ಒಂದೇ ತಿಂಗಳಲ್ಲಿ 17 ನೇ ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ!, ರಾಜಸ್ಥಾನದಲ್ಲಿ ಅತಿ ಹೆಚ್ಚು ವ್ಯಾಟ್! 

ಒಂದು ತಿಂಗಳ ಅವಧಿಯಲ್ಲಿ ಸತತ 17 ನೇ ಬಾರಿಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದ್ದು, ಹೊಸ ಎತ್ತರಕ್ಕೆ ತೈಲ ಬೆಲೆ ತಲುಪಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಒಂದು ತಿಂಗಳ ಅವಧಿಯಲ್ಲಿ ಸತತ 17 ನೇ ಬಾರಿಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದ್ದು, ಹೊಸ ಎತ್ತರಕ್ಕೆ ತೈಲ ಬೆಲೆ ತಲುಪಿದೆ. ಜೂ.01 ರಂದು ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 26 ಪೈಸೆಯಷ್ಟು ಏರಿಕೆಯಾದರೆ, ಡೀಸೆಲ್ ಬೆಲೆ 23 ಪೈಸೆಯಷ್ಟು ಏರಿಕೆ ಕಂಡಿದೆ. 

ಬೆಲೆ ಏರಿಕೆಯ ಪರಿಣಾಮ ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಗೆ 94.49 ರೂಪಾಯಿಗಳಾಗಿದ್ದರೆ, ಡೀಸೆಲ್ ಪ್ರತಿ ಲೀಟರ್ ಗೆ 85.38 ರೂಪಾಯಿಗಳಲ್ಲಿ ಲಭ್ಯವಿದೆ. ತೈಲ ಬೆಲೆಗಳು ರಾಜ್ಯಗಳು ವಿಧಿಸುವ ವ್ಯಾಟ್ (ಮೌಲ್ಯವರ್ಧಿತ ತೆರಿಗೆ) ಹಾಗೂ ಸಾಗಣೆ ಶುಲ್ಕಗಳ ಆಧಾರದಲ್ಲಿ ವ್ಯತ್ಯಯವಾಗುತ್ತದೆ.
 
ರಾಜಸ್ತಾನ ಪೆಟ್ರೋಲ್ ಮೇಲೆ ದೇಶದಲ್ಲೇ ಅತಿ ಹೆಚ್ಚು ವ್ಯಾಟ್ ವಿಧಿಸುತ್ತಿರುವ ರಾಜ್ಯವಾಗಿದ್ದು, ನಂತರದ ಸ್ಥಾನಗಳಲ್ಲಿ ಮಧ್ಯಪ್ರದೇಶ, ಮಹಾರಾಷ್ಟ್ರಗಳೂ ಇವೆ. 

ಜೂ.01 ರ ಬೆಲೆ ಏರಿಕೆಗೂ ಮುನ್ನವೇ ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರಗಳಲ್ಲಿ ಪೆಟ್ರೋಲ್ ಬೆಲೆ 100 ಗಡಿ ದಾಟಿತ್ತು. ಇದಾದ ಬಳಿಕ ಎರಡನೇ ಬಾರಿಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆ. ಇದಕ್ಕೂ ಮುನ್ನ ಶನಿವಾರದಂದು ಬೆಲೆ ಏರಿಕೆಯಾಗಿತ್ತು. 

ಮುಂಬೈ ನಲ್ಲಿ ಈಗ 100.72 ರೂಪಾಯಿಗಳಿಗೆ ಪೆಟ್ರೋಲ್ ಲಭ್ಯವಾದರೆ ಡೀಸೆಲ್ ಪ್ರತಿ ಲೀಟರ್ ಗೆ 92.69 ರೂಪಾಯಿಗಳಿಗೆ ಲಭ್ಯವಿದೆ. 

ಪಶ್ಚಿಮ ಬಂಗಾಳ, ಕೇರಳ ಸೇರಿದಂತೆ 5 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣೆಗಳಿದ್ದ ಕಾರಣದಿಂದಾಗಿ 18 ದಿನಗಳ ಕಾಲ ಪೆಟ್ರೋಲ್ ಬೆಲೆಯನ್ನು ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು 18 ದಿನಗಳ ಕಾಲ ಬೆಲೆ ಏರಿಕೆಗೆ ನಿಯಂತ್ರಣ ವಿಧಿಸಿಕೊಂಡಿದ್ದವು. ಈಗ ಮೇ.04 ರಿಂದ ಈ ವರೆಗೆ 17 ಬಾರಿ ಬೆಲೆ ಏರಿಕೆಯಾಗಿದೆ. 

ಒಂದು ತಿಂಗಳ ಅವಧಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ ಒಟ್ಟು 4.09 ರೂಪಾಯಿ, ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 4.65 ರೂಪಾಯಿಗಳು ಏರಿಕೆಯಾಗಿರುವುದು ಗಮನಾರ್ಹ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 15 ದಿನಕ್ಕೆ ಒಮ್ಮೆ ಬದಲಾಗುವ ತೈಲ ಬೆಲೆ ಹಾಗೂ ವಿದೇಶಿ ವಿನಿಮಯ ದರದ ಆಧಾರದಲ್ಲಿ ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ಪರಿಷ್ಕರಿಸುತ್ತವೆ.  

ಅಂತಾರಾಷ್ಟ್ರೀಯ ಮಾನದಂಡವಾಗಿರುವ ಬ್ರೆಂಟ್ ಕ್ರೂಡ್ ತೈಲ ಬೆಲೆ ಈ ವರ್ಷ ಶೇ.36 ರಷ್ಟು ಏರಿಕೆ ಕಂಡಿದ್ದು, ಪ್ರತಿ ಬ್ಯಾರೆಲ್ ಗೆ 70 ಡಾಲರ್ ಆಗಿರುವುದು ತೈಲ ಬೆಲೆಯಲ್ಲಿ ಏರಿಕೆ ಕಾಣಲು ಇರುವ ಪ್ರಮುಖ ಕಾರಣ. 

ಪ್ರತಿ ಲೀಟರ್ ಪೆಟ್ರೋಲ್ ಗೆ 105.52, ಡೀಸೆಲ್ ಗೆ 98.32 ರೂಪಾಯಿಗಳೊಂದಿಗೆ ರಾಜಸ್ಥಾನದ ಶ್ರೀ ಗಂಗಾನಗರ್ ಜಿಲ್ಲೆ ದೇಶದಲ್ಲೇ ಅತಿ ಹೆಚ್ಚು ದರ ಹೊಂದಿರುವ ನಗರವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com