ಮುಂದಿನ ವರ್ಷ ಕಾರು-ಮನೆ ಖರೀದಿ ಮತ್ತಷ್ಟು ದುಬಾರಿ?: ಸಾಮಾನ್ಯ ಗ್ರಾಹಕನ ಜೇಬಿಗೆ ಕತ್ತರಿ

ಮನುಷ್ಯನ ನಿತ್ಯ ಜೀವನಕ್ಕೆ ಬೇಕಾದ ಅಗತ್ಯ ವಸ್ತುಗಳ ಬೆಲೆ ಕಡಿಮೆಯೇನು ಆಗುತ್ತಿಲ್ಲ, ಕೋವಿಡ್-19 ಸೋಂಕು ಬಂದ ನಂತರ ಹಲವರ ಆದಾಯದ ಮೂಲಗಳು ಮತ್ತು ಆದಾಯಗಳು ಕಡಿಮೆಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಮನುಷ್ಯನ ನಿತ್ಯ ಜೀವನಕ್ಕೆ ಬೇಕಾದ ಅಗತ್ಯ ವಸ್ತುಗಳ ಬೆಲೆ ಕಡಿಮೆಯೇನು ಆಗುತ್ತಿಲ್ಲ, ಕೋವಿಡ್-19 ಸೋಂಕು ಬಂದ ನಂತರ ಹಲವರ ಆದಾಯದ ಮೂಲಗಳು ಮತ್ತು ಆದಾಯಗಳು ಕಡಿಮೆಯಾಗಿದೆ. ಆ ಮಧ್ಯೆ ಮುಂದಿನ ವರ್ಷ 2022ರಲ್ಲಿ ಹಲವು ವಸ್ತುಗಳ ಬೆಲೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಅದರಲ್ಲೂ ಮನೆ ಖರೀದಿ, ವಾಹನ ಖರೀದಿಗೆ ಯೋಜನೆ ಹಾಕಿಕೊಳ್ಳುತ್ತಿದ್ದರೆ ಗ್ರಾಹಕರ ಜೇಬು ಮತ್ತಷ್ಟು ಹೊರೆಯಾಗಲಿದೆ.

ಮಾರುತಿ ಸುಜುಕಿ ಕಂಪೆನಿ ಭಾರತದಲ್ಲಿ ಅತಿದೊಡ್ಡ ಕಾರು ತಯಾರಿಕಾ ಕಂಪೆನಿ. ಕಚ್ಚಾ ಸಾಮಗ್ರಿಗಳ ಬೆಲೆ ಹೆಚ್ಚಾಗಿರುವುದರಿಂದ ಜನವರಿಯಿಂದ ವಾಹನಗಳ ಬೆಲೆ ಹೆಚ್ಚಿಸುವುದಾಗಿ ಈಗಾಗಲೇ ಕಂಪೆನಿ ತಿಳಿಸಿದೆ.ಪ್ರತಿವರ್ಷ ಜನವರಿ ತಿಂಗಳಲ್ಲಿ ಶೇಕಡಾ 2ರಿಂದ 4ರಷ್ಟು ವಾಹನಗಳ ಬೆಲೆಯನ್ನು ಆಟೋಮೊಬೈಲ್ ಕಂಪೆನಿಗಳು ಹೆಚ್ಚಿಸುವುದು ಸಾಮಾನ್ಯ.

ಕಳೆದೊಂದು ವರ್ಷದಿಂದ ಶೇಕಡಾ ಮೂರರಷ್ಟು ಮಾರಾಟ ಹೆಚ್ಚಳ ಮಾಡಿರುವುದರಿಂದ ಈ ವರ್ಷ ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆಯಾಗುವ ಸಾಧ್ಯತೆಯಿದೆ. ಉದಾಹರಣೆಗೆ ಮಾರುತಿ ಸುಜುಕಿ ಈ ವರ್ಷ ಜನವರಿಯಲ್ಲಿ ವಾಹನಗಳ ವೆಚ್ಚವನ್ನು ಶೇಕಡಾ 1.4ರಷ್ಟು ಹೆಚ್ಚಳ ಮಾಡಿತ್ತು. ನಂತರ ಏಪ್ರಿಲ್ ನಲ್ಲಿ ಶೇಕಡಾ 1.6ರಷ್ಟು ಹೆಚ್ಚಳ ಮಾಡಿತ್ತು. ನಂತರ ಸೆಪ್ಟೆಂಬರ್ ನಲ್ಲಿ ಶೇಕಡಾ 1.9ರಷ್ಟು ಹೆಚ್ಚಳ ಮಾಡಿತ್ತು ಹೀಗೆ ಒಟ್ಟಾರೆಯಾಗಿ ಕಳೆದ ಜನವರಿಯಿಂದ ಇಲ್ಲಿಯವರೆಗೆ ಕಂಪೆನಿ ತಮ್ಮ ವಾಹನಗಳ ಮಾರಾಟ ವೆಚ್ಚವನ್ನು ಶೇಕಡಾ 4.9ರಷ್ಟು ಹೆಚ್ಚಿಸಿದೆ.

ಇನ್ನು ಟಾಟಾ ಮೋಟರ್ಸ್, ಮಹೀಂದ್ರ ಅಂಡ್ ಮಹೀಂದ್ರ ಮತ್ತು ಹುಂಡೈ ಕಂಪೆನಿಗಳು ಸಹ ಇದೇ ರೀತಿ ತನ್ನ ಉತ್ಪಾದನೆಯ ವಾಹನ ಮಾರಾಟ ದರವನ್ನು ಸದ್ಯದಲ್ಲಿಯೇ ಹೆಚ್ಚಿಸುವ ನಿರೀಕ್ಷೆಯಿದೆ. ಲಕ್ಷುರಿ ಆಟೋಮೊಬೈಲ್ ಕಂಪೆನಿಗಳಾದ ಮರ್ಸಿಡಿಸ್ ಬೆಂಜ್ ಮತ್ತು ಆಡಿ ಕಂಪೆನಿಗಳು ಈಗಾಗಲೇ ಮಾರಾಟ ದರವನ್ನು ಶೇಕಡಾ 2ರಿಂದ 3ರಷ್ಟು ಬರುವ ಜನವರಿಯಿಂದ ಹೆಚ್ಚಿಸುವುದಾಗಿ ಘೋಷಿಸಿವೆ.

ಉಕ್ಕು, ಅಲ್ಯೂಮಿನಿಯಂ, ತಾಮ್ರ, ಪ್ಲಾಸ್ಟಿಕ್ ಮತ್ತು ಬೆಲೆಬಾಳುವ ಲೋಹಗಳು ದುಬಾರಿಯಾಗಿರುವುದರಿಂದ ವಾಹನ ಮಾರಾಟ ದರವನ್ನು ಅನಿವಾರ್ಯವಾಗಿ ಹೆಚ್ಚಿಸಬೇಕಾಗಿದೆ ಎಂದು ಎಂಎಸ್ ಐಎಲ್ ಹಿರಿಯ ಕಾರ್ಯಕಾರಿ ನಿರ್ದೇಶಕ ಶಶಾಂಕ್ ಶ್ರೀವಾಸ್ತವ ಈಗಾಗಲೇ ತಿಳಿಸಿದ್ದಾರೆ. 

ಮನೆ ಖರೀದಿ ದುಬಾರಿ?: ಕಳೆದ ಏಪ್ರಿಲ್‌-ಮೇ ತಿಂಗಳಿನಲ್ಲಿ ಪ್ರತಿ ಕೆ.ಜಿ.ಗೆ 38 ರೂಪಾಯಿ ಇದ್ದ ಉಕ್ಕಿನ ಬೆಲೆ ಈ ವರ್ಷ 77 ರೂಪಾಯಿಗೆ ಏರಿದೆ. ಅದೇ ರೀತಿ, ಕಳೆದ ವರ್ಷ ಟನ್‌ಗೆ 1,700-1,800 ಡಾಲರ್‌ಗೆ ಲಭ್ಯವಿದ್ದ ಅಲ್ಯೂಮಿನಿಯಂ ಈಗ ಪ್ರತಿ ಟನ್‌ಗೆ 2,700-2,800 ಡಾಲರ್‌ಗಳಾಗಿದೆ.ಲೋಹದ ಬೆಲೆಗಳಲ್ಲಿನ ಈ ಏರಿಕೆಯು ಸಿಮೆಂಟ್ ಬೆಲೆಗಳ ಏರಿಕೆಯೊಂದಿಗೆ ಮನೆಗಳ ಮಾರಾಟ ಬೆಲೆಯನ್ನು ಹೆಚ್ಚಿಸಲಿದೆ. 

"ಹೌಸಿಂಗ್ ಡೆವಲಪರ್‌ಗಳ ಲಾಭದ ಪ್ರಮಾಣವು ಕಡಿಮೆಯಾಗಿದೆ. ಸಿಮೆಂಟ್, ಉಕ್ಕು ಮತ್ತು ಕಾರ್ಮಿಕರ ವೇತನದಂತಹ ಮೂಲ ವೆಚ್ಚಗಳು ಏರುತ್ತಿರುವ ಸಂದರ್ಭದಲ್ಲಿ ಹಣದುಬ್ಬರ(inflation) ಸವಾಲಾಗಿದೆ. ಭವಿಷ್ಯದ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಅನಾರಾಕ್‌ನ ನಿರ್ದೇಶಕ ಮತ್ತು ಸಂಶೋಧನಾ ಮುಖ್ಯಸ್ಥ ಪ್ರಶಾಂತ್ ಠಾಕೂರ್ ಹೇಳುತ್ತಾರೆ.

ರಿಯಲ್ ಎಸ್ಟೇಟ್ ಉದ್ಯಮ ಸಂಸ್ಥೆಯಾದ ಕ್ರೆಡೈ ಇತ್ತೀಚೆಗೆ ನಿರ್ಮಾಣ ಕಚ್ಚಾ ವಸ್ತುಗಳ ಬೆಲೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಮನೆಗಳ ಮಾರಾಟ ಬೆಲೆಗಳು ಶೇಕಡಾ 10ರಿಂದ 15ರಷ್ಟು ಹೆಚ್ಚಾಗಬಹುದು ಎಂದು ಅಂದಾಜಿಸಿದೆ.

ಸಿಮೆಂಟ್ ದರ ಪ್ರತಿ ಚೀಲಕ್ಕೆ 400ರೂಗೆ ಏರಿಕೆ?: ಸಿಮೆಂಟ್ ನ ಚಿಲ್ಲರೆ ಮಾರಾಟ ದರ ಕಳೆದ ಆಗಸ್ಟ್ ತಿಂಗಳಿನಿಂದ ಶೇಕಡಾ 10ರಿಂದ 15ರಷ್ಟು ಹೆಚ್ಚಳವಾಗಿದೆ. ಮುಂದಿನ ಕೆಲ ತಿಂಗಳಲ್ಲಿ ಶೇಕಡಾ 15ರಿಂದ 20ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಅಂಕಿಅಂಶ ಅಂದಾಜು ಮಾಡುವ ಏಜೆನ್ಸಿ ಕ್ರಿಸಿಲ್ ಹೇಳಿದೆ. 

ಇದರಿಂದ ಮುಂದಿನ ಹಣಕಾಸು ವರ್ಷದಲ್ಲಿ ಕಲ್ಲಿದ್ದಲು ಮತ್ತು ಡೀಸೆಲ್ ದರ ಹೆಚ್ಚಳವಾಗಿ ಸಿಮೆಂಟ್ ದರ ಪ್ರತಿ ಚೀಲಕ್ಕೆ 400 ರೂಪಾಯಿಗೆ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com