ಕೊರೋನಾ ಪರಿಣಾಮ ಆರ್ಥಿಕ ಹಿಂಜರಿತ ಎದುರಿಸಲಿದೆ ಜಗತ್ತು; ಭಾರತ, ಚೀನಾ ಇದಕ್ಕೆ ಹೊರತು: ವಿಶ್ವಸಂಸ್ಥೆ

ಕೊರೋನಾ ವೈರಸ್ ನಿಂದ ಜಗತ್ತೇ ತತ್ತರಿಸಿದ್ದು, ಜಾಗತಿಕ ಮಟ್ಟದಲ್ಲಿ ಇನ್ನೂ ಹೆಚ್ಚಿನ ಆರ್ಥಿಕ ಹಿಂಜರಿತ ತಲೆದೋರಲಿದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. 

Published: 31st March 2020 05:55 PM  |   Last Updated: 02nd April 2020 08:40 PM   |  A+A-


China-India

ಚೀನಾ-ಭಾರತ

Posted By : Srinivas Rao BV
Source : PTI

ವಿಶ್ವಸಂಸ್ಥೆ: ಕೊರೋನಾ ವೈರಸ್ ನಿಂದ ಜಗತ್ತೇ ತತ್ತರಿಸಿದ್ದು, ಜಾಗತಿಕ ಮಟ್ಟದಲ್ಲಿ ಇನ್ನೂ ಹೆಚ್ಚಿನ ಆರ್ಥಿಕ ಹಿಂಜರಿತ ತಲೆದೋರಲಿದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. 

ಈ ವರ್ಷ ಜಾಗತಿಕ ಆದಾಯದಲ್ಲಿ ಟ್ರಿಲಿಯನ್ ಡಾಲರ್ ಗಟ್ಟಲೆ ನಷ್ಟ ಸಂಭವಿಸಲಿದ್ದು, ಇದರ ನೇರ ಪರಿಣಾಮ ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲಾಗಲಿದೆ, ಆದರೆ ಇದಕ್ಕೆ ಭಾರತ ಮತ್ತು ಚೀನಾ ಹೊರತಾಗುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆ ವ್ಯಾಪಾರ ವಿಭಾಗದ ವರದಿ ಹೇಳಿದೆ. 

ಜಾಗತಿಕ ಜನಸಂಖ್ಯೆಯ ಮೂರನೇ ಎರಡಕ್ಕೂ ಅಧಿಕ ಮಂದಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲೇ ಜೀವಿಸುತ್ತಿದ್ದು, ಕೊರೋನಾದಿಂದ ಈ ಅಭಿವೃದ್ಧಿಶೀಲ ರಾಷ್ಟ್ರಗಳು ಹಿಂದೆಂದೂ ಕಾಣದಂತಹ ಆರ್ಥಿಕ ಹೊಡೆತ ಎದುರಿಸುತ್ತಿವೆ. ಇಂತಹ ಪರಿಸ್ಥಿತಿಯಿಂದ ಚೇತರಿಸಿಕೊಳ್ಳುವಂತೆ ಮಾಡುವುದಕ್ಕೆ  ಈ ರಾಷ್ಟ್ರಗಳಿಗೆ ವಿಶ್ವಸಮುದಾಯ 2.5 ಟ್ರಿಲಿಯನ್ ಡಾಲರ್ ಪ್ಯಾಕೇಜ್ ನೆರವು ನೀಡುವಂತೆ ವಿಶ್ವಸಂಸ್ಥೆ ಕರೆ ನೀಡಿದೆ. 

ವಿಶ್ವಸಂಸ್ಥೆಯ ವ್ಯಾಪಾರ ಅಭಿವೃದ್ಧಿಗೆ ಸಂಬಂಧಿಸಿದ ವಿಭಾಗ (ಯುಎನ್ ಸಿಟಿಎಡಿ)ಯಲ್ಲಿ ಕೊರೋನಾ ಹಾಗೂ ಜಗತ್ತಿನ ಆರ್ಥಿಕತೆ ಮೇಲೆ ಅದರ ಪರಿಣಾಮಗಳನ್ನು ವಿಶ್ಲೇಷಿಸಲಾಗಿದ್ದು, ಸರಕು ರಫ್ತು ಮಾಡುತ್ತಿರುವ ರಾಷ್ಟ್ರಗಳು ವಿದೇಶಿ ಹೂಡಿಕೆಯಲ್ಲಿ ಮುಂದಿನ 2 ವರ್ಷಗಳ ಕಾಲ 2 ಟ್ರಿಲಿಯನ್ ಡಾಲರ್ ನಿಂದ 3 ಟ್ರಿಲಿಯನ್ ಡಾಲರ್ ನಷ್ಟ ಎದುರಿಸಬೇಕಾಗುತ್ತದೆ ಎಂದು ಹೇಳಿದೆ. 

ಇನ್ನು ಅಭಿವೃದ್ಧಿ ಹೊಂದಿದ ಆರ್ಥಿಕತೆಗಳಾದ ಚೀನಾ ಸೇರಿದಂತೆ ಹಲವು ರಾಷ್ಟ್ರಗಳು ಸರ್ಕಾರಿ ಪ್ಯಾಕೇಜ್ ಗಳನ್ನು ಒಗ್ಗೂಡಿಸಿದ್ದು, ಜಿ-20 (ಮುನ್ನಡೆಯುತ್ತಿರುವ 20 ಆರ್ಥಿಕತೆಯ ತಂಡ)ರಾಷ್ಟ್ರಗಳಿಗೆ 5 ಟ್ರಿಲಿಯನ್ ನೆರವು ನೀಡಲಿದೆ ಎಂದು ಯು ಎನ್ ಸಿಟಿಎಡಿ ಹೇಳಿದೆ. 

ಇಷ್ಟೆಲ್ಲಾ ಪ್ರಯತ್ನದ ನಡುವೆಯೂ ಜಾಗತಿಕ ಆದಾಯ ಟ್ರಿಲಿಯನ್ ಡಾಲರ್ ಗಟ್ಟಲೆ ಕುಸಿತ ಕಾಣಲಿದೆ. ಇದು ಅಭಿವೃದ್ಧಿಶೀಲ ರಾಷ್ಟ್ರಗಳು ಹೆಚ್ಚು ಸಮಸ್ಯೆ ಎದುರಿಸುವಂತೆ ಮಾಡುತ್ತದೆ, ಆದರೆ ಚೀನಾ ಹಾಗೂ ಭಾರತ ಈ ಸಮಸ್ಯೆಯಿಂದ ಬಹುಶಃ  ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಯುಎನ್ ಸಿಟಿಎಡಿ ಹೇಳಿದೆ. ಆದರೆ ಚೀನಾ ಹಾಗೂ ಭಾರತ ತಪ್ಪಿಸಿಕೊಳ್ಳಲು ಸಹಕಾರಿಯಾಗಿರುವ ಅಂಶಗಳು ಹಾಗೂ ಕಾರಣಗಳ ಬಗ್ಗೆ ವಿಶ್ವಸಂಸ್ಥೆ ವಿವರಣೆ ನೀಡಿಲ್ಲ. 

Stay up to date on all the latest ವಾಣಿಜ್ಯ news with The Kannadaprabha App. Download now
facebook twitter whatsapp