
ಎಸ್ ಬಿಐ ಗೃಹ ಸಾಲ ಬಡ್ಡಿ ದರ ಕಡಿತ: ವಿವರಗಳು ಹೀಗಿವೆ...
ಮುಂಬೈ: ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗೃಹ ಸಾಲ ಬಡ್ಡಿ ದರವನ್ನು ಕಡಿತಗೊಳಿಸಿದೆ. 10 ಮೂಲ ಅಂಶಗಳಷ್ಟು (ಬಿಪಿಎಸ್) ಬಡ್ಡಿ ದರವನ್ನು ಇಳಿಕೆ ಮಾಡಲಾಗಿದ್ದು, ಗೃಹ ಸಾಲ ಶೇ.6.70 ರಷ್ಟು ದರದಿಂದ ಲಭ್ಯವಿದೆ.
ಹೊಸ ದರಗಳು ಗ್ರಾಹಕರ ಸಿಐಬಿಐಎಲ್ ಸ್ಕೋರ್ ಹಾಗೂ ಸಾಲದ ಮೊತ್ತವನ್ನು ಆಧರಿಸಿದ್ದಾಗಿದ್ದು ಮಾ.31, 2021 ವರೆಗೆ ಲಭ್ಯವಿರಲಿದೆ ಎಂದು ಎಸ್ ಬಿಐ ಹೇಳಿದೆ.
75 ಲಕ್ಷದವರೆಗಿನ ಗೃಹ ಸಾಲ ಶೇ.6.70 ಬಡ್ಡಿ ದರದಿಂದ ಲಭ್ಯವಾಗಲಿದ್ದು, 75 ಲಕ್ಷಗಳಿಂದ 5 ಕೋಟಿ ರೂಪಾಯಿಗಳ ವರೆಗೆ ಶೇ.6.75 ರ ಬಡ್ಡಿ ದರದಲ್ಲಿ ಸಾಲ ಸಿಗಲಿದೆ.
ಬ್ಯಾಂಕ್ ನ ಉಪ ವ್ಯವಸ್ಥಾಪಕ ನಿರ್ದೇಶಕ (ರಿಟೇಲ್ ಉದ್ಯಮ) ಸಲೋನಿ ನಾರಾಯಣ್ ಈ ಬಗ್ಗೆ ಮಾತನಾಡಿದ್ದು, ಹಬ್ಬದ ಋತುವಿನ, ಪ್ರಮುಖವಾಗಿ ಹೋಲಿಯ ಪ್ರಯೋಜನವನ್ನು ಪಡೆಯುವುದಕ್ಕೆ ನಾವು ಚಿಂತಿಸುತ್ತಿದ್ದೇವೆ. ಆರ್ಥಿಕ ವರ್ಷದಲ್ಲಿ ಇದು ಕೊನೆಯ ತಿಂಗಳವಾಗಿದ್ದರಿಂದ ಉತ್ತಮ ಸಂಖ್ಯೆಯನ್ನು ತಲುಪಲು ನಾವು ಯತ್ನಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಪ್ರಕ್ರಿಯೆ ಶುಲ್ಕಗಳ ಮೇಲೆ ಶೇ.100 ರಷ್ಟು ವಿನಾಯ್ತಿ ನೀಡಲಾಗುತ್ತದೆ. ಯೋನೋ ಮೂಲಕ ಗ್ರಾಹಕರು ಸಾಲಕ್ಕೆ ಅರ್ಜಿ ಸಲ್ಲಿಸಿದರೆ 5 ಬಿಪಿಎಸ್ ನಷ್ಟು ಬಡ್ಡಿ ವಿನಾಯಿತಿ ಆಫರ್ ಇದೆ ಎಂದೂ ಬ್ಯಾಂಕ್ ತಿಳಿಸಿದೆ. ಅಷ್ಟೇ ಅಲ್ಲದೇ, ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಗ್ರಾಹಕರಿಗೆ 5 ಬಿಪಿಎಸ್ ವಿನಾಯ್ತಿಯನ್ನು ಬ್ಯಾಂಕ್ ನೀಡುತ್ತಿದೆ.