ತೈಲೋತ್ಪನ್ನಗಳ ಬೆಲೆ ಹೆಚ್ಚಳದ ಕಾರಣ ದಿನಸಿ, ಆರೋಗ್ಯದ ಮೇಲೆ ಖರ್ಚು ಕಡಿಮೆ ಮಾಡಿದ ಜನತೆ: ಎಸ್ ಬಿಐ ಆರ್ಥಿಕ ತಜ್ಞರು!
ಕೋವಿಡ್ ಸಂಕಷ್ಟದ ನಡುವೆಯೇ ದೇಶದಲ್ಲಿ ತೈಲೋತ್ಪನ್ನಗಳ ಬೆಲೆ ಹೆಚ್ಚಳದಿಂದಾಗಿ ಜನತೆಯ ಆರ್ಥಿಕ ಮುಗ್ಗಟ್ಟು ಹೆಚ್ಚಳವಾಗಿದ್ದು, ಜನರು ಆರೋಗ್ಯ ಮತ್ತು ದಿನಸಿಯಂತಹ ಅಗತ್ಯ ವಸ್ತುಗಳ ಮೇಲಿನ ಖರ್ಚನ್ನು ಕಡಿಮೆ ಮಾಡಿದ್ದಾರೆ ಎಂದು ಎಸ್‌ಬಿಐ ಅರ್ಥಶಾಸ್ತ್ರಜ್ಞರು ಸಿದ್ಧಪಡಿಸಿರುವ ವರದಿಯೊಂದು ಹೇಳಿದೆ.
Published: 13th July 2021 09:00 PM | Last Updated: 14th July 2021 01:16 PM | A+A A-

ಸಂಗ್ರಹ ಚಿತ್ರ
ಮುಂಬೈ: ಕೋವಿಡ್ ಸಂಕಷ್ಟದ ನಡುವೆಯೇ ದೇಶದಲ್ಲಿ ತೈಲೋತ್ಪನ್ನಗಳ ಬೆಲೆ ಹೆಚ್ಚಳದಿಂದಾಗಿ ಜನತೆಯ ಆರ್ಥಿಕ ಮುಗ್ಗಟ್ಟು ಹೆಚ್ಚಳವಾಗಿದ್ದು, ಜನರು ಆರೋಗ್ಯ ಮತ್ತು ದಿನಸಿಯಂತಹ ಅಗತ್ಯ ವಸ್ತುಗಳ ಮೇಲಿನ ಖರ್ಚನ್ನು ಕಡಿಮೆ ಮಾಡಿದ್ದಾರೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್‌ನ (ಎಸ್‌ಬಿಐ) ಅರ್ಥಶಾಸ್ತ್ರಜ್ಞರು ಸಿದ್ಧಪಡಿಸಿರುವ ವರದಿಯೊಂದು ಹೇಳಿದೆ.
ಎಸ್‌ಬಿಐನ ಮುಖ್ಯ ಆರ್ಥಿಕ ಸಲಹೆಗಾರ ಸೌಮ್ಯಕಾಂತಿ ಘೋಷ್ ಸಿದ್ಧಪಡಿಸಿರುವ ವರದಿಯಲ್ಲಿ, ಕೇಂದ್ರ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವ ಬಗ್ಗೆ ಆಲೋಚಿಸಬೇಕು. ದೇಶದ ಹಲವು ಕಡೆಗಳಲ್ಲಿ ಪೆಟ್ರೋಲ್ ಬೆಲೆಯು ಲೀಟರಿಗೆ 100 ರೂ ಗಡಿ ದಾಟಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಕುಸಿದಿದ್ದಾಗ ದೇಶಿ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಲಾಯಿತು. ಆದರೆ, ಈಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಹೆಚ್ಚಳ ಆಗಿದ್ದರೂ ದೇಶಿ ಮಾರುಕಟ್ಟೆಯಲ್ಲಿ ತೆರಿಗೆ ಪ್ರಮಾಣ ಕಡಿಮೆ ಮಾಡಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಮತ್ತೆ ಏರಿಕೆ; ಇಲ್ಲಿದೆ ಸಂಪೂರ್ಣ ದರ ಪಟ್ಟಿ
ಒಂದು ಅಂದಾಜಿನ ಪ್ರಕಾರ, ಕೇಂದ್ರ ಮತ್ತು ರಾಜ್ಯಗಳಲ್ಲಿನ ಸರ್ಕಾರಗಳಿಗೆ ತೆರಿಗೆ ಮತ್ತು ಅಬಕಾರಿ ರೂಪದಲ್ಲಿ ಪ್ರತಿ ಲೀಟರ್‌ಗೆ 40 ರೂ ಸಂದಾಯವಾಗುತ್ತಿದೆ. ಜಾಗತಿಕ ಕಚ್ಚಾ ತೈಲ ಬೆಲೆಗಳು ಇಳಿಮುಖವಾದಾಗ ತೆರಿಗೆಯನ್ನು ಹೆಚ್ಚಿಸಲಾಗಿತ್ತು ಆದರೆ ಕಚ್ಚಾತೈಲ ಬೆಲೆಗಳು ಮತ್ತೆ ಏರಿದರೂ ಅದನ್ನು ಹಿಂದಕ್ಕೆ ತರಲಾಗಿಲ್ಲ. ಇಂಧನ ಮೇಲಿನ ಹೆಚ್ಚಿನ ಖರ್ಚು ಹಣದುಬ್ಬರದ ಮೇಲೂ ಪರಿಣಾಮ ಬೀರುತ್ತದೆ. ತೆರಿಗೆ ತರ್ಕಬದ್ಧಗೊಳಿಸುವಿಕೆಯ ಮೂಲಕ ತೈಲ ಬೆಲಗಳನ್ನು ತುರ್ತು ಕಡಿತಗೊಳಿಸುವ ಅವಶ್ಯಕತೆಯಿದೆ. ಇದು ವಿಫಲವಾದರೆ ವಿವೇಚನೆಯಿಲ್ಲದ ವಸ್ತುಗಳ ಮೇಲಿನ ಗ್ರಾಹಕ ವೆಚ್ಚವು ವಿರೂಪಗೊಳ್ಳುವುದು ಮುಂದುವರೆಯುತ್ತದೆ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.
'ಗ್ರಾಹಕರು ತೈಲೋತ್ಪನ್ನಗಳಿಗಾಗಿ ಹೆಚ್ಚು ಹಣ ವೆಚ್ಚ ಮಾಡುತ್ತಿದ್ದಾರೆ. ವಾಸ್ತವದಲ್ಲಿ, ಇದರಿಂದಾಗಿ ಇತರೆ ಅಗತ್ಯ ವಸ್ತುಗಳಾದ ದಿನಸಿ, ಕೆಲವು ಸೇವೆಗಳ ಮೇಲಿನ ಖರ್ಚನ್ನು ಜನ ಗಣನೀಯವಾಗಿ ಕಡಿಮೆ ಮಾಡಬೇಕಾಗಿದೆ. ಪ್ರಮುಖವಾಗಿ ಆರೋಗ್ಯದ ಮೇಲಿನ ಖರ್ಚನ್ನು ಮತ್ತು ದಿನಸಿ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಿದ್ದು, ಇಂತಹ ಉತ್ಪನ್ನಗಳು ಹಾಗೂ ಸೇವೆಗಳ ಬೇಡಿಕೆಯು ಗಣನೀಯವಾಗಿ ತಗ್ಗಿದೆ ಎಂಬುದನ್ನು ಎಸ್‌ಬಿಐ ಕಾರ್ಡ್ ಮೂಲಕ ಜನ ಮಾಡಿರುವ ಖರ್ಚುಗಳನ್ನು ವಿಶ್ಲೇಷಣೆಗೆ ಗುರಿಪಡಿಸಿದಾಗ ನಮಗೆ ಗೊತ್ತಾಗಿದೆ ಎಂದು ಘೋಷ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ಮೇ ತಿಂಗಳಲ್ಲಿ ಕೈಗಾರಿಕಾ ಉತ್ಪಾದನೆ ಶೇ.29.3 ರಷ್ಟು ಬೆಳವಣಿಗೆ
ತೈಲೋತ್ಪನ್ನಗಳ ಮೇಲೆ ಮಾಡಬೇಕಿರುವ ವೆಚ್ಚ ಬಹಳ ಹೆಚ್ಚಾಗಿರುವುದು ಹಣದುಬ್ಬರದ ಮೇಲೆಯೂ ಪರಿಣಾಮ ಉಂಟುಮಾಡುತ್ತದೆ ಎಂದು ಅವರು ಎಚ್ಚರಿಸಿದ್ದು, ತೈಲೋತ್ಪನ್ನಗಳ ಬೆಲೆಯನ್ನು ಆದಷ್ಟು ಬೇಗ ತಗ್ಗಿಸಬೇಕಾದ ಅಗತ್ಯ ಇದೆ. ಇದನ್ನು ಮಾಡದಿದ್ದರೆ ಅಗತ್ಯ ವಸ್ತುಗಳ ಮೇಲೆ ಜನ ಮಾಡಬೇಕಿರುವ ಖರ್ಚುಗಳಲ್ಲಿ ಬಹಳ ವ್ಯತ್ಯಾಸ ಆಗುತ್ತದೆ. ಹಾಗೆಯೇ, ತೀರಾ ಅಗತ್ಯವಲ್ಲದ ಇತರ ವಸ್ತುಗಳ ಮೇಲಿನ ಖರ್ಚುಗಳೂ ಕಡಿಮೆ ಆಗುತ್ತವೆ ಎಂದು ಘೋಷ್ ಅವರು ಹೇಳಿದ್ದಾರೆ.
ಮೇ ತಿಂಗಳ ಹಣದುಬ್ಬರ ದತ್ತಾಂಶ ಕುರಿತು ಘೋಷ್ ಅಚ್ಚರಿ
ಇದೇ ವೇಳೆ ದೇಶದ ಅನೇಕ ಭಾಗಗಳಲ್ಲಿ ಸ್ಥಳೀಯ ಲಾಕ್ ಡೌನ್‌ಗಳ ಸಮಯದಲ್ಲಿ, ಮೇ ತಿಂಗಳ ಹಣದುಬ್ಬರವನ್ನು ಶೇಕಡಾ 6.30 ರಷ್ಟಿದೆ ಎಂದು ತೋರಿಸುವ ಸಿಎಸ್‌ಒ ದತ್ತಾಂಶವು "ದತ್ತಾಂಶ ವಿರೂಪ" ಎಂದು ಘೋಷ್ ಆಶ್ಚರ್ಯಪಟ್ಟರು.ಮೇ ತಿಂಗಳಿಗೆ ಹೋಲಿಸಿದರೆ ಆಹಾರ ಮತ್ತು ಆಹಾರೇತರದಲ್ಲಿನ ಹೆಚ್ಚಿನ ವಸ್ತುಗಳು ಜೂನ್‌ನಲ್ಲಿ ಬೆಳವಣಿಗೆಯನ್ನು ದಾಖಲಿಸಿವೆ, ಮತ್ತು ಮೇ ತಿಂಗಳಿನ ಪ್ರಮುಖ ಹಣದುಬ್ಬರವು ಸಹ ದೊಡ್ಡ ಮಟ್ಟದಲ್ಲಿ ಪರಿಷ್ಕರಣೆಗೆ ಒಳಗಾಗಿದೆ. ಹಣದುಬ್ಬರವು ಅಲ್ಪ ಕುಸಿತವನ್ನು ತೋರಿಸಿದ್ದರೂ ಸಹ, ಮಟ್ಟವನ್ನು ಇನ್ನೂ ಹೆಚ್ಚಿಸಲಾಗಿದೆ ಮತ್ತು ಹಣಕಾಸಿನ ಉಳಿತಾಯದ ಕುಸಿತದೊಂದಿಗೆ ಸಂಯೋಜಿಸಲ್ಪಟ್ಟಿದೆ ಎಂದು ಅವರು ಹೇಳಿದರು.