ರಾಜ್ಯಗಳಲ್ಲಿ ವಿಮಾನ ಪ್ರಯಾಣಕ್ಕೆ ಮಿತಿ, ಕ್ವಾರಂಟೈನ್ ನಿಯಮ: ಟಿಕೆಟ್ ರದ್ದತಿ ಏರಿಕೆ, ಕಾಯ್ದಿರಿಸುವಿಕೆಯಲ್ಲಿ ಕುಸಿತ! 

ಕೆಲವು ರಾಜ್ಯಗಳು ವಿಮಾನ ಪ್ರಯಾಣಕ್ಕೆ ಮಿತಿಯನ್ನು ಹಾಕಿರುವುದರಿಂದ ಟಿಕೆಟ್ ಬುಕಿಂಗ್ ಮೇಲೆ ಪರಿಣಾಮ ಬೀರಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೇಂದ್ರ ಸರ್ಕಾರವೇನೋ ಮೇ.25 ರಿಂದ ದೇಶಿ ವಿಮಾನ ಪ್ರಯಾಣವನ್ನು ಪುನಃ ಆರಂಭಿಸಿದೆ. ಆದರೆ ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ರಾಜ್ಯಗಳು ಇನ್ನೂ ವಿಮಾನ ಪ್ರಯಾಣದ ಸೌಲಭ್ಯವನ್ನು ಪುನಃ ಆರಂಭಿಸಿಲ್ಲ. ಇನ್ನೂ ಕೆಲವು ರಾಜ್ಯಗಳು ವಿಮಾನ ಪ್ರಯಾಣಕ್ಕೆ ಮಿತಿಯನ್ನು ಹಾಕಿರುವುದರಿಂದ ಟಿಕೆಟ್ ಬುಕಿಂಗ್ ಮೇಲೆ ಪರಿಣಾಮ ಬೀರಿದೆ. 

ರಾಜ್ಯಗಳ ನಿರ್ಧಾರಗಳಿಂದ ಟಿಕೆಟ್ ರದ್ದತಿಯಲ್ಲಿ ಏರಿಕೆ ಕಂಡುಬಂದಿದ್ದು, ಟಿಕೆಟ್ ಕಾಯ್ದಿರಿಸುವಿಕೆಯಲ್ಲಿ ಕುಸಿತ ಕಂಡುಬಂದಿದೆ. 

ವಿಮಾನ ಪ್ರಯಾಣಿಕರ ಆತಂಕವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಯತ್ನಿಸಿತ್ತು. ಕೇವಲ ಎರಡು ರಾಜ್ಯಗಳಷ್ಟೇ ವಿಮಾನ ಸೌಲಭ್ಯ ಪುನಾರಂಭದಿಂದ ಹಿಂದೆ ಸರಿದಿವೆ. ಆಂಧ್ರಪ್ರದೇಶ ಹಾಗೂ ಪಶ್ಚಿಮ ಬಂಗಾಳದಲ್ಲಿ ಅನುಕ್ರಮವಾಗಿ ಮೇ.26, ಮೇ 28 ರಿಂದ ವಿಮಾನ ಪ್ರಯಾಣ ಪುನಾರಂಭಗೊಳ್ಳಲಿದೆ ಎಂದು ತಿಳಿಸಿತ್ತು.   

ರಾಜ್ಯ ಸರ್ಕಾರಗಳೊಂದಿಗೆ ಸುದೀರ್ಘ ಮಾತುಕತೆ ಹಾಗೂ ಮನವೊಲಿಕೆಯ ನಂತರ ವಿಮಾನ ಹಾರಾಟಗಳನ್ನು ಪುನಾರಾಂಭ ಮಾಡಲಾಗಿದೆ. ಆದರೆ ಆಂಧ್ರಪ್ರದೇಶ ಹಾಗೂ ಪಶ್ಚಿಮ ಬಂಗಾಳ ಮಾತ್ರ ಮೇ 26, ಮೇ 28 ರಿಂದ ರಾಜ್ಯಗಳಲ್ಲಿ ವಿಮಾನ ಹಾರಾಟ ಪ್ರಾರಂಭಿಸಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದರು. 

ಈ ನಡುವೆ ಉಳಿದ ರಾಜ್ಯಗಳು ವಿಮಾನಯಾನಕ್ಕೆ ಮಿತಿಯನ್ನು ಹಾಕಿಕೊಂಡಿವೆ. ಆಂಧ್ರಪ್ರದೇಶದ ವಿಜಯವಾಡ, ವೈಜಾಗ್ ವಿಮಾನ ನಿಲ್ದಾಣಗಳು ಬೇಸಿಗೆ ವೇಳಾಪಟ್ಟಿಯಲ್ಲಿ ನಿಗದಿಪಡಿಸಲಾಗಿದ್ದ ಆಗಮನ ಹಾಗೂ ನಿರ್ಗಮನಗಳ ಶೇ.20 ರಷ್ಟು ವಿಮಾನಗಳ ಸಂಚಾರಕ್ಕೆ ಮಾತ್ರ ಅನುಮತಿ ನೀಡಿವೆ. ಹೈದರಾಬಾದ್ ನಲ್ಲಿ 15 ವಿಮಾನಗಳ ಆಗಮನ, 15 ನಿರ್ಗಮನಗಳಿಗೆ ಅವಕಾಶ ನೀಡಲಾಗಿದೆ. ಇನ್ನು ಕ್ವಾರಂಟೈನ್ ಹಾಗೂ ಮಾರ್ಗಸೂಚಿಗಳಲ್ಲಿರುವ ನಿಯಮಗಳೂ ಸಹ ವಿಮಾನ ಪ್ರಯಾಣದಿಂದ ದೂರ ಉಳಿಯುವಂತೆ ಮಾಡಿವೆ ಪರಿಣಾಮವಾಗಿ ಟಿಕೆಟ್ ರದ್ದತಿ ಏರಿಕೆ, ಕಾಯ್ದಿರಿಸುವಿಕೆಯಲ್ಲಿ ಕುಸಿತ ಕಂಡುಬಂದಿದೆ. 

"ಮೆಟ್ರೋ ನಗರಗಳ ನಡುವೆ ವಿಮಾನಯಾನ ಪುನಾರಂಭಗೊಳ್ಳುವ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ಟಿಕೆಟ್ ಕಾಯ್ದಿರಿಸುವಿಕೆ ಏರುಗತಿಯಲ್ಲಿತ್ತು. ಆದರೆ ಪ್ರಯಾಣದ ಮಾರ್ಗಸೂಚಿಗಳು, ರಾಜ್ಯಗಳು ಹೇರಿರುವ ಮಿತಿಗಳಿಂದ ಟಿಕೆಟ್ ರದ್ದತಿ ಏರಿಕೆ, ಕಾಯ್ದಿರಿಸುವಿಕೆಯಲ್ಲಿ ಕುಸಿತ ಉಂಟಾಗಿದೆ" ಎಂದು ವಿಮಾನಯಾನ ಕ್ಷೇತ್ರದಲ್ಲಿರುವವರು ಮಾಹಿತಿ ನೀಡಿರುವುದನ್ನು ಐಎಎನ್ಎಸ್ ಪ್ರಕಟಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com