ಭಾರತದ ಹಣದುಬ್ಬರ 'ಆತಂಕಕಾರಿ ಮಟ್ಟ'ಕ್ಕೆ ಹೆಚ್ಚಳ: ಮೂಡಿಸ್ ಅನಾಲಿಟಿಕ್ಸ್
ಭಾರತದ ಹಣದುಬ್ಬರವು "ಆತಂಕಕಾರಿ ಮಟ್ಟ"ಕ್ಕೆ ಹೆಚ್ಚಳವಾಗಿದ್ದು, ಇದು ಏಷ್ಯಾದ ಆರ್ಥಿಕತೆಗಳಲ್ಲೇ ಒಂದು ಅಪವಾದವಾಗಿದೆ ಎಂದು ಮೂಡಿಸ್ ಅನಾಲಿಟಿಕ್ಸ್ ಮಂಗಳವಾರ ತಿಳಿಸಿದೆ.
Published: 30th March 2021 05:24 PM | Last Updated: 30th March 2021 05:24 PM | A+A A-

ಮೂಡೀಸ್
ನವದೆಹಲಿ: ಭಾರತದ ಹಣದುಬ್ಬರವು "ಆತಂಕಕಾರಿ ಮಟ್ಟ"ಕ್ಕೆ ಹೆಚ್ಚಳವಾಗಿದ್ದು, ಇದು ಏಷ್ಯಾದ ಆರ್ಥಿಕತೆಗಳಲ್ಲೇ ಒಂದು ಅಪವಾದವಾಗಿದೆ ಎಂದು ಮೂಡಿಸ್ ಅನಾಲಿಟಿಕ್ಸ್ ಮಂಗಳವಾರ ತಿಳಿಸಿದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆ ಚಿಲ್ಲರೆ ಹಣದುಬ್ಬರದ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ ಮತ್ತು ಆರ್ಬಿಐ ಮತ್ತಷ್ಟು ದರ ಕಡಿತ ಮುಂದುವರೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹಣಕಾಸು ಗುಪ್ತಚರ ಕಂಪನಿ ಮೂಡಿಸ್ ಅನಾಲಿಟಿಕ್ಸ್ ಹೇಳಿದೆ.
ಚಿಲ್ಲರೆ ಹಣದುಬ್ಬರ ಫೆಬ್ರವರಿಯಲ್ಲಿ ಶೇ. 5ಕ್ಕೆ ಏರಿದ್ದು, ಜನವರಿಯಲ್ಲಿ ಶೇ 4.1 ರಷ್ಟಿತ್ತು. ವಿತ್ತೀಯ ನೀತಿಯನ್ನು ನಿರ್ಧರಿಸುವಾಗ ರಿಸರ್ವ್ ಬ್ಯಾಂಕ್ ಮುಖ್ಯವಾಗಿ ಚಿಲ್ಲರೆ ಹಣದುಬ್ಬರವನ್ನು ಗಣನೆಗೆ ತೆಗೆದುಕೊಳ್ಳುತ್ತದೆ.
ಪ್ರಮುಖ ಹಣದುಬ್ಬರ (ಆಹಾರ, ಇಂಧನ ಮತ್ತು ವಿದ್ಯುತ್ ಹೊರತುಪಡಿಸಿ) ಫೆಬ್ರವರಿಯಲ್ಲಿ ಶೇಕಡಾ 5.6 ರಷ್ಟು ಏರಿಕೆಯಾಗಿದ್ದು, ಜನವರಿಯಲ್ಲಿ ಇದು 5.3 ರಷ್ಟಿತ್ತು ಎಂದು ಮೂಡಿಸ್ ಅನಾಲಿಟಿಕ್ಸ್ ಹೇಳಿದೆ. ಅಲ್ಲದೆ ಭಾರತದ ಹಣದುಬ್ಬರವು 'ಆತಂಕಕಾರಿ ಮಟ್ಟ'ಕ್ಕೆ ಹೆಚ್ಚಳವಾಗಿದೆ ಎಚ್ಚರಿಸಿದೆ.
ಏಷ್ಯಾದ ಹೆಚ್ಚಿನ ದೇಶಗಳಲ್ಲಿ ಹಣದುಬ್ಬರವು ಕಡಿಮೆಯಾಗಿದೆ ಎಂದಿರುವ ಮೂಡಿಸ್, ಭಾರತದಲ್ಲಿ ತೈಲ ಬೆಲೆ ಏರಿಕೆ ಮತ್ತು ಆರ್ಥಿಕ ಚಟುವಟಿಕೆಗಳು ಪುನರಾರಂಭವಾಗುತ್ತಿರುವುದರಿಂದ ಹಣದುಬ್ಬರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದೆ.