
ಗೌತಮ್ ಅದಾನಿ
ನವದೆಹಲಿ: ಭಾರತದ ಖ್ಯಾತ ಉದ್ಯಮಿ ಗೌತಮ್ ಅದಾನಿ ಮತ್ತೆ ಏಷ್ಯಾದ ಶ್ರೀಮಂತ ವ್ಯಕ್ತಿ ಕೀರ್ತಿಗೆ ಭಾಜನವಾಗಿದ್ದು, ಅದಾನಿ ಇದೀಗ 100 ಶತಕೋಟಿ ಡಾಲರ್ ಒಡೆಯರಾಗಿದ್ದಾರೆ.
ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ 100 ಶತಕೋಟಿ ಡಾಲರ್ (7.59 ಲಕ್ಷ ಕೋಟಿ ರೂಪಾಯಿ) ನ ನಿವ್ವಳ ಮೌಲ್ಯದೊಂದಿಗೆ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದು, ಜಾಗತಿಕ ಸೂಚ್ಯಂಕದಲ್ಲಿ ಅದಾನಿ 10ನೇ ಸ್ಥಾನದಲ್ಲಿದ್ದರೆ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ 11 ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಅದಾನಿ ಸೆಂಟಿಬಿಲಿಯನೇರ್ (100 ಶತಕೋಟಿ ಡಾಲರ್ ಅಥವಾ ಅದಕ್ಕಿಂತ ಹೆಚ್ಚಿನ ಸಂಪತ್ತು ಹೊಂದಿರುವರು) ಕೂಡ ಆಗಿದ್ದು, ಕಳೆದ ವರ್ಷದ ತನ್ನ ನಿವ್ವಳ ಮೌಲ್ಯಕ್ಕೆ ಅದಾನಿ ಈ ವರ್ಷ 23.5 ಶತಕೋಟಿ ಡಾಲರ್ ಅನ್ನು ಸೇರಿಸಿದ್ದಾರೆ. ಇದು ಪಟ್ಟಿಯಲ್ಲಿ ಅತ್ಯಧಿಕವಾಗಿದೆ. ಇದೇ ಅವಧಿಯಲ್ಲಿ ಅಂಬಾನಿ ತಮ್ಮ ನಿವ್ವಳ ಮೌಲ್ಯವನ್ನು 9.03 ಬಿಲಿಯನ್ ಡಾಲರ್ ನಷ್ಟು ಹೆಚ್ಚಿಸಿಕೊಂಡಿದ್ದಾರೆ. ಟೆಸ್ಲಾದ ಎಲೊನ್ ಮಸ್ಕ್ 273 ಬಿಲಿಯನ್ ಶತಕೋಟಿ ನಿವ್ವಳ ಮೌಲ್ಯದೊಂದಿಗೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಮುಂದುವರೆದಿದ್ದು, ಅಮೆಜಾನ್‌ನ ಜೆಫ್ ಬೆಜೋಸ್ 188 ಶತಕೋಟಿ ಡಾಲರ್ ನಿವ್ವಳ ಮೌಲ್ಯದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಫೆಬ್ರವರಿಯಲ್ಲಿ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಇಬ್ಬರೂ ಫೋರ್ಬ್ಸ್‌ನ ರಿಯಲ್ ಟೈಮ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಫೇಸ್‍ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅವರನ್ನು ಹಿಂದಿಕ್ಕಿದ್ದರು. ಮೆಟಾ ಕಂಪನಿಯ ಷೇರುಗಳು ಒಂದು ದಿನದ ದಾಖಲೆಯ ಕುಸಿತ ಕಂಡ ಬಳಿಕ 29 ಶತಕೋಟಿ ಡಾಲರ್ ನಿವ್ವಳ ಮೌಲ್ಯವನ್ನು ಕಳೆದುಕೊಂಡಿದ್ದರು.
ಅದಾನಿ ಗ್ರೂಪ್‌ನ 59 ವರ್ಷದ ಸಂಸ್ಥಾಪಕ, ಬಂದರುಗಳು ಮತ್ತು ಏರೋಸ್ಪೇಸ್‌ನಿಂದ ಉಷ್ಣ ಶಕ್ತಿ ಮತ್ತು ಕಲ್ಲಿದ್ದಲಿನವರೆಗಿನ ಹಲವು ಕಂಪನಿಗಳ ಮಾಲೀಕತ್ವ ಹೊಂದಿದ್ದಾರೆ. ಸದ್ಯ ಏಷ್ಯಾದ ಶ್ರೀಮಂತರಾಗಿರುವ ಅಂಬಾನಿ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ವಿಶ್ವದ ಅತಿದೊಡ್ಡ ತೈಲ ಸಂಸ್ಕರಣಾ ಸಂಕೀರ್ಣದ ಮಾಲೀಕರೂ ಆಗಿದ್ದಾರೆ.