ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಜಿಎಸ್ ಟಿ ಪರಿಧಿಯಲ್ಲಿ ಪೆಟ್ರೋಲ್, ಡೀಸೆಲ್ ತರುವ ಯೋಜನೆ ತಕ್ಷಣಕ್ಕೆ ಇಲ್ಲ

ಜಿಎಸ್ ಟಿ ಪರಿಧಿಯಲ್ಲಿ ಪೆಟ್ರೋಲ್, ಡೀಸೆಲ್ ತರುವ ಯೋಜನೆಗಳು ತಕ್ಷಣಕ್ಕೆ ಇಲ್ಲ ಎಂದು ಹಣಕಾಸು ಸಚಿವಾಲಯ ಹೇಳಿದೆ. 

ನವದೆಹಲಿ: ಜಿಎಸ್ ಟಿ ಪರಿಧಿಯಲ್ಲಿ ಪೆಟ್ರೋಲ್, ಡೀಸೆಲ್ ತರುವ ಯೋಜನೆಗಳು ತಕ್ಷಣಕ್ಕೆ ಇಲ್ಲ ಎಂದು ಹಣಕಾಸು ಸಚಿವಾಲಯ ಹೇಳಿದೆ. 

ತೈಲ ಗ್ರಾಹಕರಿಗೆ ಬೆಲೆ ಏರಿಕೆಯಿಂದ ರಿಲೀಫ್ ನೀಡುವ ನಿಟ್ಟಿನಲ್ಲಿ ಕೆಲವು ರಾಜ್ಯಗಳು ಹಾಗೂ ಅರ್ಥಶಾಸ್ತ್ರಜ್ಞರು ಪೆಟ್ರೋಲ್, ಡೀಸೆಲ್ ನ್ನು ಜಿಎಸ್ ಟಿ ಪರಿಧಿಯಲ್ಲಿ ತರಬೇಕೆಂದು ಕೇಳುತ್ತಿದ್ದಾರೆ. ಆದರೆ ತಕ್ಷಣಕ್ಕೆ ಅಂತಹ ಯಾವುದೇ ಯೋಜನೆಗಳಿಲ್ಲ. ಈ ಸಂಬಂಧ ಔಪಚಾರಿಕ ಚರ್ಚೆಗಳೂ ನಡೆದಿಲ್ಲ ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ರಾಜ್ಯ ಸರ್ಕಾರಗಳಿಗೆ ಬರುತ್ತಿರುವ ಆದಾಯದ ಪೈಕಿ ಬಹುಪಾಲಿನ ಮೂಲ ಇರುವುದು ತೈಲದ ಮೇಲೆ ವಿಧಿಸುತ್ತಿರುವ ಮೌಲ್ಯ ವರ್ಧಿತ ತೆರಿಗೆ (ವ್ಯಾಟ್) ನಲ್ಲಿ. ಜಿಎಸ್ ಟಿ ವ್ಯಾಪ್ತಿಯಲ್ಲಿ ಪೆಟ್ರೋಲ್, ಡೀಸೆಲ್ ತಂದರೆ ರಾಜ್ಯಗಳಿಗೆ ಲಭ್ಯವಾಗುತ್ತಿರುವ ಆದಾಯದ ಮೇಲೆ ಗಂಭೀರ ಪರಿಣಾಮಗಳು ಬೀರುತ್ತವೆ. ಒಂದು ವೇಳೆ ರಾಜ್ಯ ಸರ್ಕಾರಗಳು ಒಪ್ಪಿದರೂ ನಿರ್ಧಾರ ಕೈಗೊಳ್ಳಲು ಹಲವು ಸುತ್ತಿನ ಚರ್ಚೆಗಳು, ಸಭೆಗಳು ನಡೆಯಬೇಕಾಗುತ್ತದೆ ಎನ್ನುತ್ತಾರೆ ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿ.

ಪಶ್ಚಿಮ ಬಂಗಾಳದ ವಿತ್ತ ಸಚಿವ ಅಮಿತ್ ಮಿತ್ರ ಜಿಎಸ್ ಟಿ ಪರಿಧಿಯಲ್ಲಿ ಪೆಟ್ರೋಲ್, ಡೀಸೆಲ್ ತರುವ ಬಗ್ಗೆ ಮಾತನಾಡಿ ಹಲವು ರಾಜ್ಯಗಳು ಪೆಟ್ರೋಲ್, ಡೀಸೆಲ್ ನ್ನು ಜಿಎಸ್ ಟಿ ವ್ಯಾಪ್ತಿಗೆ ತರುವುದಕ್ಕೆ ಕೇಳುತ್ತಿವೆ, ಆದರೆ ಅದನ್ನು ಮಾಡಬೇಕಿರುವುದು ಕೇಂದ್ರ ಸರ್ಕಾರ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ವಿವರಣೆ ಸಹಿತ ಪ್ರತಿಕ್ರಿಯೆ ನೀಡಿದ್ದಾರೆ. 

ಇನ್ನು ಸ್ವತಃ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರೂ ಇತ್ತೀಚೆಗೆ ಈ ವಿಷಯ ಮಾತನಾಡಿ, ಜಿಎಸ್ ಟಿ ಪರಿಷತ್ ನಿರ್ಧಾರ ಕೈಗೊಳ್ಳಬೇಕಿದೆ. ಅದು ಜಿಎಸ್ ಟಿ ಪರಿಷತ್ ವ್ಯಾಪ್ತಿಗೆ ಬರುವ ವಿಷಯ ಎಂದು ಹೇಳಿದ್ದರು. 

ಎಸ್ ಬಿಐ ಇತ್ತೀಚೆಗೆ ನಡೆಸಿದ್ದ ಪರಿಸರ ಸಮೀಕ್ಷೆಯ ವರದಿಯಲ್ಲಿ ಜಿಎಸ್ ಟಿ ವ್ಯಾಪ್ತಿಗೆ ತರುವುದೇ ಆದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಅನುಕ್ರಮವಾಗಿ ಪ್ರತಿ ಲೀಟರ್ ಗೆ 75 ರೂಪಾಯಿ, 68 ರೂಪಾಯಿಗಳಾಗಲಿದೆ. ಆದರೆ ಇದನ್ನು ಮಾಡುವುದಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ಇದೆ ಎಂದು ಹೇಳಿತ್ತು. 

ಪೆಟ್ರೋಲ್ ಬೆಲೆ 90-100 ರೂಪಾಯಿಗಳನ್ನು ಮುಟ್ಟಿದ್ದು, ತೆರಿಗೆ ಹೊರತುಪಡಿಸಿ ದೆಹಲಿಯಲ್ಲಿ ಪೆಟ್ರೋಲ್ ನ ಮೂಲ ಬೆಲೆ ಪ್ರತಿ ಲೀಟರ್ ಗೆ 31.82 ರೂಪಾಯಿಗಳಷ್ಟಿದ್ದರೆ, ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 33.46 ರೂಪಾಯಿಗಳಷ್ಟಿವೆ.

Related Stories

No stories found.

Advertisement

X
Kannada Prabha
www.kannadaprabha.com