
ಸಂಗ್ರಹ ಚಿತ್ರ
ನವದೆಹಲಿ: ತೀವ್ರ ಕುತೂಹಲ ಕೆರಳಿಸಿದ್ದ ಎಲ್ಐಸಿ ಐಪಿಒ ಷೇರುಮಾರುಕಟ್ಟೆಯಲ್ಲಿ ಲಿಸ್ಟ್ ಆದ ಬೆನ್ನಲ್ಲೇ ನಿರೀಕ್ಷೆ ಹುಸಿಗೊಳಿಸಿದೆ.
ಎಲ್ಐಸಿ ಷೇರುಗಳು ಮಾರುಕಟ್ಟೆಯಲ್ಲಿ ನಿರೀಕ್ಷಿತ ವಹಿವಾಟು ನಡೆಸುತ್ತಿಲ್ಲ. ಮಂಗಳವಾರದಂದು ಭಾರೀ ನಿರೀಕ್ಷೆಯೊಂದಿಗೆ ಷೇರು ಮಾರುಕಟ್ಟೆ ಪ್ರವೇಶಿಸಿದ್ದ ಎಲ್ಐಸಿ ಷೇರುಗಳು, ನಿರೀಕ್ಷೆ ಉಳಿಸಿಕೊಳ್ಳುವಲ್ಲಿ ವಿಫಲವಾಗಿವೆ. ಮಾರುಕಟ್ಟೆಗೆ ಪಾದಾರ್ಪಣೆ ಮಾಡಿದಾಗ ಇದ್ದ ದರದಿಂದ ಶೇ. 7.75 ರಷ್ಟು ದರವನ್ನು ಷೇರುಗಳು ಕಳೆದುಕೊಂಡಿವೆ. ಷೇರು ಮಾರುಕಟ್ಟೆ ಪ್ರವೇಶಿಸಿದ ಮೊದಲ ದಿನವೇ ಕುಸಿತ ಕಂಡಿದ್ದ ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಷೇರುಗಳು ಗುರುವಾರ ಮತ್ತೆ ಸುಮಾರು ಶೇ. 4ರಷ್ಟು ಕುಸಿತ ಕಂಡಿವೆ. ಇದರೊಂದಿಗೆ ಮಂಗಳವಾರವೇ ಹೂಡಿಕೆದಾರರಿಗೆ ನಷ್ಟ ಉಂಟು ಮಾಡಿದ್ದ ಷೇರುಗಳು, ಗುರುವಾರ ನಷ್ಟದ ಪ್ರಮಾಣ ಹೆಚ್ಚಿಸಿವೆ.
ಇದನ್ನೂ ಓದಿ: ಅಯ್ಯೋ.. ಲಿಸ್ಟಿಂಗ್ ದಿನವೇ ಎಲೈಸಿ ಕುಸಿತ ಕಂಡಿತು ಎಂದು ಹಲುಬುವ ಮುನ್ನ... (ಹಣಕ್ಲಾಸು)
ದೈತ್ಯ ವಿಮಾ ಸಂಸ್ಥೆಯ ಷೇರುಗಳು ನಿನ್ನೆ (ಬುಧವಾರ) ಹೆಚ್ಚಿನ ಇಳಿಕೆ ಇಲ್ಲದೇ 875.45 ರೂ.ನಲ್ಲಿ ವಹಿವಾಟು ಕೊನೆಗೊಳಿಸಿದ್ದವು. ಈ ಮೂಲಕ ವಿತರಣೆ ಬೆಲೆಗಿಂತ ಸುಮಾರು ಶೇ. 7.75ರಷ್ಟು ಕಡಿಮೆ ಮಟ್ಟದಲ್ಲಿದ್ದವು. ಇದೀಗ ಎಲ್ಐಸಿಯ ಷೇರುಗಳು ಗುರುವಾರ ಮತ್ತೆ ಶೇ. 4.12ರಷ್ಟು ಕುಸಿತ ಕಂಡಿದ್ದು 840 ರೂ.ಗೆ ಇಳಿಕೆಯಾಗಿವೆ. ಇದರೊಂದಿಗೆ ಷೇರಿನ ಹಂಚಿಕೆ ಬೆಲೆ (949 ರೂ.) ಯಿಂದ 109 ರೂ. ಕುಸಿತ ಕಂಡಿದೆ. ಭಾರತದ ಅತಿದೊಡ್ಡ ಐಪಿಒ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದ ಸರ್ಕಾರಿ ಸ್ವಾಮ್ಯದ ವಿಮಾ ದೈತ್ಯ ಎಲ್ಐಸಿ ಮಂಗಳವಾರ ಷೇರು ವಿನಿಮಯ ಕೇಂದ್ರಗಳಲ್ಲಿ ಶೇ. 8 ರಷ್ಟು ರಿಯಾಯಿತಿ ದರದಲ್ಲಿ ತನ್ನ ಷೇರುಗಳನ್ನು ಪಟ್ಟಿ ಮಾಡಿತ್ತು. ಇದಾದ ಬಳಿಕವೂ ಕುಸಿತ ನಿಂತಿಲ್ಲ. ಐಪಿಒದಲ್ಲಿ ಎಲ್ಐಸಿಯು ತಲಾ 949 ರೂ.ನಂತೆ ಷೇರುಗಳನ್ನು ಮಾರಾಟ ಮಾಡಿತ್ತು. ಇದರಿಂದ ಕೇಂದ್ರ ಸರಕಾರಕ್ಕೆ 20,557 ಕೋಟಿ ರೂ.ಗಳನ್ನು ಸಂಗ್ರಹಿಸಲು ಸಾಧ್ಯವಾಗಿತ್ತು.
ಇದನ್ನೂ ಓದಿ: ಕರಾಳ ಗುರುವಾರ: ತಲ್ಲಣಿಸಿದ ಷೇರುಮಾರುಕಟ್ಟೆ, ಹೂಡಿಕೆದಾರರ 7 ಲಕ್ಷ ಕೋಟಿ ರೂ ನಷ್ಟ
ಆದರೆ ರಿಯಾಯಿತಿ ದರದಲ್ಲಿ ಲಿಸ್ಟಿಂಗ್, ಇತ್ತೀಚಿನ ವಹಿವಾಟುಗಳಲ್ಲಿನ ನಷ್ಟದಿಂದಾಗಿ ದೇಶದ ಅತಿದೊಡ್ಡ ವಿಮಾ ಕಂಪನಿಯ ಮಾರುಕಟ್ಟೆ ಬಂಡವಾಳದಲ್ಲಿ ತೀವ್ರ ಕುಸಿತ ಉಂಟಾಗಿದೆ. 949 ರೂ. ನಂತಹ ಷೇರು ವಿತರಣೆ ಮಾಡಿದಾಗ ಎಲ್ಐಸಿಯ ಮಾರುಕಟ್ಟೆ ಮೌಲ್ಯ 6,00,242 ಕೋಟಿಗ ರೂ.ಗಳಷ್ಟಿತ್ತು. ಅಂತೆಯೇ ಗುರುವಾರದ ಅಂತ್ಯದ ವೇಳೆಗೆ ಎಲ್ಐಸಿಯ ಮಾರುಕಟ್ಟೆ ಮೌಲ್ಯ 5,31,932.31 ಕೋಟಿ ರೂ.ಗೆ ಕುಸಿದಿದೆ. ಇದರಿಂದ ಎಲ್ಐಸಿ ಷೇರುದಾರರಿಗೆ 68,100 ಕೋಟಿ ರೂ.ಗೂ ಅಧಿಕ ನಷ್ಟ ಉಂಟಾಗಿದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.