ಹಣದುಬ್ಬರ ಭೀತಿ; 1000ಕ್ಕೂ ಹೆಚ್ಚು ಅಂಕ ಕುಸಿತ ಕಂಡ ಸೆನ್ಸೆಕ್ಸ್, ನಿಫ್ಟಿ 276 ಅಂಶ ಕುಸಿತ!!
ಭಾರತೀಯ ಷೇರುಮಾರುಕಟ್ಟೆಯಲ್ಲಿ ಹಣದುಬ್ಬರ ಭೀತಿ ಮುಂದುವರೆದಿದ್ದು, ವಹಿವಾಟಿನ ವಾರಾಂತ್ಯದಲ್ಲಿಯೂ ಕೂಡ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿತಗೊಂಡಿದೆ.
Published: 10th June 2022 08:30 PM | Last Updated: 10th June 2022 08:30 PM | A+A A-

ಸಾಂದರ್ಭಿಕ ಚಿತ್ರ
ಮುಂಬೈ: ಭಾರತೀಯ ಷೇರುಮಾರುಕಟ್ಟೆಯಲ್ಲಿ ಹಣದುಬ್ಬರ ಭೀತಿ ಮುಂದುವರೆದಿದ್ದು, ವಹಿವಾಟಿನ ವಾರಾಂತ್ಯದಲ್ಲಿಯೂ ಕೂಡ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿತಗೊಂಡಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಳವಾದ ಪರಿಣಾಮವಾಗಿ, ಹಣದುಬ್ಬರ ಇನ್ನಷ್ಟು ಜಾಸ್ತಿ ಆಗುವ ಭೀತಿ ಎದುರಾಗಿದೆ. ಇದರಿಂದಾಗಿ ಹೂಡಿಕೆದಾರರು ಸುರಕ್ಷಿತ ಹೂಡಿಕೆ ಆಯ್ಕೆಗಳತ್ತ ಮುಖ ಮಾಡಿದ್ದು, ಇದು ಭಾರತೀಯ ಷೇರುಮಾರುಕಟ್ಟೆ ಕುಸಿತಕ್ಕೆ ಕಾರಣವಾಗುತ್ತಿದೆ. ಇಂದಿನ ವಹಿವಾಟು ಮುಕ್ತಾಯದ ಹೊತ್ತಿಗೆ ಸೆನ್ಸೆಕ್ಸ್ ಶೇ.1.84ರಷ್ಟು ಅಂದರೆ 1,016.84 ಅಂಶಗಳ ಕುಸಿತ ಕಂಡಿದೆ. ಅಂತೆಯೇ ನಿಫ್ಟಿ ಕೂಡ ಶೇ.1.68ರಷ್ಟು ಅಂದರೆ 276.30 ಅಂಶಗಳ ಕುಸಿತ ಕಂಡಿದೆ.
ಇದನ್ನೂ ಓದಿ: ರೂಪಾಯಿ ಮೌಲ್ಯ ದಾಖಲೆ ಮಟ್ಟಕ್ಕೆ ಕುಸಿತ; ಡಾಲರ್ ಎದುರು 77.81 ರೂ. ಗೆ ಇಳಿಕೆ!
ವಿದೇಶಿ ಬಂಡವಾಳ ಹೂಡಿಕೆದಾರರು ಬಂಡವಾಳ ಹಿಂತೆಗೆತ ಮುಂದುವರಿಸಿರುವುದು ಹಾಗೂ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ಇನ್ನಷ್ಟು ಕುಸಿದಿರುವುದು ಕೂಡ ಸೂಚ್ಯಂಕಗಳ ಇಳಿಕೆಗೆ ಕಾರಣವಾಗಿವೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರದ ವಹಿವಾಟಿನಲ್ಲಿ ಹೂಡಿಕೆದಾರರು ಒಟ್ಟು 3.11 ಲಕ್ಷ ಕೋಟಿ ನಷ್ಟವಾಗಿದ್ದು, ಬಿಎಸ್ಇಯಲ್ಲಿ ನೋಂದಾಯಿತ ಆಗಿರುವ ಕಂಪನಿಗಳ ಬಂಡವಾಳ ಮೌಲ್ಯವು ಇಳಿದಿದೆ. ಅಂತೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಶೇ 0.45ರಷ್ಟು ಜಾಸ್ತಿಯಾಗಿ ಪ್ರತಿ ಬ್ಯಾರೆಲ್ಗೆ 123.62 ಡಾಲರ್ಗೆ ತಲುಪಿದೆ.
ಇದನ್ನೂ ಓದಿ: ಆರ್ ಬಿಐ ವಿತ್ತೀಯ ನೀತಿ ಪ್ರಕಟ: ರೆಪೊ ದರ 50 ಬೇಸಿಸ್ ಪಾಯಿಂಟ್ ಹೆಚ್ಚಿಸಿ ಶೇ. 4.90ಕ್ಕೆ ಏರಿಕೆ
ಆರ್ಬಿಐ ರೆಪೊ ದರ ಜಾಸ್ತಿ ಮಾಡಿರುವುದು ಹಾಗೂ ವಿದೇಶಿ ಹೂಡಿಕೆದಾರರು ಹಣ ಹಿಂದಕ್ಕೆ ಪಡೆಯುತ್ತಿರುವುದು ಮುಂದಿನ ವಾರಗಳಲ್ಲಿ ಷೇರು ಮಾರುಕಟ್ಟೆಗಳ ಮೇಲೆ ನಕಾರಾತ್ಮಕ ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.