18 ದಿನಗಳ ನಂತರ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ!

ಪಂಚರಾಜ್ಯ ಚುನಾವಣೆ ಪೂರ್ಣಗೊಳ್ಳುತ್ತಿದ್ದಂತೆಯೇ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಮಾಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಪಂಚರಾಜ್ಯ ಚುನಾವಣೆ ಪೂರ್ಣಗೊಳ್ಳುತ್ತಿದ್ದಂತೆಯೇ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಮಾಡಿದೆ. 

ಭಾರತದಲ್ಲಿ ಮಹಾಮಾರಿ ಕೊರೋನಾ ವೈರಸ್ ಅಬ್ಬರಿಸುತ್ತಿರುವ ನಡುವಲ್ಲೇ ಸುಮಾರು 18 ದಿನಗಳ ಬಳಿಕ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಾಗಿದೆ. ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಮೇಲೆ 15 ಪೈಸೆ ಹಾಗೂ ಡೀಸೆಲ್ ಬೆಲೆ ಪ್ರತೀ ಲೀಟರ್'ಗೆ 18 ಪೈಸೆ ಏರಿಕೆಯಾಗಿದೆ. 

ಇದರಂತೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಸ್ತುತ ಪೆಟ್ರೋಲ್ ಪ್ರತೀ ಲೀಟರ್ ದರ ರೂ.90.55 ಹಾಗೂ ಡೀಸೆಲ್ ಪ್ರತೀ ಲೀಟರ್'ಗೆ ರೂ.80.91ಕ್ಕೆ ಏರಿಕೆಯಾಗಿದೆ. 

ಮೆಟ್ರೋ ನಗರಗಳ ಪೈಕಿ ಮುಂಬೈನಲ್ಲಿ ಪೆಟ್ರೋಲ್ ದರ ಅತ್ಯಧಿಕವಾಗಿ ಏರಿಕೆಯಾಗಿದೆ. ವಾಣಿಜ್ಯ ನಗರಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ ರೂ.96.95ಕ್ಕೆ ತಲುಪಿದೆ. 

ಪಂಚ ರಾಜ್ಯ ಚುನಾವಣೆ ಪೂರ್ಣಗೊಂಡ ಬಳಿಕ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಇದರಂತೆ ಚುನಾವಣೆ ಅಂತ್ಯಗೊಳ್ಳುತ್ತಿದ್ದಂತೆಯೇ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ.

ಈ ನಡುವೆ ಹೇಳಿಕೆ ನೀಡಿರುವ ತೈಲ ಕಂಪನಿಗಳು ಕಳೆದ 2 ತಿಂಗಳುಗಳಿಂದ ತೈಲ ಮಾರಾಟ ಕಂಪನಿಗಳಿಗೆ ನಷ್ಟವಾಗಿದ್ದು, ಆ ನಷ್ಟವನ್ನು ವಾಪಸ್ಸು ಪಡೆಯಲು ಬೆಲೆ ಏರಿಕೆ ಮಾಡಲಾಗಿದೆ ಎಂದು ಹೇಳಿವೆ. 

ದೇಶದ ಪ್ರಮುಖ ನಗರಗಳಲ್ಲಿನ ತೈಲ ದರ ಇಂತಿದೆ...

  • ಬೆಂಗಳೂರು: ಪೆಟ್ರೋಲ್ ರೂ.93.60 - ಡೀಸೆಲ್ ರೂ.85.81  
  • ದೆಹಲಿ: ಪೆಟ್ರೋಲ್ ರೂ.90.55- ಡೀಸೆಲ್ ರೂ.80.91
  • ಮುಂಬೈ: ಪೆಟ್ರೋಲ್ ರೂ.96.95- ಡೀಸೆಲ್ ರೂ.87.98
  • ಚೆನ್ನೈ: ಪೆಟ್ರೋಲ್ ರೂ.92.55 - ರೂ. ಡೀಸೆಲ್ 85.90  
  • ಪುಣೆ: ಪೆಟ್ರೋಲ್ ರೂ.96.60 - ಡೀಸೆಲ್ ರೂ.86.30 
  • ಕೋಲ್ಕತಾ: ರೂ.ಪೆಟ್ರೋಲ್ 90.76- ಡೀಸೆಲ್ ರೂ.83.78 
  • ಹೈದರಾಬಾದ್: ಪೆಟ್ರೋಲ್ ರೂ.94.16 ರು- ಡೀಸೆಲ್ ರೂ.88.25 

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದ್ದು, ದರ ಪರಿಷ್ಕರಣೆ ಮಾಡದಿರುವುದರಿಂದ ಪ್ರಮುಖ ತೈಲ ಸಂಸ್ಥೆಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ನಷ್ಟ ಅನುಭವಿಸಿವೆ. ಮಾರ್ಚ್, ಏಪ್ರಿಲ್ ತಿಂಗಳಲ್ಲಿ ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ 77 ಪೈಸೆ ಹಾಗೂ 74 ಪೈಸೆ ಪ್ರತಿ ಲೀಟರ್‌ಗೆ ಏರಿಕೆ ಕಂಡಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com