ಸಣ್ಣ ರೈತರಿಗೆ 4 ಲಕ್ಷ ರೂ. ವರೆಗೆ ಸಾಲ ಸೌಲಭ್ಯ, ವಲಸೆ ಕಾರ್ಮಿಕರಿಗೆ 11 ಸಾವಿರ ಕೋಟಿ ರೂ. ಹಂಚಿಕೆ: ಸೀತಾರಾಮನ್

ಕೊರೋನಾ ವೈರಸ್ ಮತ್ತು ಲಾಕ್ ಡೌನ್ ಹಿನ್ನೆಲೆಯಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ರೈತರು, ವಲಸೆ ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳಿಗಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಪರಿಹಾರ ಪ್ಯಾಕೇಜ್‌ ಅನ್ನು ಪ್ರಕಟಿಸಿದ್ದಾರೆ.
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್

ನವದೆಹಲಿ: ಕೊರೋನಾ ವೈರಸ್ ಮತ್ತು ಲಾಕ್ ಡೌನ್ ಹಿನ್ನೆಲೆಯಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ರೈತರು, ವಲಸೆ ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳಿಗಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಪರಿಹಾರ ಪ್ಯಾಕೇಜ್‌ ಅನ್ನು ಪ್ರಕಟಿಸಿದ್ದಾರೆ.

ಇಂದು 9 ಪ್ರಮುಖ ನಿರ್ಧಾರಗಳನ್ನು ಘೋಷಿಸಲಾಗುವುದು. ಅದರಲ್ಲಿ ಮೂರು ವಲಸೆ ಕಾರ್ಮಿಕರಿಗೆ, ಒಂದು ಮುದ್ರಾದೊಂದಿಗೆ ಶಿಶು ಸಾಲ, ಮತ್ತೊಂದು ರಸ್ತೆ ಬದಿಯ ವ್ಯಾಪಾರಿಗಳಿಗೆ, ಮತ್ತೊಂದು ಗೃಹ, 1 ಬುಡಕಟ್ಟು ಜನಾಂಗದ ಉದ್ಯೋಗ ಪೀಳಿಗೆಗೆ ಹಾಗೂ ಎರಡು ನಿರ್ಧಾರಗಳು ಸಣ್ಣ ರೈತರನ್ನು ಒಳಗೊಂಡಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾಹಿತಿ ನೀಡಿದರು.

ಕಳೆದ ಮೂರು ತಿಂಗಳಿನಿಂದ ದೇಶದ ರೈತ ಸಮುದಾಯಕ್ಕೆ ಅನುಕೂಲವಾಗುವಂತ ಹಲವು ಯೋಜನೆಗಳನ್ನು ಘೋಷಿಸಲಾಗಿದ್ದು, ಸಣ್ಣ ರೈತರಿಗೆ 4 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ ಕಲ್ಪಿಸಲು ನಿರ್ಧರಿಸಲಾಗಿದೆ. ಹೊಸದಾಗಿ 25 ಲಕ್ಷ ಕಿಸಾನ್ ಕ್ರೆಡಿಟ್ ಕಾರ್ಡುಗಳನ್ನು ಮಂಜೂರು ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.

ಸಕಾಲದಲ್ಲಿ ಸಾಲ ಮರುಪಾವತಿಸಿರುವ ರೈತರಿಗೆ ಮೇ 31ರವರೆಗೆ ಬಡ್ಡಿ ರಿಯಾಯಿತಿ ನೀಡಲಾಗುವುದು. ಸಣ್ಣ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಮಂಜೂರು ಮಾಡುವ ವ್ಯವಸ್ಥೆ ರೂಪಿಸಲಾಗುವುದು ಎಂದರು.

ವಲಸೆ ಕಾರ್ಮಿಕರು ಸುರಕ್ಷಿತವಾಗಿ ಮನೆ ತಲುಪಲು ಕೇಂದ್ರ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದ್ದು, ಈಗಾಗಲೇ ಅವರಿಗೆ ಎರಡು ತಿಂಗಳ ಉಚಿತ ರೇಷನ್ ನೀಡುವ ಘೋಷಣೆ ಮಾಡಲಾಗಿದೆ ಎಂದರು.

5 ಕೆಜಿ ಅಕ್ಕಿ ಅಥವಾ ಗೋದಿ, 1 ಕೆಜಿ ಬೆಳೆಕಾಳುಗಳು ಸೇರಿದಂತೆ ಉಚಿತ ರೇಷನ್ ನೀಡಲಾಗುತ್ತಿದ್ದು, ಇದರಿಂದ 8 ಕೋಟಿ ವಲಸೆ ಕಾರ್ಮಿಕರಿಗೆ ಅನುಕೂಲವಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ವಲಸೆ ಕಾರ್ಮಿಕರಿಗಾಗಿ 11 ಸಾವಿರ ಕೋಟಿ ರೂಪಾಯಿ ಹಂಚಿಕೆ ಮಾಡಲಾಗುವುದು. ಬೀದಿ ಬದಿಯ ವ್ಯಾಪಾರಿಗಳಿಗಾಗಿ ಪ್ರತ್ಯೇಕ ಪ್ಯಾಕೇಜ್ ಪ್ರಕಟಿಸಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಕ್ಕಾಗಿ 4,200 ಕೊಟಿ ಹಂಚಿಕೆ ಮಾಡಲಾಗುವುದು. 

ವಲಸೆ ಕಾರ್ಮಿಕರಿಗೆ ಎಲ್ಲ ರೀತಿಯಲ್ಲೂ ನೆರವಾಗಲು ಪ್ರಯತ್ನ ನಡೆಸಲಾಗುವುದು. ಪಟ್ಟಣ ಪ್ರದೇಶಗಳಲ್ಲಿ ಬಡ ಕಾರ್ಮಿಕರಿಗಾಗಿ 3 ಕೋಟಿ ಮುಖಗವುಸು ಪೂರೈಸಲಾಗುವುದು. ವಲಸೆ ಕಾರ್ಮಿಕರಿಗೆ ಮೂರು ಹೊತ್ತು ಆಹಾರ ಒದಗಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸಲಾಗುವುದು. ಈ ಸಂಬಂಧ ನೆರವು ಶಿಬಿರ ಆಯೋಜಿಸಲಾಗುವುದು. ಭೋಜನ ವ್ಯವಸ್ಥೆಗೆ 11 ಸಾವಿರ ಕೋಟಿ ಹಂಚಿಕೆ ಮಾಡಲಾಗಿದೆ. ವಲಸೆ ಕಾರ್ಮಿಕರು ಈಗ ಇರುವಲ್ಲಿಯೇ ಹೊಸದಾಗಿ ನೋಂದಣಿ ಮಾಡಿಕೊಂಡು ಉಪಯೋಗ ಪಡೆಯಬಹುದು. ವಲಸೆ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ನಗರ ಪ್ರದೇಶಗಳ ಕಾರ್ಮಿಕರಿಗೆ ವ್ಯವಸ್ಥೆ ಮಾಡಿರುವ ವಸತಿ ಶಿಬಿರಗಳಲ್ಲಿ ಮೂರು ಹೊತ್ತು ಭೋಜನ ಒದಗಿಸಲಿದ್ದೇವೆ. ದೇಶಾದ್ಯಂತ ಒಂದೇ ಮಾದರಿ ಕೂಲಿ ದರ ಇರುವಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಎಲ್ಲ ವಲಸೆ ಕಾರ್ಮಿಕರಿಗೂ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು, ಅವರೆಲ್ಲರಿಗೂ ವಿಮಾ ಸೌಲಭ್ಯ ಕಲ್ಪಿಸಲಾಗುವುದು. ಬುಡಕಟ್ಟು ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಸಲು ವಿಶೇಷ ಕಾರ್ಯಕ್ರಮ ರೂಪಿಸಲಾಗುವುದು ಎಂದು ಪ್ರಕಟಿಸಿದ್ದಾರೆ.

ಪ್ಯಾಕೇಜ್ ವಿವರಗಳು:

  • ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ರೈತರಿಗೆ 86,600 ಕೋಟಿ ರೂ ಸಾಲ. 
  • ಸಣ್ಣ ಪ್ರಮಾಣದ ರೈತರಿಗೆ 4 ಲಕ್ಷ ಕೋಟಿ ಸಾಲ.
  • 25 ಲಕ್ಷಕ್ಕೂ ಹೆಚ್ಚು ಹೊಸ ಕಿಸಾನ್‌ಕಾರ್ಡ್, 25 ಸಾವಿರ ಕೋಟಿ ರೂ ಸಾಲ. 
  • ಕೃಷಿ ಉತ್ಪನ್ನಗಳ ಖರೀದಿಗಾಗಿ ರಾಜ್ಯಗಳಿಗೆ 6,700 ಕೋಟಿ ರೂ.
  • 29,500 ಗ್ರಾಮೀಣ ಬ್ಯಾಂಕುಗಳಿಗೆ ನಬಾರ್ಡ್‌ನಿಂದ ಧನಸಹಾಯ. 
  • ಸಣ್ಣ ಮತ್ತು ಮಧ್ಯಮ ರೈತರಿಗೆ 30,000 ಕೋಟಿ ರೂ ಸಾಲ. 
  • ಸಹಕಾರಿ ಬ್ಯಾಂಕುಗಳ ರೈತರಿಗೆ ಹೆಚ್ಚುವರಿ 3,000 ಕೋಟಿ ರೂ ಸಾಲ. 
  • ಸಣ್ಣ ವ್ಯಾಪಾರಿಗಳಿಗೆ ಸಹಾಯ ಮಾಡಲು ವಿವಿಧ ಯೋಜನೆ.
  • ರೈತರು ಮತ್ತು ಬಡವರಿಗೆ 9 ಅಂಶಗಳ ಸೂತ್ರ.
  • ವಲಸೆ ಕಾರ್ಮಿಕರನ್ನು ಸರ್ಕಾರ ನಿರ್ಲಕ್ಷಿಸುವುದಿಲ್ಲ.
  • ರೈತರಿಗೆ ಸಹಾಯ ಮಾಡಲು ಪ್ಯಾಕೇಜ್‌ನಲ್ಲಿ ಎರಡು ಯೋಜನೆಗಳು.
  • ಸಣ್ಣ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ.
  • ಗ್ರಾಮೀಣ ಆರ್ಥಿಕತೆಗೆ ನಗದು ಲಭ್ಯತೆ ಖಾತರಿಗೆ ಕ್ರಮ 
  • ವಲಸೆ ಕಾರ್ಮಿಕರ ಉದ್ಯೋಗಕ್ಕಾಗಿ 10,000 ಕೋಟಿ ರೂ.
  • ಕನಿಷ್ಠ ವೇತನವನ್ನು ದಿನಕ್ಕೆ 182 ರೂ.ನಿಂದ 202 ರೂ.ಗೆ ಹೆಚ್ಚಳ 
  • ನಗರ ಬಡವರ ವಸತಿಗಾಗಿ ರಾಜ್ಯ ವಿಪತ್ತು ಹಣವನ್ನು ಬಳಸಲು ಅನುಮತಿ
  • ಗ್ರಾಮೀಣ ಮೂಲಸೌಕರ್ಯಕ್ಕಾಗಿ 4,200 ಕೋಟಿ ರೂ
  • ಎಸ್‌ಆರ್‌ಡಿಎಫ್ ಅಡಿಯಲ್ಲಿ 11,002 ಕೋಟಿ ರೂ
  • ಮೇ 31 ರವರೆಗೆ ಸಾಲ ಪಾವತಿಸಿರುವ ರೈತರಿಗೆ ಬಡ್ಡಿ ಸಹಾಯಧನ.
  • ಮುಂದಿನ ಎರಡು ತಿಂಗಳವರೆಗೆ ವಲಸೆ ಕಾರ್ಮಿಕರಿಗೆ ಉಚಿತ ಪಡಿತರ
  • ಪಡಿತರ ಚೀಟಿ ಇಲ್ಲದವರಿಗೆ ಹತ್ತು ಕೆಜಿ ಅಕ್ಕಿ ಮತ್ತು ಬೇಳೆಕಾಳು 
  • ಎಲ್ಲಾ ಕಾರ್ಮಿಕರಿಗೆ ಕನಿಷ್ಠ ವೇತನ ಹಕ್ಕು 
  • ಪ್ಲಾಟ್‌ಫಾರ್ಮ್ ಕೆಲಸಗಾರರಿಗೆ ಸಾಮಾಜಿಕ ಭದ್ರತಾ ಯೋಜನೆ
  •  ಇ- ಪಡಿತರ ಚೀಟಿಯೊಂದಿಗೆ, ಎಲ್ಲಿಬೇಕಾದರೂ ಆಹಾರ ಧಾನ್ಯ ಪಡೆದುಕೊಳ್ಳಲು ವ್ಯವಸ್ಥೆ 
  •  ಬಾಡಿಗೆ ವಸತಿ ಸಂಕೀರ್ಣಗಳ ಸ್ಥಾಪನೆ
  •  ಡಿಜಿಟಲ್ ಪಾವತಿ ದಾರರಿಗೆ ಹೆಚ್ಚಿನ ರಿಯಾಯಿತಿಗಳು
  •  ಮಧ್ಯಮ ವರ್ಗದವರಿಗೆ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಯೋಜನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com