ಸೋನಿ ಇಂಡಿಯಾದೊಂದಿಗೆ ಜೀ ಎಂಟರ್ ಟೈನ್ಮೆಂಟ್ ವಿಲೀನ: ಪುನೀತ್ ಗೊಯೆಂಕಾ ಸಿಇಓ ಆಗಿ ಮುಂದುವರಿಕೆ

ಸೋನಿ ಪಿಕ್ಚರ್ಸ್‌ ನೆಟ್‌ವರ್ಕ್ಸ್‌ ಇಂಡಿಯಾದೊಂದಿಗೆ (ಎಸ್‌ಪಿಎನ್‌ಐ) ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದ ಸಂಸ್ಥೆ 'ಜೀ ಎಂಟರ್‌ಟೈನ್ಮೆಂಟ್‌ ಎಂಟರ್ಪ್ರೈಸಸ್‌ ಲಿಮಿಟೆಡ್' ವಿಲೀನವಾಗಲಿದೆ. 
ಪುನೀತ್ ಗೋಯೆಂಕಾ
ಪುನೀತ್ ಗೋಯೆಂಕಾ

ನವದೆಹಲಿ: ಸೋನಿ ಪಿಕ್ಚರ್ಸ್‌ ನೆಟ್‌ವರ್ಕ್ಸ್‌ ಇಂಡಿಯಾದೊಂದಿಗೆ (ಎಸ್‌ಪಿಎನ್‌ಐ) ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದ ಸಂಸ್ಥೆ 'ಜೀ ಎಂಟರ್‌ಟೈನ್ಮೆಂಟ್‌ ಎಂಟರ್ಪ್ರೈಸಸ್‌ ಲಿಮಿಟೆಡ್' ವಿಲೀನವಾಗಲಿದೆ. 

ಮಂಡಳಿಯು ವಿಲೀನ ಪ್ರಕ್ರಿಯೆಗೆ ತಾತ್ವಿಕ ಒಪ್ಪಿಗೆ ನೀಡಿರುವುದಾಗಿ ಜೀ ಎಂಟರ್‌ಟೈನ್ಮೆಂಟ್‌ ಬುಧವಾರ ತಿಳಿಸಿದೆ. ಜೀ ಎಂಟರ್‌ಟೈನ್‌ಮೆಂಟ್ ಹಾಗೂ ಸೋನಿ ಇಂಡಿಯಾ ನೆಟ್‌ವರ್ಕ್‌ ವಿಲೀನದೊಂದಿಗೆ ಎರಡು ಕಂಪನಿಗಳು ಒಟ್ಟಾಗಿ ಭಾರತದಲ್ಲಿ ಅತಿದೊಡ್ಡ ಮನರಂಜನಾ ಜಾಲವನ್ನು ರಚಿಸಲಿದ್ದು, ಶೇಕಡಾ 26ರಷ್ಟು ವೀಕ್ಷಣೆಯ ಹಂಚಿಕೆಯನ್ನು ಹೊಂದಿದ್ದು, ಜೀ ಜೊತೆ ಶೇಕಡಾ 18ರಷ್ಟು ವೀಕ್ಷಕರ ಪಾಲು ಮತ್ತು ಸೋನಿ ಶೇಕಡಾ 8ರಷ್ಟು ವೀಕ್ಷಕರ ಪಾಲು ಹೊಂದಿದೆ.

ವಿಲೀನ ಪ್ರಕ್ರಿಯೆ ಸುದ್ದಿ ಹೊರ ಬರುತ್ತಿದ್ದಂತೆ ಜೀ ಎಂಟರ್‌ಟೈನ್ಮೆಂಟ್‌ ಷೇರು ಬೆಲೆ ಶೇ 21.76ರಷ್ಟು (55.65 ರೂಪಾಯಿ) ಏರಿಕೆಯಾಗಿ  311.35ರಲ್ಲಿ ವಹಿವಾಟು ನಡೆದಿದೆ. ಟಿವಿ ಪ್ರಸಾರ ಮತ್ತು ಡಿಜಿಟಲ್‌ ಮೀಡಿಯಾದಲ್ಲಿ 'ಜೀ ಟಿವಿ' ಬ್ರ್ಯಾಂಡ್‌ ಮೂಲಕ ಸಂಸ್ಥೆಯು ಗುರುತಿಸಿಕೊಂಡಿದೆ. 

ಜೀ ಮತ್ತು ಎಸ್‌ಪಿಎನ್‌ಐ ತಮ್ಮ ನೆಟ್‌ವರ್ಕ್‌ಗಳು, ಡಿಜಿಟಲ್‌ ಸ್ವತ್ತುಗಳು, ನಿರ್ಮಾಣ ಕಾರ್ಯಾಚರಣೆಗಳು ಹಾಗೂ ಕಾರ್ಯಕ್ರಮ ಸಂಗ್ರಹಗಳನ್ನು ವಿಲೀನಗೊಳಿಸುವ ಒಪ್ಪಂದಕ್ಕೆ ಬಂದಿವೆ. ಈ ವಿಲೀನ ಒಪ್ಪಂದದ ಪ್ರಕಾರ, ಜೀ ಸಂಸ್ಥೆಯ ಹೂಡಿಕೆದಾರರು ಶೇ 47.07ರಷ್ಟು ಷೇರುಗಳನ್ನು ಉಳಿಸಿಕೊಳ್ಳಲಿದ್ದಾರೆ ಹಾಗೂ ಉಳಿದ ಷೇರುಗಳು ಸೋನಿ ಇಂಡಿಯಾದ ಹೂಡಿಕೆದಾರರ ಒಡೆತನಕ್ಕೆ ಸಿಗಲಿವೆ. 

ಸೋನಿ 1.57 ಬಿಲಿಯನ್‌ ಡಾಲರ್‌ (ಸುಮಾರು ರು 11,571 ಕೋಟಿ) ಹೂಡಿಕೆ ಮಾಡಲಿದೆ. ಉಭಯ ಸಂಸ್ಥೆಗಳು ಒಪ್ಪಂದ ಅಂತಿಮಗೊಳಿಸಲು 90 ದಿನಗಳ ಅವಧಿ ಇರುತ್ತದೆ. ವಿಲೀನಗೊಂಡ ಸಂಸ್ಥೆಯು ಭಾರತದ ಷೇರುಪೇಟೆಯಲ್ಲಿ ಸಾರ್ವಜನಿಕ ವಹಿವಾಟಿಗೆ ತೆರೆದುಕೊಳ್ಳಲಿದೆ ಹಾಗೂ ಪುನೀತ್ ಗೋಯೆಂಕಾ ಸಂಸ್ಥೆಯ ನಿರ್ವಾಹಕ ನಿರ್ದೇಶಕ ಮತ್ತು ಸಿಇಒ ಆಗಿ ಉಳಿಯಲಿದ್ದಾರೆ. ವಿಲೀನ ಪ್ರಕ್ರಿಯೆಯ ಪ್ರಸ್ತಾಪವನ್ನು ಅನುಮತಿಗಾಗಿ ಷೇರುದಾರರ ಮುಂದಿಡಲಾಗುತ್ತದೆ ಎಂದು ಜೀ ಸಂಸ್ಥೆ ಹೇಳಿದೆ.

ಎರಡು ಕಂಪನಿ ವಿಲೀನದೋಂದಿಗೆ ಬರೋಬ್ಬರಿ 75 ಚಾನೆಲ್‌ಗಳ ನೆಟ್‌ವರ್ಕ್ ಅನ್ನು ಹೊಂದಲಿದೆ. ಎಸ್ ಪಿ ಐ ಎನ್ ಆಪರೇಟಿಂಗ್ 26 ಚಾನೆಲ್‌ಗಳೊಂದಿಗೆ ಕಾರ್ಯನಿರ್ವಹಿಸುತ್ತದೆ ಮತ್ತು ಕ್ರೀಡಾ ಪ್ರಕಾರದಲ್ಲಿ ಎರಡು ಹೊಸ ಚಾನೆಲ್‌ಗಳು ಸೇರಿದೆ. ಇನ್ನು ಜೀ ಎಂಟರ್‌ಟೈನ್‌ಮೆಂಟ್ 49 ಚಾನೆಲ್‌ಗಳನ್ನು ಸೇರಿಸುತ್ತದೆ.

ಝೀ ಸಂಸ್ಥೆಯಲ್ಲಿ ಉಂಟಾದ ಆಂತರಿಕ ತಿಕ್ಕಾಟದಿಂದ ಹಲವು ಉನ್ನತ ಅಧಿಕಾರಿಗಳನ್ನು ವಜಾಗೊಳಿಸಲು ಷೇರುದಾರರು ಮುಂದಾಗಿದ್ದರು. ಇದಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಸೋನಿ ಇಂಡಿಯಾಕ್ಕೂ ಮೊದಲು ಝೀ ಸಂಸ್ಥೆಯಲ್ಲಿ ಇತರೆ ಸಂಸ್ಥೆಗಳು ಕೂಡಾ ಹೂಡಿಕೆ ಮಾಡಿವೆ. ಇವೆಸ್ಕೋ ಡೆವಲಪ್ಮೆಂಟ್ ಮಾರ್ಕೆಟ್ಸ್ ಫಂಡ್ ಹಾಗೂ ಒಎಫ್ಐ ಗ್ಲೋಬಲ್ ಚೀನಾ ಫಂಡ್ ಎಲ್ಎಲ್ಸಿ ಹೂಡಿಕೆ ಮಾಡಿದ್ದು, ಶೇ 17.9ರಷ್ಟು ಪಾಲು ಹೊಂದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com