ರಿಲಯನ್ಸ್ - ಫ್ಯೂಚರ್ ಗ್ರೂಪ್ ಒಪ್ಪಂದಕ್ಕೆ ದೆಹಲಿ ಹೈಕೋರ್ಟ್ ತಡೆ, ಅಮೆಜಾನ್ ಗೆ ಬಿಗ್ ರಿಲೀಫ್
ಏಷ್ಯಾದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ರೀಟೇಲ್ ವೆಂಚರ್ ಲಿಮಿಟೆಡ್ (ಆರ್ಆರ್ವಿಎಲ್) ಹಾಗೂ ಫ್ಯೂಚರ್ ಗ್ರೂಪ್ ನಡುವಿನ 24 ಸಾವಿರ ಕೋಟಿ ರೂಪಾಯಿ ಡೀಲ್ಗೆ ದೆಹಲಿ...
Published: 18th March 2021 10:38 PM | Last Updated: 18th March 2021 10:38 PM | A+A A-

ಅಮೆಜಾನ್
ನವದೆಹಲಿ: ಏಷ್ಯಾದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ರೀಟೇಲ್ ವೆಂಚರ್ ಲಿಮಿಟೆಡ್ (ಆರ್ಆರ್ವಿಎಲ್) ಹಾಗೂ ಫ್ಯೂಚರ್ ಗ್ರೂಪ್ ನಡುವಿನ 24 ಸಾವಿರ ಕೋಟಿ ರೂಪಾಯಿ ಡೀಲ್ಗೆ ದೆಹಲಿ ಹೈಕೋರ್ಟ್ ಗುರುವಾರ ತಡೆಯಾಜ್ಞೆ ನೀಡಿದೆ.
ರಿಲಯನ್ಸ್ - ಫ್ಯೂಚರ್ ಗ್ರೂಪ್ ಒಪ್ಪಂದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಇ-ಕಾಮರ್ಸ್ ದೈತ್ಯ ಅಮೆಜಾನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಮೂರ್ತಿ ಜೆಆರ್ ಮಿಧಾ ಅವರು, ಒಪ್ಪಂದದಲ್ಲಿ ಮುಂದುವರಿಯದಂತೆ ಫ್ಯೂಚರ್ ರಿಟೇಲ್ಗೆ ಸೂಚನೆ ನೀಡಿದ್ದಾರೆ. ಅಲ್ಲದೆ ಸಿಂಗಾಪುರದ ನ್ಯಾಯಾಲಯದ ಆದೇಶವನ್ನು ಸಂಸ್ಥೆ ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದೆ ಎಂದಿದ್ದಾರೆ.
ಇದೇ ವೇಳೆ ಹಿರಿಯ ನಾಗರಿಕರಿಗೆ ಕೊರೋನಾ ಲಸಿಕೆ ನೀಡಲು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 20 ಲಕ್ಷ ರೂ. ಪಾವತಿಸುವಂತೆ ಫ್ಯೂಚರ್ ಗ್ರೂಪ್ ಮತ್ತು ಅದರ ನಿರ್ದೇಶಕರಿಗೆ ಹೈಕೋರ್ಟ್ ಸೂಚಿಸಿದೆ ಮತ್ತು ಏಪ್ರಿಲ್ 28 ರಂದು ಫ್ಯೂಚರ್ ಗ್ರೂಪ್ ಮಾಲೀಕ ಕಿಶೋರ್ ಬಿಯಾನಿ ಹಾಗೂ ಇತರರಿಗೆ ಕೋರ್ಟ್ ಮುಂದೆ ಹಾಜರಾಗುವಂತೆ ಹೈಕೋರ್ಟ್ ಆದೇಶಿಸಿದೆ.
ಸಿಂಗಾಪುರ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ನಿಮ್ಮನ್ನು ಯಾಕೆ ಮೂರು ತಿಂಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿಸಬಾರದು ಎಂದು ಪ್ರಶ್ನಿಸಿ ಶೋಕಾಸ್ ನೋಟಿಸ್ ಕೂಡ ಜಾರಿಗೊಳಿಸಿದೆ.
ಫ್ಯೂಚರ್ ಸಮೂಹದ ಚಿಲ್ಲರೆ ಹಾಗೂ ಸಗಟು ವ್ಯವಹಾರ, ಲಾಜಿಸ್ಟಿಕ್ಸ್ ಹಾಗೂ ವೇರ್ ಹೌಸಿಂಗ್ ವ್ಯವಹಾರವನ್ನು ಸರಾಸರಿ ರೂ. 24,713 ಕೋಟಿಗೆ ಖರೀದಿ ಮಾಡಲಾಗಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಂಗ ಸಂಸ್ಥೆ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ (RRVL) ಈ ಹಿಂದೆ ಬಿಎಸ್ಇಗೆ ತಿಳಿಸಿತ್ತು. ಆದರೆ ಈ ಡೀಲ್ ಕುರಿತಾಗಿ ಅಮೆಜಾನ್ ಆಕ್ಷೇಪ ಎತ್ತಿತ್ತು.
ಅದಾಗಲೇ ಫ್ಯೂಚರ್ ಗ್ರೂಪ್ನಲ್ಲಿ ಸಣ್ಣ ಪ್ರಮಾಣದ ಹಣ ಹೂಡಿಕೆ ಮಾಡಿದ್ದ ಅಮೆಜಾನ್ ಈ ಡೀಲ್ನ ವಿರುದ್ಧ ಸಿಂಗಾಪುರ ನ್ಯಾಯಾಲಯದ ಮೊರೆ ಹೋಗಿತ್ತು ಮತ್ತು ಸಿಂಗಾಪುರ ನ್ಯಾಯಾಲಯ ಒಪ್ಪಂದಕ್ಕೆ ತಡೆ ನೀಡಿತ್ತು. ಬಳಿಕ ಸಿಂಗಾಪುರ ನ್ಯಾಯಾಲಯದ ಆದೇಶ ಜಾರಿಗೊಳಿಸುವಂತೆ ಕೋರಿ ಅಮೆಜಾನ್ ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.