿ ಬಾಕಿ ಪಾವತಿಸಲು ವಿಫಲವಾಗಿರುವ ಕಂಪನಿಗಳಿಗೆ ದಂಡ ವಿಧಿಸಲು ಮುಂದಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇಂದು ಶನಿವಾರ ವಿವಿಧ ಇಲಾಖೆಗಳಿಗೆ ರಜೆ ಇರುವುದರಿಂದ ಸೋಮವಾರದವರೆಗೆ ಕಾದು ನೋಡುವ ನಿರ್ಧಾರಕ್ಕೆ ಬಂದಿರುವ ಡಿಒಟಿ, ಲೈಸನ್ಸ್ ನಿಯಮಗಳ ಪ್ರಕಾರ, ಬಾಕಿ ಉಳಿಸಿಕೊಂಡಿರುವ ಕಂಪನಿಗಳಿಗೆ ದಂಡ ಹಾಗೂ ಬಾಕಿ ಹಣ ವಸೂಲಿ ನೋಟಿಸ್ ನೀಡುವ ಸಾಧ್ಯತೆ ಇದೆ.

ಬಾಕಿ ಪಾವತಿಗಾಗಿ ಡಿಒಟಿ ಈಗಾಗಲೇ ಟೆಲಿಕಾಂ ಕಂಪನಿಗಳಿಗೆ ಐದು ನೋಟಿಸ್ ಗಳನ್ನು ನೀಡಿದ್ದು, ಅಕ್ಟೋಬರ್ 31, ನವೆಂಬರ್ 13, ಡಿಸೆಂಬರ್ 2, ಜನವರಿ 20 ಮತ್ತು ಫೆಬ್ರವರಿ 14ರಂದು ನೋಟಿಸ್ ಗಳನ್ನು ನೀಡಲಾಗಿದೆ. ಟೆಲಿಕಾಂ ಕಂಪನಿಗಳು ಸುಪ್ರೀಂ ಕೋರ್ಟ್ ಆದೇಶದಂತೆ ಬಾಕಿ ಪಾವತಿಸಬೇಕು. ನಾವು ಅವರಿಗೆ ಬಾಕಿ ಪಾವತಿ ವಿಸ್ತರಿಸಿಲ್ಲ. ಈಗ ಟೆಲಿಕಾಂ ಕಂಪನಿಗಳು ಸೋಮವಾರದೊಳಗೆ ಬಾಕಿ ಪಾವತಿಸುವುದಾಗಿ ಹೇಳುತ್ತಿವೆ. ಆದರೆ ವಿಳಂಬ ಮಾಡಿದ್ದಕ್ಕಾಗಿ ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿನ್ನೆ ಸುಪ್ರೀಂ ಕೋರ್ಟ್ ಚಾಟಿ ಬೀಸುತ್ತಿದ್ದಂತೆ ಎಚ್ಚೆತ್ತುಕೊಂಡ ಟೆಲಿಕಮ್ಯುನಿಕೇಷನ್ ಇಲಾಖೆ(ಡಿಒಟಿ), ಬಾಕಿ ಉಳಿಸಿಕೊಂಡಿರುವ ಹೊಂದಾಣಿಕೆ ಮಾಡಿದ ಒಟ್ಟು ವರಮಾನ(ಎಜಿಆರ್‌) ₹1.47 ಲಕ್ಷ ಕೋಟಿ ರೂ. ಅನ್ನು ಇಂದು ರಾತ್ರಿ 12 ಗಂಟೆಯೊಳಗೇ ಪಾವತಿಸುವಂತೆ ನಿನ್ನೆ ದೇಶದ ಟೆಲಿಕಾಂ ಕಂಪನಿಗಳಿಗೆ ಸೂಚಿಸಿತ್ತು. ಆದರೆ ಇದುವರೆಗೂ ಯಾವುದೇ ಕಂಪನಿ ಬಾಕಿ ಪಾವತಿಸಿಲ್ಲ. ಭಾರತಿ ಏರ್ಟೆಲ್ ಮಾತ್ರ ಫೆಬ್ರವರಿ 20ರೊಳಗೆ 10 ಸಾವಿರ ಕೋಟಿ ರುಪಾಯಿಯನ್ನು ಪಾವತಿಸುವುದಾಗಿ ಹೇಳಿದೆ.

ಟೆಲಿಕಾಂ ಕಂಪನಿಗಳು ಬಾಕಿ ಉಳಿಸಿ ಕೊಂಡಿರುವ ಹೊಂದಾಣಿಕೆ ಮಾಡಿದ ಒಟ್ಟು ವರಮಾನ(ಎಜಿಆರ್‌)ದ ಹಣ ಪಾವತಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ, ಕಂಪನಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ, ಸುಪ್ರೀಂ ಕೋರ್ಟ್ ಆದೇಶವನ್ನೇ ತಡೆ ಹಿಡಿದಿದ್ದ ಕೇಂದ್ರ ಟೆಲಿಕಮ್ಯುನಿಕೇಷನ್ ಇಲಾಖೆಯನ್ನು ಸರ್ವೋಚ್ಛ ನ್ಯಾಯಾಲಯ ನಿನ್ನೆ ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಬಳಿಕ ಎಚ್ಚೆತ್ತುಕೊಂಡ ಡಿಒಟಿ, ಮಧ್ಯರಾತ್ರಿಯೊಳಗೆ ಬಾಕಿ ಪಾವತಿಸುವಂತೆ ಭಾರತಿ ಏರ್ಟೆಲ್ ಹಾಗೂ ವೊಡಾಫೋನ್ ಗೆ ಆದೇಶಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com