ಕೊರೋನಾ ವೈರಸ್ ಭೀತಿ: ಸೆನ್ಸೆಕ್ಸ್ 2,713 ಅಂಕ ಕುಸಿತ, ಹೂಡಿಕೆದಾರರಿಗೆ 7.50 ಲಕ್ಷ ಕೋಟಿ ರೂ ನಷ್ಟ!

ಇಡೀ ವಿಶ್ವವನ್ನು ಕಾಡುತ್ತಿರುವ ಮಾರಕ ಕೊರೋನಾ ವೈರಸ್ ಗೆ ಸತತ 5ನೇ ದಿನವೂ ಭಾರತೀಯ ಷೇರುಮಾರುಕಟ್ಟೆ ಬಲಿಯಾಗಿದ್ದು, ಒಂದೇ ದಿನ ಹೂಡಿಕೆದಾರರಿಗೆ ಬರೊಬ್ಬರಿ 7.50 ಲಕ್ಷ ಕೋಟಿ ರೂ ನಷ್ಟವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ:  ಇಡೀ ವಿಶ್ವವನ್ನು ಕಾಡುತ್ತಿರುವ ಮಾರಕ ಕೊರೋನಾ ವೈರಸ್ ಗೆ ಸತತ 5ನೇ ದಿನವೂ ಭಾರತೀಯ ಷೇರುಮಾರುಕಟ್ಟೆ ಬಲಿಯಾಗಿದ್ದು, ಒಂದೇ ದಿನ ಹೂಡಿಕೆದಾರರಿಗೆ ಬರೊಬ್ಬರಿ 7.50 ಲಕ್ಷ ಕೋಟಿ ರೂ ನಷ್ಟವಾಗಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಇಂದು 2,713 ಅಂಶ ಇಳಿಕೆಯಾಗಿ 31,390.07 ತಲುಪಿತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ ಕೂಡ 756.10 ಅಂಶ ಕುಸಿದು 9,199.10 ಅಂಶಕ್ಕೆ ಕುಸಿಯಿತು. ಶುಕ್ರವಾರ 45 ನಿಮಿಷಗಳ ವಹಿವಾಟು ನಂತರದಲ್ಲಿ ಏರಿಕೆ ಕಂಡಿದ್ದ ಷೇರುಗಳು ಇಂದು ಮತ್ತೆ ಭಾರಿ ಕುಸಿತ ಕಂಡಿವೆ. 

ಜಾಗತಿಕವಾಗಿ ಹಬ್ಬುತ್ತಿರುವ ಕೊರೊನವೈರಸ್‍ ಪರಿಸ್ಥಿತಿ ನಡುವೆ ದೇಶದ ಆರ್ಥಿಕತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಅಮೆರಿಕ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಭಾನುವಾರ ಸರಿಸುಮಾರು ಶೂನ್ಯಕ್ಕೆ ಇಳಿಸಿದೆ. ಆದರೂ ಮಾರುಕಟ್ಟೆಯಲ್ಲಿ ಕರೋನವೈರಸ್ ಸೋಂಕಿನ ಪರಿಸ್ಥಿತಿ ಹೂಡಿಕೆದಾರರ ಮನೋಭಾವವನ್ನು ಕುಗ್ಗಿಸಿದೆ. ನಿಫ್ಟಿ ದಿನದ ಕನಿಷ್ಠ ಮತ್ತು ಗರಿಷ್ಠ 9,602.20 ಹಾಗೂ ಕನಿಷ್ಠ 9,165.10 ಮಟ್ಟದಲ್ಲಿತ್ತು. ವಲಯ ಸೂಚ್ಯಂಕಗಳಾದ ರಿಯಾಲ್ಟಿ, ತಂತ್ರಜ್ಞಾನ, ವಿದ್ಯುತ್ ಮತ್ತು ಲೋಹ ಷೇರುಗಳು ಮಾರುಕಟ್ಟೆಯನ್ನು ಒತ್ತಡಕ್ಕೆ ಸಿಲುಕಿಸಿವೆ ಎಂದು ಮಧ್ಯವರ್ತಿಗಳು ಮಾಹಿತಿ ನೀಡಿದ್ದಾರೆ. ಇಂಡಸ್‌ಇಂಡ್ ಬ್ಯಾಂಕ್‍, ಐಸಿಐಸಿಐ ಬ್ಯಾಂಕ್, ಬಜಾಜ್‍ ಫೈನಾನ್ಸ್, ಆಕ್ಸಿಸ್ ಬ್ಯಾಂಕ್‍, ಇನ್ಫೋಸಿಸ್‍ ಷೇರುಗಳು ತೀವ್ರ ನಷ್ಟ ಕಂಡಿವೆ.

ಕೊರೋನಾಗೆ ಜಗತ್ತಿನಾದ್ಯಂತ 6,000ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ ಹಾಗೂ 1,62,000ಕ್ಕೂ ಅಧಿಕ ಜನರು ಸೋಂಕಿಗೆ ಒಳಗಾಗಿದ್ದಾರೆ. ಭಾರತದಲ್ಲಿ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ 110ಕ್ಕೆ ಏರಿಕೆಯಾಗಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com