ಅಸ್ತಿತ್ವ ಉಳಿಸಿಕೊಳ್ಳಲು ಉದ್ಯಮಿಗಳಿಗೆ ಬೇಕಾಗಿದೆ ಹೈ ಡೆನ್ಸಿಟಿ ಪ್ಲಾಸ್ಟಿಕ್: ಏನಿದು? ಇಲ್ಲಿದೆ ವಿವರ
ಭಾರತದ ಮಾರುಕಟ್ಟೆಯಲ್ಲಿ ಸದ್ಯ ಸ್ಥಿರ ಬೆಳವಣಿಗೆಯನ್ನು ಕಾಣುತ್ತಿರುವ ಒಂದು ಉತ್ಪನ್ನ ಹೈ ಡೆನ್ಸಿಟಿ ಪಾಲಿಥೀನ್ (ಹೆಚ್ಚು ಸಾಂದ್ರತೆಯ ಪ್ಲಾಸ್ಟಿಕ್). ಸಾಮಾನ್ಯವಾಗಿ ಇದನ್ನು ‘ಎಚ್ಡಿಪಿಇ’ ಎಂದು ಕರೆಯುತ್ತಾರೆ.
Published: 17th May 2022 03:29 PM | Last Updated: 17th May 2022 03:29 PM | A+A A-

ಎಚ್ಡಿಪಿಇ ಪ್ಲಾಸ್ಟಿಕ್ ಬಳಸಿರುವ ಚಿತ್ರ
- ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
ಭಾರತದ ಮಾರುಕಟ್ಟೆಯಲ್ಲಿ ಸದ್ಯ ಸ್ಥಿರ ಬೆಳವಣಿಗೆಯನ್ನು ಕಾಣುತ್ತಿರುವ ಒಂದು ಉತ್ಪನ್ನ ಹೈ ಡೆನ್ಸಿಟಿ ಪಾಲಿಥೀನ್ (ಹೆಚ್ಚು ಸಾಂದ್ರತೆಯ ಪ್ಲಾಸ್ಟಿಕ್). ಸಾಮಾನ್ಯವಾಗಿ ಇದನ್ನು ‘ಎಚ್ಡಿಪಿಇ’ ಎಂದು ಕರೆಯುತ್ತಾರೆ. ‘ಪ್ರತಿಯೊಂದು ಹನಿಗೂ ಹೆಚ್ಚು ಬೆಳೆ’ ಎಂಬ ಧ್ಯೇಯದೊಂದಿಗೆ 2015 ರಲ್ಲಿ ಆರಂಭವಾದ ‘ಪ್ರಧಾನಮಂತ್ರಿ ಕೃಷಿ ಸಿಂಚಾಯಿ’ ಯೋಜನೆ ಉತ್ಕೃಷ್ಟ ಗುಣಮಟ್ಟದ ನೀರಿನ ಪೈಪ್ ಬೇಡಿಕೆಯನ್ನು ಹೆಚ್ಚಿಸಿತು. ನೀರು ಪೂರೈಕೆಯಲ್ಲಿನ ಬಳಕೆ ಗುಣಮಟ್ಟದ ಪೈಪ್ನ ಬೇಡಿಕೆ ಹೆಚ್ಚಳಕ್ಕೆ ಕಾರಣ ಎಂದು ಭಾರತೀಯ ರೈಲ್ವೆ ಕೂಡ ಹೆಳಿದೆ.
ಕೈಗಾರಿಕೆ ಮತ್ತು ಗೃಹ ಬಳಕೆಗೂ ಗುಣಮಟ್ಟದ ಪೈಪ್ ಬೇಡಿಕೆ ಇದೆ. ಕಂಟೇನರ್, ವಯರ್ ಅಥವಾ ಕೇಬಲ್ ತಯಾರಿಯಲ್ಲಿ ದೀರ್ಘ ಕಾಲ ಬಾಳಿಕೆ ಬರುವ ಪೈಪ್ಗಳಿಗೆ ಬೇಡಿಕೆ ಇದ್ದೇ ಇದೆ. ಭಾರತೀಯರು ಎಲ್ಲ ಕ್ಷೇತ್ರಗಳಲ್ಲಿಯೂ ಉತ್ತಮ ಗುಣಮಟ್ಟದ ವಸ್ತುಗಳನ್ನು ಬಯಸುತ್ತಾರೆ. ಅದೇ ರೀತಿ ದಿನನಿತ್ಯದ ಬಳಕೆಗೂ ಗುಣಮಟ್ಟದ ವಸ್ತುಗಳನ್ನು ಬಯಸುತ್ತಾರೆ.
ಮಾರುಕಟ್ಟೆ ಸಮೀಕ್ಷೆಯೊಂದರ ಪ್ರಕಾರ, 2021ರಲ್ಲಿ ಎಚ್ಡಿಪಿಇ ಮಾರುಕಟ್ಟೆ ಬೇಡಿಕೆ 2.57 ದಶಲಕ್ಷ ಟನ್ ಇದ್ದರೆ, 2030ರಲ್ಲಿ ಇದು 4.43 ದಶಲಕ್ಷ ಟನ್ ತಲುಪಬಹುದು ಎಂದು ಅಂದಾಜಿಸಲಾಗಿದೆ. ‘ಅಲೈಡ್ ಮಾರ್ಕೆಟ್ ರಿಸರ್ಚ್’ ವರದಿಯ ಪ್ರಕಾರ, 2026ರ ವೇಳೆಗೆ ಆಪ್ಟಿಕ್ ಕೇಬಲ್ ಸೇರಿದಂತೆ ಎಲ್ಲ ರೀತಿಯ ಫೈಬರ್ ಮೂಲಸೌಕರ್ಯಗಳಿಗೆ ಎಚ್ಡಿಪಿಇ ಪೈಪ್ ಮಾರಾಟದಿಂದ 233.5 ದಶಲಕ್ಷ ಡಾಲರ್ ಆದಾಯ ನಿರೀಕ್ಷಿಸಲಾಗಿದೆ. 2019-2026 ಅವಧಿಯಲ್ಲಿ ಮಾರುಕಟ್ಟೆಯು 11.26 ಶೇಕಡಾ ಸಿಎಜಿಆರ್ (ಸಂಯುಕ್ತ ವಾರ್ಷಿಕ ಬೆಳವಣಿಗೆ ದರ ಅಥವಾ ಕಾಂಪೌಂಡ್ ಆನುವಲ್ ಗ್ರೋಥ್ ರೇಟ್) ದಾಖಲಿಸಬಹುದು ಎಂದು ಅಂದಾಜಿಸಲಾಗಿದೆ.
ಹೆಚ್ಚು ಸಾಂದ್ರತೆಯ ಪಾಲಿಥೀನ್ ಪೈಪುಗಳು ಕೃಷಿ ಕ್ಷೇತ್ರಕ್ಕೆ ಹೆಚ್ಚು ಅಗತ್ಯವಾಗಿರುವುದರಿಂದ ಬೇಡಿಕೆಯು ನಿರೀಕ್ಷೆಯನ್ನೂ ಮೀರಿದೆ. ಕೃಷಿಗೆ ನೀರಾವರಿ, ಚರಂಡಿ ಅಳವಡಿಕೆಗಾಗಿಯೂ ಬೇಗನೆ ನಾಶವಾಗದ ಈ ಪೈಪ್ಗಳನ್ನು ಬಳಸುತ್ತಿರುವುದು ಇದಕ್ಕೆ ಕಾರಣವಿರಬಹುದು. ಬಕೆಟ್, ಕಂಟೇನರ್ಗಳು, ಕೇಬಲ್ಗಳು, ವಯರ್, ಪ್ಯಾಕೇಜಿಂಗ್, ಪ್ಲಾಸ್ಟಿಕ್ ಬಾಟಲ್ಗಳ ಉತ್ಪಾದನೆ, ನೀರಿನ ಹೂಜಿಗಳು, ಬಾಟಲ್ಗಳು ಮತ್ತಿತರ ಸಾಧನಗಳ ತಯಾರಿಯಲ್ಲಿ ಇತ್ತೀಚೆಗೆ ಹೆಚ್ಚಾಗಿ ಎಚ್ಡಿಪಿಇ ಪ್ಲಾಸ್ಟಿಕ್ಗಳನ್ನೇ ಬಳಸಲಾಗುತ್ತಿದೆ. ಎಚ್ಡಿಪಿಇ ಶೀಟ್ಗಳು, ಮರೈನ್ ಬೋರ್ಡ್ಗಳು ಹಾಗೂ ರಾಡ್ಗಳೂ ಈಗ ಮಾರುಕಟ್ಟೆಯಲ್ಲಿ ದೊರೆಯುತ್ತಿವೆ.
ಪಾಲಿಥಿಲೀನ್, ಉನ್ನತ ಗುಣಮಟ್ಟದ ಪ್ಲಾಸ್ಟಿಕ್ ಹಾಗೂ ಎಚ್ಡಿಪಿಇ ಮಧ್ಯೆ ಇರುವ ವ್ಯತ್ಯಾಸವೇನೆಂಬುದು ಮುಖ್ಯ ಪ್ರಶ್ನೆಯಾಗಿದೆ. ಎಚ್ಡಿಪಿಇ ಎಂದರೆ ಪೆಟ್ರೋಲಿಯಂ ಹೈಡ್ರೋಕಾರ್ಬನ್ಸ್ನಿಂದ ಮಾಡಿರುವ ಸಿಂಥೆಟಿಕ್ ಥರ್ಮೋಪ್ಲಾಸ್ಟಿಕ್. ಇದನ್ನು ಬಹುಮುಖಿ ಪ್ಲಾಸ್ಟಿಕ್ ಎಂದು ಪರಿಗಣಿಸಲಾಗಿದೆ. ಅತಿಹೆಚ್ಚಿನ ಶಾಖದಲ್ಲಿ ಮಾತ್ರ ಇದು ಕರಗುತ್ತದೆ. ಇದನ್ನು ಕುದಿಸುವ ಮೂಲಕ ಕ್ರಿಮಿನಾಶಕ ಪ್ರಕ್ರಿಯೆಗೆ ಒಳಪಡಿಸಬಹುದು. ಹೀಗಾಗಿ ಆಹಾರ ಮತ್ತು ಪಾನೀಯ ವಲಯಗಳಲ್ಲಿಯೂ ಇದಕ್ಕೆ ಬೇಡಿಕೆ ಇದೆ. ಇದರಿಂದ ತಯಾರಿಸಿದ ವಸ್ತುವು ನೀರು, ದ್ರಾವಕಗಳು, ಆಮ್ಲಗಳು, ರಾಸಾಯನಿಕಗಳು, ಮಾರ್ಜಕಗಳು, ಶುದ್ಧೀಕರಣ ಆಮ್ಲಗಳು ಮತ್ತು ದ್ರವ ನಿರೋಧಕ ಗುಣ ಹೊಂದಿರುತ್ತದೆ. ಸುಲಭವಾಗಿ ಮರುಬಳಕೆಯನ್ನು ಮಾಡಬಹುದಾಗಿದೆ. ಇತರ ವಸ್ತುಗಳ ಜೊತೆ ಹೋಲಿಕೆ ಮಾಡಿದರೆ ತುಂಬಾ ಹಗುರವಾಗಿಯೂ ಇರುವುದರಿಂದ ಕೈಗಾರಿಕಾ ಬಳಕೆಗೆ ಇದು ಮೊದಲ ಆದ್ಯತೆಯಾಗಿದೆ.
ಭಾರತದಲ್ಲಿ ಟೆಲಿಕಮ್ಯುನಿಕೇಶನ್ಸ್, ಇಂಧನ, ತೈಲ, ಅನಿಲ, ಮೂಲಸೌಕರ್ಯ ಹಾಗೂ ಕಟ್ಟಡ ನಿರ್ಮಾಣ ಕ್ಷೇತ್ರಗಳ ಹೂಡಿಕೆಯಲ್ಲಿ ಗಣನೀಯ ಬೆಳವಣಿಗೆ ಕಂಡು ಬರುತ್ತಿದೆ. ಇದು ಸಹಜವಾಗಿಯೇ ಎಚ್ಡಿಪಿಇ ಪೈಪುಗಳ ಬೇಡಿಕೆ ಹೆಚ್ಚಳಕ್ಕೆ ಕಾರಣವಾಗಿದೆ. ಆದಾಗ್ಯೂ, ಎಚ್ಡಿಪಿಇ ಪೈಪುಗಳ ಉತ್ಪಾದನೆಯಲ್ಲಿ ಬಳಸುವ ಕಚ್ಚಾ ವಸ್ತುಗಳ ದರ ಹೆಚ್ಚಳವು ಸವಾಲಾಗಿ ಪರಿಣಮಿಸಿದೆ.
ಆಯ್ದ ಕೆಲವು ಕೈಗಾರಿಕೆಗಳು ಎಚ್ಡಿಪಿಇ ಪೈಪುಗಳ ತಯಾರಿಗೆ ಹೂಡಿಕೆ ಮಾಡಿವೆ. ಸಾಂಕ್ರಾಮಿಕ ಬಳಿಕ ಹೆಚ್ಚಿಸಿಕೊಂಡಿರುವ ಟೆಲಿಕಮ್ಯುನಿಕೇಶನ್ಸ್ ಕ್ಷೇತ್ರವನ್ನು ಗಮನದಲ್ಲಿರಿಸಿಕೊಂಡು ಹೂಡಿಕೆ ಮಾಡಲಾಗುತ್ತಿದೆ.
ಭಾರತದ ಪ್ಲಾಸ್ಟಿಕ್ ಮಾರುಕಟ್ಟೆ ಬೆಳವಣಿಗೆಯಾಗಿರುವುದರ ಜೊತೆಗೆ ಬಹುಮುಖಿ ಎಚ್ಡಿಪಿಇ ಬೇಡಿಕೆಯೂ ಹೆಚ್ಚಾಗಿದೆ. ಪ್ಲಾಸ್ಟಿಕ್ ಮತ್ತು ಬಯೋ ಪ್ಲಾಸ್ಟಿಕ್ಗಳ ಮರುಬಳಕೆಗೆ ಭಾರತಸರ್ಕಾರವೂ ಪ್ರೋತ್ಸಾಹ ನೀಡುತ್ತಿದೆ. ಬೆಳವಣಿಗೆ ಹೊಂದುತ್ತಿರುವ ಉದ್ಯಮಗಳ ಅವಶ್ಯಕತೆಗಳಿಗೆ ಪೂರಕವಾಗಿರುವುದರಿಂದ ಎಚ್ಡಿಪಿಇ ಬೇಡಿಕೆಯೂ ಹೆಚ್ಚಾಗುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಯಸುತ್ತಿರುವ ಮತ್ತೊಂದು ಕ್ಷೇತ್ರ ಏರೋಸ್ಪೇಸ್. ಲಘು ವಿಮಾನಗಳ ಬೇಡಿಕೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಅತ್ಯುತ್ತಮ ಗುಣಮಟ್ಟದ ವಿಮಾನ ತಯಾರಿಗಾಗಿ ಲೋಹಕ್ಕಿಂತಲೂ ಇದೀಗ ಉತ್ಕೃಷ್ಟ ದರ್ಜೆಯ ಪ್ಲಾಸ್ಟಿಕ್ ಉಪಕರಣಗಳನ್ನು ಬಳಸಲಾಗುತ್ತಿದೆ. ಆಟೋಮೋಟಿವ್ ಉದ್ಯಮ ಕೂಡ ವಾಹನಗಳ ತಯಾರಿಯಲ್ಲಿ ಪ್ಲಾಸ್ಟಿಕ್, ಅದರಲ್ಲಿಯೂ ಎಚ್ಡಿಪಿಇ ಬಳಸುತ್ತಿದೆ.
ಭಾರತದಲ್ಲಿ ಈಗ ಸ್ಟಾರ್ಟಪ್ಗಳ (ನವೋದ್ಯಮ) ಯುಗ ಆರಂಭವಾಗಿದೆ. ಉತ್ಪಾದನಾ ಕ್ಷೇತ್ರದಲ್ಲಿ ಆವಿಷ್ಕಾರ ಮಾಡುವ ಉದ್ಯಮಗಳು ದೀರ್ಘಾವಧಿಯ ಬಾಳಿಕೆ ಹೊಂದಿರುವ, ಪರಿಸರಸ್ನೇಹಿ ಎಚ್ಡಿಪಿಇಗಳನ್ನೇ ಬಳಸುತ್ತಿವೆ ಎಂಬುದು ಗಮನಾರ್ಹ.
