ಉದ್ಯಮಿ ವಿಜಯ್ ಮಲ್ಯರಿಂದ ಸಾಲ ವಸೂಲಾತಿ: 792 ಕೋಟಿ ರೂ. ಮೌಲ್ಯದ ಷೇರು ಮಾರಾಟ!
ಉದ್ಯಮಿ ವಿಜಯ್ ಮಲ್ಯ ಅವರಿಗೆ ಸೇರಿದ 792 ಕೋಟಿ ರೂ. ಮೌಲ್ಯದ ಷೇರುಗಳನ್ನು ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟ ಶುಕ್ರವಾರ ಮಾರಾಟ ಮಾಡಿದ್ದು ವಿಜಯ ಮಲ್ಯ ಅವರಿಂದ ಬರಬೇಕಾಗಿರುವ ಒಟ್ಟು ಸಾಲದ ಬಾಕಿಯಲ್ಲಿ ಶೇ.81 ಮರು ವಸೂಲಾದಂತಾಗಿದೆ.
Published: 17th July 2021 08:41 AM | Last Updated: 17th July 2021 01:34 PM | A+A A-

ವಿಜಯ ಮಲ್ಯ
ಬೆಂಗಳೂರು: ಉದ್ಯಮಿ ವಿಜಯ್ ಮಲ್ಯ ಅವರಿಗೆ ಸೇರಿದ 792 ಕೋಟಿ ರೂ. ಮೌಲ್ಯದ ಷೇರುಗಳನ್ನು ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟ ಶುಕ್ರವಾರ ಮಾರಾಟ ಮಾಡಿದ್ದು ವಿಜಯ ಮಲ್ಯ ಅವರಿಂದ ಬರಬೇಕಾಗಿರುವ ಒಟ್ಟು ಸಾಲದ ಬಾಕಿಯಲ್ಲಿ ಶೇ.81 ಮರು ವಸೂಲಾದಂತಾಗಿದೆ.
ವಿಜಯ್ ಮಲ್ಯ ಅವರಿಂದ ಬ್ಯಾಂಕ್‌ಗಳ ಒಕ್ಕೂಟಕ್ಕೆ ಒಟ್ಟು 9,900 ಕೋಟಿ ರೂ. ಸುಸ್ತಿ ಸಾಲ ಬಾಕಿ ಇದ್ದು, ಅದರಲ್ಲಿ ಈಗಾಗಲೇ ಎರಡು ಸಂದರ್ಭಗಳಲ್ಲಿ 5,824 ಕೋಟಿ ರೂ. ಮತ್ತು 1,357 ಕೋಟಿ ರೂ. ವಸೂಲಾಗಿದೆ.
ಮಲ್ಯ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಷೇರುಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಬಹುತೇಕ ಷೇರುಗಳು ಯುನೈಟೆಡ್ ಬ್ರೇವರೀಸ್ (ಯುಬಿಎಲ್) ಮತ್ತು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (ಯುಎಸ್‌ಎಲ್) ಹಾಗೂ ಮಲ್ಯರ ಹೆಸರಿನಲ್ಲಿರುವ 7 ವಿಭಿನ್ನ ಕಂಪನಿಗಳದ್ದಾಗಿತ್ತು.
ವಿತ್ತಾಪರಾಧಿಯಾಗಿರುವ ಮಲ್ಯ ಭಾರತದಿಂದ ಪರಾರಿಯಾಗಿ ಬ್ರಿಟನ್‌ನಲ್ಲಿದ್ದಾರೆ. ಅವರ ಗಡಿಪಾರಿಗೆ ಕೇಂದ್ರ ಸರಕಾರ ಯತ್ನಿಸುತ್ತಿದೆ. ಕಿಂಗ್ ಫಿಶರ್ ಏರ್‌ಲೈನ್ಸ್ ಸಾಲ ಸುಸ್ತಿ ಸಾಲವಾದ ನಂತರ ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟಕ್ಕೆ ಸಮಸ್ಯೆಯಾಗಿತ್ತು.
ಇದಲ್ಲದೆ, ಪಂಜಾಬ್ ನ್ಯಾಷನಲ್ ಬ್ಯಾಂಕ್ / ನೀರವ್ ಮೋದಿ ಪ್ರಕರಣದಲ್ಲಿ ಆರ್ಥಿಕ ಅಪರಾಧಗಳ ನ್ಯಾಯಾಲಯವು 1,060 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲಿಗೆ ಬ್ಯಾಂಕುಗಳಿಗೆ ಅನುಮತಿಸಿದೆ ಮತ್ತು ಆರ್ಥಿಕ ಅಪರಾಧ ಕಾಯ್ದೆಯ ನಿಬಂಧನೆಗಳ ಪ್ರಕಾರ 329.67 ಕೋಟಿ ರೂ.ಗಳನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಸಂಸ್ಥೆ ತಿಳಿಸಿದೆ. .