ವಾರದಲ್ಲಿ ಬಿಎಸ್ಎನ್ಎಲ್ 4ಜಿ ಸೇವೆ ಆರಂಭ: ಕೇಂದ್ರ ಸಚಿವ
ಕೆಲವೇ ವಾರಗಳಲ್ಲಿ ಸ್ವದೇಶಿ 4ಜಿ ನೆಟ್ವರ್ಕ್ ಸೇವೆ ಬಿಎಸ್ಎನ್ಎಲ್ ಮೂಲಕ ಆರಂಭವಾಗಲಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಸಂಹವನ ಸಚಿವ ಅಶ್ವಿನಿ ವೈಷ್ಣವ್ ಅವರು ಶುಕ್ರವಾರ ಹೇಳಿದ್ದಾರೆ.
Published: 30th April 2022 01:57 PM | Last Updated: 30th April 2022 02:10 PM | A+A A-

ಕಾಂರ್ಯಕ್ರಮದಲ್ಲಿ ಕೇಂದ್ರ ಸಚಿವರು.
ಬೆಂಗಳೂರು: ಕೆಲವೇ ವಾರಗಳಲ್ಲಿ ಸ್ವದೇಶಿ 4ಜಿ ನೆಟ್ವರ್ಕ್ ಸೇವೆ ಬಿಎಸ್ಎನ್ಎಲ್ ಮೂಲಕ ಆರಂಭವಾಗಲಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಸಂಹವನ ಸಚಿವ ಅಶ್ವಿನಿ ವೈಷ್ಣವ್ ಅವರು ಶುಕ್ರವಾರ ಹೇಳಿದ್ದಾರೆ.
ದೇಶದ ಅರೆ ವಾಹಕ ಉದ್ಯಮ ವಲಯ ಉತ್ತೇಜಿಸುವ ದೃಷ್ಟಿಯಿಂದ ಬೆಂಗಳೂರಿನಲ್ಲಿ ಆಯೋಜಿಸಿರುವ ದೇಶದ ಮೊದಲ ‘ಸೆಮಿಕಾನ್ ಇಂಡಿಯಾ 2022’ ಸಮ್ಮೇಳನದಲ್ಲಿ ಪಾಲ್ಗೊಂಡ ಬಳಿಕ ನಡೆದ ಸಂವಾದದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದ್ದಾರೆ.
ಭಾರತೀಯ ಎಂಜಿನಿಯರ್ಗಳು ಮತ್ತು ವಿಜ್ಞಾನಿಗಳಿಂದಲೇ ಅಭಿವೃದ್ಧಿಪಡಿಸಲಾಗಿರುವ ದೇಶೀಯ 4ಜಿ ನೆಟ್ವರ್ಕ್ ಸೇವೆ ಇನ್ನು ಕೆಲವೇ ವಾರಗಳಲ್ಲಿ ಆರಂಭವಾಗಲಿದೆ. ಬಿಎಸ್ಎನ್ಎಲ್ ಮೂಲಕ ದೇಶದ ಜನರಿಗೆ ಈ ಸೇವೆ ಲಭ್ಯವಾಗಲಿದೆ. ಇದಕ್ಕಾಗಿ ವಿವಿಧ ರಾಜ್ಯಗಳಲ್ಲಿ ಮೊದಲ ಹಂತದಲ್ಲಿ 2400 ಕೋಟಿ ರು.ಗೂ ಹೆಚ್ಚು ಮೊತ್ತದಲ್ಲಿ ಒಟ್ಟು 2343 ಟವರ್ಗಳನ್ನು 4ಜಿಗೆ ಉನ್ನತೀಕರಿಸಲಾಗುತ್ತಿದೆ. ಇದಕ್ಕೆ ಸ್ಥಳಾವಕಾಶವನ್ನೂ ಅಂತಿಮಗೊಳಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಭಾರತ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆ ಹೊಂದಿದೆ: ಪ್ರಧಾನಿ ಮೋದಿ
ಭಾರತೀಯ ಸೆಮಿಕಂಡಕ್ಟರ್ ಮಿಷನ್ (ಐಎಸ್ಎಂ) ಸಮಿತಿಯು ಈ ಪ್ರಕ್ರಿಯೆಯನ್ನು ಮೌಲ್ಯಮಾಪನ ಮಾಡುತ್ತಿರುವುದರಿಂದ ಮುಂದಿನ 6-8 ತಿಂಗಳುಗಳಲ್ಲಿ ಎಲೆಕ್ಟ್ರಾನಿಕ್ ಚಿಪ್ ತಯಾರಕರಿಗೆ ಕೇಂದ್ರ ಸರ್ಕಾರವು ಒಪ್ಪಿಗೆ ನೀಡುವ ನಿರೀಕ್ಷೆಗಳಿವೆ. 1.53 ಲಕ್ಷ ಕೋಟಿ ಹೂಡಿಕೆಯೊಂದಿಗೆ ಎಲೆಕ್ಟ್ರಾನಿಕ್ ಚಿಪ್ ಮತ್ತು ಡಿಸ್ಪ್ಲೇ ತಯಾರಿಕಾ ಘಟಕಗಳನ್ನು ಸ್ಥಾಪಿಸಲು ಪ್ರಸ್ತಾವನೆಗಳನ್ನು ಸ್ವೀಕರಿಸಲಾಗಿದೆ. ಸೂಕ್ತ ಪರಿಶೀಲನೆಯ ನಂತರ ಅನುಮೋದನೆಗಳು ಸಿಗಲಿವೆ ಎಂದು ಇದೇ ವೇಳೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ತಿಳಿಸಿದ್ದಾರೆ.
ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ವಿಶ್ವದ ಅತೀ ದೊಡ್ಡ ಸಾಮಾಜಿಕ ಜಾಲತಾಣ ವೇದಿಕೆ ಟ್ವಿಟರ್ ಖರೀದಿಸಿದ ಕುರಿತು ಮಾತನಾಡಿ, ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿಯೂ ನಿಯಮಗಳು ಮತ್ತು ಕಾನೂನುಗಳಿವೆ, ಅದು ಯಾರೇ ಮಾಲೀಕರಾಗಿದ್ದರೂ ಆ ನಿಯಮ, ಕಾನೂನು ಹಾಗೆಯೇ ಉಳಿಯುತ್ತದೆ ಎಂದಿದ್ದಾರೆ.
ಇದನ್ನೂ ಓದಿ: 6ಜಿ ತಂತ್ರಜ್ಞಾನದಲ್ಲಿ ಚೀನಾ 'ವಿಶ್ವ ದಾಖಲೆ': 5ಜಿ ಗಿಂತ ನೂರು ಪಟ್ಟು ವೇಗ!
ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಭಾರತವು ಚೀನಾದೊಂದಿಗೆ ಸ್ಪರ್ಧೆಯಲ್ಲಿ ಇಲ್ಲ. ಈ ಕ್ಷೇತ್ರದಲ್ಲಿ ಚೀನಾದ ಉತ್ಪಾದನೆಯೂ ಕಡಿಮೆಯೇ ಇದೆ. ಇನ್ನೊಂದು ದಶಕದಲ್ಲಿ ಶೇ.10ರಷ್ಟು ಮಾರುಕಟ್ಟೆಯನ್ನು ಈ ಕ್ಷೇತ್ರದಲ್ಲಿ ನಮ್ಮ ದೇಶ ಹೊಂದಬೇಕೆಂಬುದು ನಮ್ಮ ಗುರಿ ಎಂದರು.
ಸಚಿವ ಅಶ್ವಿನಿ ವೈಷ್ಣವ್ ಅವರು ಮಾತನಾಡಿ, ಸೆಮಿ ಕಂಡಕ್ಟರ್ ಉದ್ಯಮವನ್ನು ನಿರ್ಮಿಸುವುದು ಅಲ್ಪಾವಧಿಯ ಕಾರ್ಯವಲ್ಲ. ಇದು ಮ್ಯಾರಥಾನ್ ಇದ್ದಂತೆ. ನಮ್ಮ ದೇಶವು ಇತರ ದೇಶಗಳಿಗಿಂತ ವಿಭಿನ್ನವಾದ ಪ್ರತಿಭೆಯನ್ನು ಹೊಂದಿದೆ ಎಂದು ಹೇಳಿದರು.
ಸುಮಾರು ಶೇ.20ರಷ್ಟು ವಿಎಲ್ಎಸ್ಐ ಚಿಪ್ ಡಿಸೈನರ್ ಎಂಜಿನಿಯರ್ಗಳು ಮತ್ತು 250 ಕಂಪನಿಗಳು ದೇಶದಿಂದ ಹೊರಗೆ ಕೆಲಸ ಮಾಡುತ್ತಿವೆ. 100 ಶೈಕ್ಷಣಿಕ ಸಂಸ್ಥೆಗಳು ಮತ್ತು ಆರ್ & ಡಿ ಸಂಸ್ಥೆಗಳ ಸಹಯೋಗದೊಂದಿಗೆ 10 ವರ್ಷಗಳಲ್ಲಿ 85,000 ವೃತ್ತಿಪರರಿಗೆ ಟ್ಯಾಲೆಂಟ್ ಪೂಲ್ ಅನ್ನು ಸ್ಥಾಪಿಸುವ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಒಟ್ಟಾರೆಯಾಗಿ, ಯೋಜನೆಯಲ್ಲಿ 5,000 ವೃತ್ತಿಪರರು, 30,000 ಎಂಜಿನಿಯರ್ಗಳು ಮತ್ತು 50,000 ಇತರರಿಗೆ ತರಬೇತಿ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.