ಉದ್ಯೋಗಿಗಳಿಗೆ ತಿಂಗಳಲ್ಲ... ಪ್ರತಿ ವಾರ ಸಂಬಳ: ಇಂಡಿಯಾ ಮಾರ್ಟ್ ವಿನೂತನ ಕ್ರಮ!
ತಿಂಗಳಿಗೊಮ್ಮೆ ಸಂಬಳ ಇದು ಇಲ್ಲಿಯವರೆಗೂ ನಾವು ನೋಡಿಕೊಂಡು ಬಂದ ವ್ಯವಸ್ಥೆ.. ಆದರೆ ಖ್ಯಾತ B2B ಇ-ಕಾಮರ್ಸ್ ಕಂಪನಿ ಇಂಡಿಯಾ ಮಾರ್ಟ್ ಸಂಸ್ಥೆ ವಾರದ ಸಂಬಳ ನೀಡುವ ನಿರ್ಣಯ ಕೈಗೊಂಡು ಅಚ್ಚರಿ ಮೂಡಿಸಿದೆ.
Published: 07th February 2022 05:11 PM | Last Updated: 07th February 2022 06:05 PM | A+A A-

ಇಂಡಿಯಾ ಮಾರ್ಟ್
ನವದೆಹಲಿ: ತಿಂಗಳಿಗೊಮ್ಮೆ ಸಂಬಳ ಇದು ಇಲ್ಲಿಯವರೆಗೂ ನಾವು ನೋಡಿಕೊಂಡು ಬಂದ ವ್ಯವಸ್ಥೆ.. ಆದರೆ ಖ್ಯಾತ B2B ಇ-ಕಾಮರ್ಸ್ ಕಂಪನಿ ಇಂಡಿಯಾ ಮಾರ್ಟ್ ಸಂಸ್ಥೆ ವಾರದ ಸಂಬಳ ನೀಡುವ ನಿರ್ಣಯ ಕೈಗೊಂಡು ಅಚ್ಚರಿ ಮೂಡಿಸಿದೆ.
ಹೌದು.. ಇಂಡಿಯಾ ಮಾರ್ಟ್‌ನ ಉದ್ಯೋಗಿಗಳು ಇನ್ನು ಮುಂದೆ ಸಂಬಳಕ್ಕಾಗಿ ತಿಂಗಳ ಕೊನೆಯ ದಿನದವರೆಗೆ ಕಾಯಬೇಕಾಗಿಲ್ಲ. ಕಂಪನಿಯು ತನ್ನ ಉದ್ಯೋಗಿಗಳಿಗೆ ಪ್ರತಿ ವಾರ ಸಂಬಳ ನೀಡುವ ಹೊಸ ಸಾಪ್ತಾಹಿಕ ವೇತನ ಪಾವತಿ ನೀತಿಯನ್ನು ಪ್ರಕಟಿಸಿದೆ. ಕಂಪನಿಯು ತನ್ನ ಫೇಸ್‌ಬುಕ್ ಪುಟದಲ್ಲಿ ಈ ಮಾಹಿತಿಯನ್ನು ನೀಡಿದೆ. ಇದು ಉದ್ಯೋಗಿಗಳ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಸಹಾಯ ಮಾಡಲಿದೆ. ಅಲ್ಲದೆ, ಉತ್ತಮ ಕೆಲಸ ಮಾಡಲು ಪ್ರೇರೇಪಿಸುತ್ತದೆ ಎಂದು ಕಂಪನಿ ತಿಳಿಸಿದೆ.
ಫೇಸ್ ಬುಕ್ ಪೋಸ್ಟ್ ನಲ್ಲಿ ಮಾಹಿತಿ
ಇಂಡಿಯಾ ಮಾರ್ಟ್ ಫೇಸ್‌ಬುಕ್ ಪೋಸ್ಟ್‌ನಲ್ಲಿ “ಉದ್ಯೋಗಿ ಕೆಲಸ ಮಾಡುವ ಸಂದರ್ಭದಲ್ಲಿ ಒಂದು ಹೊಂದಿಕೊಳ್ಳುವ ಸಂಸ್ಕೃತಿಯನ್ನು ರಚಿಸಲು ಹಾಗೂ ನಮ್ಮ ಉದ್ಯೋಗಿಗಳ ಆರ್ಥಿಕ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳುವಲ್ಲಿ ಇಂಡಿಯಾಮಾರ್ಟ್ ಪ್ರತಿ ವಾರ ಸಂಬಳ ನೀಡುವ ಭಾರತದಲ್ಲಿನ ಮೊದಲ ಸಂಸ್ಥೆಯಾಗಿದೆ” ಎಂದು ತಿಳಿಸಿದೆ. ವಾರದ ಸಂಬಳ ಪಡೆಯುವುದರಿಂದ ಉದ್ಯೋಗಿಗಳಿಗೆ ತಮ್ಮ ಆರ್ಥಿಕ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ ಎಂದು ಕಂಪನಿ ಹೇಳಿದೆ. ಈ ಪೋಸ್ಟ್‌ನೊಂದಿಗೆ ಕಂಪನಿಯು ಫೋಟೋವನ್ನು ಸಹ ಅಪ್ ಲೋಡ್ ಮಾಡಿದೆ. ಫೋಟೋದಲ್ಲಿ, “ನಿಮ್ಮ ಆರ್ಥಿಕ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ತೆಗೆದುಕೊಂಡ ಹೆಜ್ಜೆ” ಎಂದು ಬರೆಯಲಾಗಿದೆ.
ವಿದೇಶಗಳಲ್ಲಿ ಹೇಗಿದೆ ವ್ಯವಸ್ಥೆ?
ವಾರದ ವೇತನ ಪಾವತಿಯು ಉದ್ಯೋಗಿಗಳ ಕ್ಷೇಮವನ್ನು ಉತ್ತೇಜಿಸುವ ಹಾಗೂ ಗಂಟೆಯ ಆಧಾರದ ಮೇಲೆ ಕೆಲಸ ಮಾಡುವವರಿಗೆ ಇದು ಅತ್ಯುತ್ತಮ ಆಯ್ಕೆ ಎಂದು ಪರಿಗಣಿಸಲಾಗಿದೆ. ಇದು ಈಗಾಗಲೇ ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಹಾಂಗ್ ಕಾಂಗ್ ಮತ್ತು ಅಮೆರಿಕ ಸೇರಿದಂತೆ ಸಾಕಷ್ಟು ರಾಷ್ಟ್ರಗಳಲ್ಲಿ ಜಾರಿಯಲ್ಲಿದೆ. ಆದರೆ, ಭಾರತದಲ್ಲಿ ಸಾಮಾನ್ಯವಾಗಿ ಉದ್ಯೋಗಿಗಳು ತಿಂಗಳ ಕೊನೆಯಲ್ಲಿ ಸಂಬಳ ಪಡೆಯುತ್ತಾರೆ.