ಮೋದಿ ಜೀ.., ಮಾಡ್ತಿದ್ದೀರ ವೆಸ್ಟ್ರನ್ ಆರ್ಥಿಕ ನೀತಿಯ ನಕಲು: ಸಣ್ಣ,ಮಧ್ಯಮ ಉದ್ದಿಮೆಗೆ ಹಾಕದಿರಿ ಉರುಳು... 

ಮೋದಿ ಜೀ, ನೀವು ಅಥವಾ ನಿಮ್ಮ ಸಲಹೆಗಾರರ ಮಂಡಳಿ ವೆಸ್ಟ್ರೇನ್ ಫೈನಾನ್ಸಿಯಲ್ ಪಾಲಿಸಿಯನ್ನ  (ಪಾಶ್ಚಿಮಾತ್ಯ ಆರ್ಥಿಕ ನೀತಿಗಳನ್ನು) ಕಾಪಿ ಮಾಡಿದ್ದೀರ ಎನ್ನುವುದರಲ್ಲಿ ನನಗೆ ಸಂಶಯವಿಲ್ಲ. ಇರಲಿ, ಈಗ ಮತ್ತೆ ಅವರನ್ನೇ ಕಾಪಿ ಮಾಡಿ ಪ್ಲೀಸ್, ನೋಡೋಣ....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಡಿಯರ್ ನರೇಂದ್ರ ಮೋದಿ ಜೀ, ನಮಸ್ತೆ, 

ಭಗವಂತನ ಮೇಲೆ ನಿಮಗೆ ವಿಪರೀತ ನಂಬಿಕೆ ಇದೆ ಎನ್ನುವುದನ್ನು ನಾನು ಬಲ್ಲೆ. ಬಹುಪಾಲು ಭಾರತೀಯರಂತೆ ನಿಮಗೂ ಧರ್ಮ ಮತ್ತು ಕರ್ಮಗಳಲ್ಲಿ ನಂಬಿಕೆಯಿದೆ. ಹಾಗಾಗಿ ಮುಂದಿನ ಸಾಲುಗಳನ್ನ ವಿಶ್ವಾಸ ಮತ್ತು ಬಹಳ ಧೈರ್ಯದಿಂದ ಬರೆಯುತ್ತಿದ್ದೇನೆ. ಮೋದಿ ಜೀ, ಭಗವಂತ ಎಲ್ಲರಿಗೂ ಅವರದೇ ಆದ ಪ್ರಶ್ನೆ ಪತ್ರಿಕೆ ಕೊಟ್ಟಿರುತ್ತಾನೆ. ಅದಕ್ಕೆ ತಕ್ಕ ಉತ್ತರ ಅವರು ಬರೆಯಬೇಕು. ಉತ್ತರ ಚೆನ್ನಾಗಿದೆ ಅಥವಾ ಕೈ ಬರಹ ಚೆನ್ನಾಗಿದೆ ಅಂತ ನಾವು ಬೇರೊಬ್ಬರ ಉತ್ತರ ಕಾಪಿ(ನಕಲು) ಮಾಡಿದರೆ ಏನಾಗುತ್ತೆ? ಉತ್ತರ... ಬುದ್ಧಿವಂತರಾದ ನಿಮಗೆ ನಾನು ಹೇಳುವುದೇನಿದೆ? ಯಾವುದೋ ಪ್ರಶ್ನೆಗೆ ಯಾವೊದೋ ಉತ್ತರ ಬರೆದರೆ ಪ್ರಯೋಜನವೇನು? ಅಲ್ವಾ?

ನಾನು ಮೊದಲ ದಿನದಿಂದಲೂ ನಿಮ್ಮ ಫೈನಾನ್ಶಿಯಲ್ ಪಾಲಿಸಿಗಳ (ಆರ್ಥಿಕ ನೀತಿಗಳ) ಆರಾಧಕನಲ್ಲ. ನಿಮ್ಮ ನಿಷ್ಠೆ ಮತ್ತು ಸ್ವಾರ್ಥ ರಹಿತ ನಡೆ-ನುಡಿಗಳು ನೀವು ಮಾಡಿದ್ದಕ್ಕೆಲ್ಲ ಜೈ ಅನ್ನುವಂತೆ ಮಾಡಿದವು. ನೀವು ನೋಟ್ ಬ್ಯಾನ್ ಮಾಡಿದ್ದು ಯಾವ ಕಾರಣಕ್ಕೆ ಎನ್ನುವ ನಿಖರತೆ ಬಂದ ಮೇಲೆ ನಾನು ನಿಮ್ಮ ದೊಡ್ಡ ಅಭಿಮಾನಿಯಾದೆ. ಇನ್ ಫ್ಯಾಕ್ಟ್ ನಾನು ನಿಮ್ಮ ಸೋಶಿಯಲ್ ಮೀಡಿಯಾ ಪೇಜ್ ಲೈಕ್ ಮಾಡಿದ್ದು ಆಗಲೇ. 

ಬಹಳಷ್ಟು ತರಾತುರಿಯಲ್ಲಿ ಜಿಎಸ್ ಟಿ ಜಾರಿಗೆ ತಂದಿರಿ. ಅದನ್ನೂ ನೋಟ್ ಬ್ಯಾನ್ ರೀತಿಯಲ್ಲಿ ಮಾಡುವ ಅಗತ್ಯ ಖಂಡಿತ ಇರಲಿಲ್ಲ. ಇವತ್ತಿಗೂ ಜಿಎಸ್ ಟಿ ಪೋರ್ಟಲ್ ದೇವರಿಗೇ ಪ್ರೀತಿ... ಕೊನೆಗೂ ನಿನ್ನೆ ಅಥವಾ ಮೊನ್ನೆ ಇನ್ಫೋಸಿಸ್ ಸಂಸ್ಥೆಗೆ ಜಿಎಸ್ ಟಿ ಪೋರ್ಟಲ್ ನಲ್ಲಿರುವ ಅವ್ಯವಸ್ಥೆಗಳನ್ನು ಬೇಗ ಸರಿಪಡಿಸಲು ತಾಕೀತು ಮಾಡಲಾಗಿದೆ ಎನ್ನುವುದು ಚೂರು ಸಮಾಧಾನ ಕೊಟ್ಟ ಅಂಶ. ನಿಮ್ಮ ಸರಕಾರ ಬಂದ ಮೇಲೆ ಇದ್ದಕ್ಕಿದ್ದಂತೆ ಬಡ್ಡಿ ದರವನ್ನ ಒಮ್ಮೆಲೇ ಅವೈಜ್ಞಾನಿಕವಾಗಿ ಇಳಿಸಿ ಬಿಟ್ಟಿರಿ. 6-8 ತಿಂಗಳೊಳಗೆ 2 ಪ್ರತಿಶತಕ್ಕಿಂತ ಕುಸಿದು ಬಿಟ್ಟಿತು. ಮೋದಿ ಜೀ, ಜಗತ್ತಿನ ಬೇರೆ ದೇಶಗಳ ಇತಿಹಾಸ ತೆಗೆದು ನೋಡಿ ಇಲ್ಲಿ ಆದಂತೆ ಆಗಿದ್ದರೆ ಅಲ್ಲಿ ಆಗೆಲ್ಲಾ ದಂಗೆಗಳಾಗಿವೆ. ಆದರೆ ಇಲ್ಲಿ ನಾವು ನಿಮ್ಮನ್ನ ಎಷ್ಟರ ಮಟ್ಟಿಗೆ ನಂಬಿದ್ದೇವೆ ಎಂದರೆ , ದಂಗೆ ಮಾತು ದೂರ. ಇಷ್ಟೊಂದು ಬಡ್ಡಿ ಇಳಿದರೆ ನಾವು ಬದುಕುವುದು ಹೇಗೆ ಎಂದು 12 ಕೋಟಿಗೂ ಮೀರಿದ ಹಿರಿಯ ನಾಗರಿಕರು ಒಂದು ಸಣ್ಣ ಸ್ಟ್ರೈಕ್ ಕೂಡ ಮಾಡಲಿಲ್ಲ. ನಮ್ಮ ಬದುಕು ಮುಗಿಯಿತು, ಮುಂದಿನ ಜನಾಂಗಕ್ಕೆ ಒಳಿತಾಗುವುದಾದರೆ ನಾವೇಕೆ ಅಡ್ಡ ಬರಬೇಕು ಎನ್ನುವ ಮನೋಭಾವ ಅವರದ್ದು. ಬಡ್ಡಿ ಇಳಿದು ಬಿಟ್ಟರೆ ಸಾಕು ವ್ಯಾಪಾರ ವಹಿವಾಟು ಹೆಚ್ಚಾಗುತ್ತದೆ. ಸಮಾಜದಲ್ಲಿ ಹಣದ ಹರಿವು ಹೆಚ್ಚಾಗುತ್ತದೆ ಎಂದು ನಿಮ್ಮ ಹಣಕಾಸು ಸಲಹೆಗಾರರ ಮಂಡಳಿ ನಿಮ್ಮ ಕಿವಿ ಕಚ್ಚಿತು. ನೀವು ಅದನ್ನ ನಂಬಿ ಅವೈಜ್ಞಾನಿಕವಾಗಿ ಬಡ್ಡಿ ದರವನ್ನ ಪಾತಾಳಕ್ಕೆ ಕುಸಿಯುವಂತೆ ಮಾಡಿದಿರಿ. ಇವತ್ತೇನಾಗಿದೆ? ಜನರ ಕೈಗೆ ಸಿಗುತ್ತಿದ್ದ ಬಡ್ಡಿ ಹಣದಲ್ಲಿ ಕುಸಿತವಾಗಿದೆ. ವ್ಯಾಪಾರ ವಹಿವಾಟು ಜನ ಸಾಮಾನ್ಯನಿಗೆ ಯಾವುದೇ ಲಾಭ ಕೂಡ ತಂದುಕೊಟ್ಟಿಲ್ಲ. ಕುಸಿದ ಬಡ್ಡಿ ದುಡ್ಡಿನ ಹಣ ಎಲ್ಲಿ? ನಿಮ್ಮ ಮೊದಲ ಟರ್ಮ್ ನಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಸಾಕಷ್ಟು ಕುಸಿತವಾಗಿತ್ತು. ವರ್ಷಾನುಗಟ್ಟಲೆ ಸಾವಿರಾರು ಅಲ್ಲ ಲಕ್ಷಾಂತರ ಕೋಟಿ ರೂಪಾಯಿ ಹಣ ಉಳಿತಾಯ ಆಯ್ತು. ಜನರಿಗೆ ಕಡಿಮೆ ಬೆಲೆ ವರ್ಗಾವಣೆ ಆಗಲೇ ಇಲ್ಲ. ಹಾಳಾಗಿ ಹೋಗ್ಲಿ ಕಾಂಗ್ರೆಸ್ ಮಾಡಿದ ಸಾಲ ತೀರಿಸಿದ್ದಾರೆ ಅಂತ ಜನ ಸುಮ್ಮನಾದರು. ಇವತ್ತು ಕಚ್ಚಾ ತೈಲ ಬೆಲೆ ಕುಸಿದಿದೆ. ಅದು ಜನರಿಗೆ ಏಕೆ ವರ್ಗಾವಣೆ ಆಗ್ತಾ ಇಲ್ಲ? 15 ಪೈಸೆ, 40 ಪೈಸೆ ಹೀಗೆ ಚಿಲ್ಲರೆ ಹಣ ಕಡಿಮೆಯಾಗಿದೆ ಅಷ್ಟೇ...

ಗಮನಿಸಿ ಮೋದಿ ಜೀ ಸರಕಾರದ ಹಣಕಾಸು ನೀತಿಗಳು ದೇಶಿಯವಲ್ಲ. ಬಡ್ಡಿ ದರ ಅತಿ ಕಡಿಮೆ ಇರುವುದು, ತನ್ನ ಪ್ರತಿಯೊಬ್ಬ ಪ್ರಜೆಯ ಸುರಕ್ಷತೆ ಬಗ್ಗೆ ಕಾಳಜಿ ವಹಿಸುವು ಅಂದರೆ ಸೋಶಿಯಲ್ ಸೆಕ್ಯುಟಿರಿ ಕಾಪಾಡುವುದು ಇವೆಲ್ಲ ವೆಸ್ಟ್ರೇನ್ ಶೈಲಿ. ಇದು ತುಂಬಾ ಒಳ್ಳೆಯದು. ಅವರ ಪ್ರಶ್ನೆಗೆ ಅವರ ಉತ್ತರ ಮ್ಯಾಚ್ ಆಗಿತ್ತು. ಅದಕ್ಕೆ ಅಲ್ಲಿ ಪೂರ್ಣ ಅಂಕ ದೊರಕಿದೆ. ಆದರೆ  ಮೋದಿ ಸರಕಾರ ಉತ್ತರ ಕಾಪಿ ಹೊಡೆದು ಬಿಟ್ಟಿತು!!. ಬಡ್ಡಿ ದರ ಇಳಿಸಿ ಬಿಟ್ಟಿತು, ಹತ್ತಾರು ಸಾಮಾಜಿಕ ಯೋಜನೆ ಘೋಷಿಸಿ ಬಿಟ್ಟಿತು. ಆದರೇನು ನಾವು ಆ ಯೋಜನೆಗಳ ಫಲಾನುಭವಿಗಳಾಗಲು ಸಾಧ್ಯವಾಗಲಿಲ್ಲ. ಸರಕಾರಿ ವ್ಯವಸ್ಥೆಯಲ್ಲಿ ಜಿಡ್ಡು ಗಟ್ಟಿರುವ ರೆಡ್ ಟೇಪಿಸಂ ಕಡಿಮೆಯಾಗಲೇ ಇಲ್ಲ. ಸರಕಾರಿ ಆಸ್ಪತ್ರೆಗಳಿಗೆ ನಾವು ಹೆಜ್ಜೆ ಇಡಲು ಸಾಧ್ಯವೇ? ಅಲ್ಲಿಗೆ ತನ್ನೆಲ್ಲಾ ಪ್ರಜೆಗಳ ಸೋಶಿಯಲ್ ಸೆಕ್ಯುರಿಟಿ ಎನ್ನುವ ಪದ ಗೌಜಾಗಿ ಹಳ್ಳ ಹಿಡಿಯಿತು. ಕಡಿಮೆಯಾದ ಬಡ್ಡಿ ಮೊತ್ತ ಜನರ ಆದಾಯ ಕೂಡ ಕುಸಿಯುವಂತೆ ಮಾಡಿತು. ಪೆನ್ಷನ್ ಇಲ್ಲ, ಸರಕಾರಿ ಆಸ್ಪತ್ರೆಗೆ ಹೋಗಲಾಗದ ಬ್ಯಾಂಕಿನಿಂದ ಬರುವ ಬಡ್ಡಿಯನ್ನ ನಂಬಿ ಬದುಕುತ್ತಿದ್ದ ಕೋಟ್ಯಂತರ ಹಿರಿಯ ನಾಗರಿಕರ ಬದುಕು ಯಾರಿಗೂ ಬೇಡ ಎನ್ನುವಂತಾಗಿದೆ. ಸಣ್ಣ ಉಳಿತಾಯದ ಮೇಲಿನ ಬಡ್ಡಿ ದರವನ್ನ ಕೂಡ ಇಳಿಸಿ ಎಂದು ನಿಮ್ಮ ಸಲಹೆಗಾರ ಮಂಡಳಿ ಮತ್ತೆ ನಿಮ್ಮ ಕಿವಿ ಕಚ್ಚಿದೆ ಎನ್ನುವುದು ಮಾಧ್ಯಮಗಳ ಮೂಲಕ ತಿಳಿದುಬಂದಿದೆ. ಜನ ಬೇಸತ್ತುಹೋಗುವ ಮುನ್ನ ಎಚ್ಚೆತ್ತುಕೊಳ್ಳಿ. ಇನ್ನು 20 ವರ್ಷವಾದರೂ ಇಲ್ಲಿನ ಕೆಲವು ವಿಷಯಗಳನ್ನ ನೀವು ಬದಲಾವಣೆ ಮಾಡಲು ಸಾಧ್ಯವಿಲ್ಲ. ಭಾರತೀಯ ಅರ್ಥ ವ್ಯವಸ್ಥೆಯ ಬೆನ್ನುಹುರಿ 'ಸಣ್ಣ ಉಳಿತಾಯ' ಅಲ್ಲಿಗೆ ಕೊಳ್ಳಿ ಇಡುವ ಪ್ರಯತ್ನ ಮಾಡಬೇಡಿ ಪ್ಲೀಸ್.

ಮೋದಿ ಜೀ, ನೀವು ಅಥವಾ ನಿಮ್ಮ ಸಲಹೆಗಾರರ ಮಂಡಳಿ ವೆಸ್ಟ್ರೇನ್ ಫೈನಾನ್ಸಿಯಲ್ ಪಾಲಿಸಿಯನ್ನ  (ಪಾಶ್ಚಿಮಾತ್ಯ ಆರ್ಥಿಕ ನೀತಿಗಳನ್ನು) ಕಾಪಿ ಮಾಡಿದ್ದೀರ ಎನ್ನುವುದರಲ್ಲಿ ನನಗೆ ಸಂಶಯವಿಲ್ಲ. ಇರಲಿ, ಈಗ ಮತ್ತೆ ಅವರನ್ನೇ ಕಾಪಿ ಮಾಡಿ ಪ್ಲೀಸ್, ನೋಡೋಣ....

ಕೊರೋನ ಬಂದ ಕಾರಣ ಸಣ್ಣ ಮತ್ತು ಮಧ್ಯಮ ಮಟ್ಟದ ಬಿಸಿನೆಸ್ ಗಳು ಕುಸಿದಿವೆ. ಇದೇ ಸ್ಥಿತಿ ಇನ್ನೊಂದು ಅಥವಾ ಎರಡು ತಿಂಗಳು ಮುಂದುವರೆದರೆ ಅವುಗಳ ಅಳಿವು ಶತಃಸಿದ್ಧ. ಸ್ಪೇನ್ ದೇಶದಲ್ಲಿ ಸಾವಿರಾರು ಕೋಟಿ ಯುರೊವನ್ನ ಇಂತಹ ಉದ್ಯಮಗಳನ್ನು ಉಳಿಸಿಕೊಳ್ಳಲು ಪ್ಯಾಕೇಜ್ ರೂಪದಲ್ಲಿ ನೀಡಿದ್ದಾರೆ. ಇಟಲಿ ದೇಶದಲ್ಲಿ ದೇಶದ ಪ್ರಜೆಗಳಿಗೆ ತಮ್ಮ ತಿಂಗಳ ಕಂತು (ಇಎಂಐ) ಕಟ್ಟದಂತೆ ಹೇಳಿದೆ. ಅಮೇರಿಕಾ ಇದನ್ನ ನ್ಯಾಷನಲ್ ಎಮರ್ಜೆನ್ಸಿ ಎಂದು ಘೋಷಿಸಿದೆ. 50 ಬಿಲಿಯನ್ ಡಾಲರ್ ಹಣವನ್ನ ಈ ವಿಷಯಕ್ಕೆ ತೆಗೆದಿರಿಸಿದೆ. ಜನ ಕೇಳುವ ಮುನ್ನ ನೀವು ಕೂಡ ಜಿಎಸ್ಟಿ ಕಟ್ಟಿರುವ ಮತ್ತು ಕಟ್ಟುತ್ತಿರುವ ಪ್ರತಿಯೊಂದು ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆದಾರರಿಗೆ ಪ್ಯಾಕೇಜ್ ಘೋಷಿಸಿ. ನೀವು ಅವರನ್ನ ಕಾಪಿ ಮಾಡೋದಾದ್ರೆ ಎಲ್ಲದರಲ್ಲೂ ಮಾಡಿ ಪ್ಲೀಸ್.

ದುರ್ಭಿಕ್ಷದಲ್ಲಿ ಅಧಿಕಮಾಸ ಎನ್ನುವಂತೆ ಕರೋನ ಬಂದು ವಕ್ಕರಿಸಿದೆ. ನೀವು ಅನಿವಾಸಿಗಳನ್ನು ರೆಸ್ಕ್ಯೂ ಮಾಡಿದ್ದು, ಲ್ಯಾಬ್ ಕಳಿಸಿದ್ದು, ಏರ್ ಲಿಫ್ಟ್ ಮಾಡಿಸಿದ್ದು ಎಲ್ಲಾ ಓಕೆ, ಕರ್ನಾಟಕದಲ್ಲಿ ಒಂದು ವಾರ ಲಾಕ್ ಡೌನ್ ಇದೆ. ನಮ್ಮ ರಾಜ್ಯ ಕರ್ನಾಟಕ ನಿಮಗೆ ಅತಿ ಹೆಚ್ಚು ಜಿಎಸ್ ಟಿ ಕೊಡುವ ರಾಜ್ಯಗಳಲ್ಲಿ ಪ್ರಮುಖವಾದದ್ದು. ಬೇಗ ನಮ್ಮ ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆದಾರರಿಗೆ ಪ್ಯಾಕೇಜ್ ಘೋಷಿಸಿ, ಇಷ್ಟಕ್ಕೂ ಅದು ಅವರೇ ದುಡಿದು ಕಟ್ಟಿದ ಹಣವಲ್ಲವೇ?

ವಿಶೇಷ ಸೂಚನೆ: ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆದಾರರು ಸರಿ ಎನ್ನಿಸಿದಲ್ಲಿ ಇದನ್ನ ಸರಕಾರಕ್ಕೆ ತಲುಪಿಸುವ ಕೆಲಸ ಮಾಡಿ. ನಿಮ್ಮ ಹಕ್ಕಿಗೆ ನೀವೇ ಹೋರಾಡಬೇಕು, ನೆನಪಿರಲಿ ಅಳದೆ ತಾಯಿ ಕೂಡ ಹಾಲು ಕೊಡದ ಸಮಯದಲ್ಲಿ ನಾವು ಬದುಕುತ್ತಿದ್ದೇವೆ....ಶುಭವಾಗಲಿ...

- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com