ಬೆಲೆ ಏರಿಕೆ ಭೀತಿ: ಪೆಟ್ರೊಲ್, ಡೀಸೆಲ್ ದಾಖಲೆ ಮಾರಾಟ, ಕೋವಿಡ್ ಪೂರ್ವ ಮಟ್ಟ ಮೀರಿಸಿದೆ!
ಪಂಚ ರಾಜ್ಯಗಳ ಫಲಿತಾಂಶದ ಬಳಿಕ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗಲಿಲ್ಲ. ಆದರೆ ಹೆಚ್ಚಳದ ಭೀತಿಯಿಂದಾಗಿ ಜನರು ತಮ್ಮ ವಾಹನಗಳ ಟ್ಯಾಂಕ್ಗಳನ್ನು ತುಂಬಿಸಿಕೊಳ್ಳುತ್ತಿದ್ದು ಇದು ತೈಲ ಖರೀದಿಯಲ್ಲಿ ದಾಖಲೆ ಬರೆದಿದೆ.
Published: 16th March 2022 08:00 PM | Last Updated: 16th March 2022 08:08 PM | A+A A-

ಸಂಗ್ರಹ ಚಿತ್ರ
ನವದೆಹಲಿ: ಪಂಚ ರಾಜ್ಯಗಳ ಫಲಿತಾಂಶದ ಬಳಿಕ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗಲಿಲ್ಲ. ಆದರೆ ಹೆಚ್ಚಳದ ಭೀತಿಯಿಂದಾಗಿ ಜನರು ತಮ್ಮ ವಾಹನಗಳ ಟ್ಯಾಂಕ್ಗಳನ್ನು ತುಂಬಿಸಿಕೊಳ್ಳುತ್ತಿದ್ದು ಇದು ತೈಲ ಖರೀದಿಯಲ್ಲಿ ದಾಖಲೆ ಬರೆದಿದೆ.
ಜನರು ತಮ್ಮ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ತುಂಬಿಸಿಕೊಳ್ಳುವುದರ ಜೊತೆಗೆ ಮನೆಯಲ್ಲೂ ಶೇಖರಿಸಿಟ್ಟಿದ್ದರ ಪರಿಣಾಮ ಕೊರೋನಾ ಪೂರ್ವ ಮಟ್ಟದ ನಂತರ ಇದೀಗ ಮಾರ್ಚ್ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಖರೀದಿಯಲ್ಲಿ ಭಾರಿ ಏರಿಕೆಯಾಗಿದೆ.
ಮಾರುಕಟ್ಟೆಯ ಶೇಕಡ 90ರಷ್ಟು ಪ್ರತಿಶತವನ್ನು ನಿಯಂತ್ರಿಸುವ ಸರ್ಕಾರಿ ಇಂಧನ ಚಿಲ್ಲರೆ ವ್ಯಾಪಾರಿಗಳ ಪೆಟ್ರೋಲ್ ಮಾರಾಟವು ಮಾರ್ಚ್ 1-15ರ ಅವಧಿಯಲ್ಲಿ 1.23 ಮಿಲಿಯನ್ ಟನ್ ನಷ್ಟಾಗಿದ್ದು, ಇದು ಕಳೆದ ವರ್ಷದ ಅನುಗುಣದ ಅವಧಿಗಿಂತ ಶೇಕಡ 18ರಷ್ಟು ಹೆಚ್ಚಾಗಿದೆ. ಅಲ್ಲದೆ 2019ರ ಅವಧಿಗಿಂತ ಶೇಕಡ 24.4ರಷ್ಟು ಹೆಚ್ಚಾಗಿದೆ.
ದೇಶದಲ್ಲಿ ಹೆಚ್ಚಾಗಿ ಬಳಸುವ ಇಂಧನವಾಗಿರುವ ಡೀಸೆಲ್ ಮಾರಾಟವು ವರ್ಷದಿಂದ ವರ್ಷಕ್ಕೆ ಶೇಕಡಾ 23.7ರಷ್ಟು ಜಿಗಿದು 3.53 ಮಿಲಿಯನ್ ಟನ್ಗಳಿಗೆ ತಲುಪಿದೆ. ಇದು 2019ರ ಮಾರ್ಚ್ 1-15ರ ಮಾರಾಟಕ್ಕಿಂತ 17.3 ಶೇಕಡಾ ಹೆಚ್ಚಾಗಿದೆ.
2020ರ ಮಾರ್ಚ್ 1 ರಿಂದ 15ರ ಅವಧಿಗೆ ಹೋಲಿಸಿದರೆ ಪೆಟ್ರೋಲ್ ಮಾರಾಟವು ಶೇಕಡಾ 24.3 ರಷ್ಟು ಹೆಚ್ಚಿದ್ದರೆ, ಅದೇ ಅವಧಿಯಲ್ಲಿ ಡೀಸೆಲ್ ಮಾರಾಟವು ಶೇಕಡಾ 33.5 ರಷ್ಟು ಹೆಚ್ಚಾಗಿದೆ. ತಿಂಗಳಿನಿಂದ ತಿಂಗಳಿಗೆ ಪೆಟ್ರೋಲ್ ಮಾರಾಟದಲ್ಲಿ ಶೇ.18.8ರಷ್ಟು ಮತ್ತು ಡೀಸೆಲ್ ಮಾರಾಟದಲ್ಲಿ ಶೇ.32.8ರಷ್ಟು ಏರಿಕೆಯಾಗಿದೆ.
2021ರ ನವೆಂಬರ್ ಆರಂಭದಲ್ಲಿ ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಕಡಿಮೆ ಮಾಡಲಾಗಿತ್ತು. ಬರೋಬ್ಬರಿ 132 ದಿನಗಳವರೆಗೆ ಬೆಲೆಯಲ್ಲಿ ಏರಿಕೆಯಾಗಿರಲಿಲ್ಲ. ಆದರೆ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಿಂದಾಗಿ ಕಚ್ಚಾ ವಸ್ತುಗಳ ಬೆಲೆ ಬ್ಯಾರೆಲ್ಗೆ 81 ಡಾಲರ್ ಇದ್ದದ್ದು ಇದೀಗ 130 ಡಾಲರ್ ಗೆ ಏರಿಕೆಯಾಗಿದೆ.