ಪ್ರಸಕ್ತ ಆರ್ಥಿಕ ವರ್ಷದಲ್ಲಿ 16.61 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹ, ಶೇ.18 ರಷ್ಟು ಏರಿಕೆ!
2022-23ನೇ ಆರ್ಥಿಕ ವರ್ಷದಲ್ಲಿ ನೇರ ತೆರಿಗೆ ಸಂಗ್ರಹದಲ್ಲಿ ಶೇ. 17.63 ರಷ್ಟು ಏರಿಕೆಯಾಗಿದ್ದು, ಸರ್ಕಾರದ ಒಟ್ಟಾರೇ ತೆರಿಗೆ ಸಂಗ್ರಹ ರೂ. 16.61 ಲಕ್ಷ ಕೋಟಿಗೆ ತಲುಪಿದೆ.
Published: 04th April 2023 02:16 PM | Last Updated: 04th April 2023 06:48 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: 2022-23ನೇ ಆರ್ಥಿಕ ವರ್ಷದಲ್ಲಿ ನೇರ ತೆರಿಗೆ ಸಂಗ್ರಹದಲ್ಲಿ ಶೇ. 17.63 ರಷ್ಟು ಏರಿಕೆಯಾಗಿದ್ದು, ಸರ್ಕಾರದ ಒಟ್ಟಾರೇ ತೆರಿಗೆ ಸಂಗ್ರಹ ರೂ. 16.61 ಲಕ್ಷ ಕೋಟಿಗೆ ತಲುಪಿದೆ. ಇದು ಸರ್ಕಾರದ ಪರಿಷ್ಕೃತ ಅಂದಾಜು ರೂ. 11,000 ಕೋಟಿಗಿಂತ ಹೆಚ್ಚಾಗಿದೆ. ಕೇಂದ್ರ ಸರ್ಕಾರ ಪ್ರಸಕ್ತ ಆರ್ಥಿಕ ವರ್ಷದ ನೇರ ತೆರಿಗೆ ಸಂಗ್ರಹವನ್ನು14.2 ಲಕ್ಷ ಕೋಟಿಯಿಂದ 16.5 ಲಕ್ಷ ಕೋಟಿಗೆ ಪರಿಷ್ಕರಿಸಿದೆ.
2022ರ ಆರ್ಥಿಕ ವರ್ಷದಲ್ಲಿ ಶೇ.20.33 ರಷ್ಟು ಬೆಳವಣಿಗೆಯೊಂದಿಗೆ ಒಟ್ಟು ತೆರಿಗೆ ಸಂಗ್ರಹ ಶೇ.16.36 ಕೋಟಿಯಷ್ಟಿತ್ತು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಒಟ್ಟು ತೆರಿಗೆ ಸಂಗ್ರಹ ರೂ. 19.68 ಲಕ್ಷ ಕೋಟಿಯಾಗಿದೆ. ಈ ಆರ್ಥಿಕ ವರ್ಷದಲ್ಲಿ 3.07 ಲಕ್ಷ ಕೋಟಿ ರೂಪಾಯಿ ಮರುಪಾವತಿ ನೀಡಲಾಗಿದೆ. ಇದು ಕಳೆದ ವರ್ಷ ನೀಡಲಾಗಿದ್ದ ಮರುಪಾವತಿಗಿಂತ (ರೂ. 2.23 ಲಕ್ಷ ಕೋಟಿ) ಶೇ. 37.42 ರಷ್ಟು ಹೆಚ್ಚಾಗಿದೆ.
ಒಟ್ಟು ಕಾರ್ಪೊರೇಟ್ ತೆರಿಗೆ ಸಂಗ್ರಹ ರೂ. 10.04 ಲಕ್ಷ ಕೋಟಿಯಷ್ಟಾಗಿದೆ. ಇದು ಕಳೆದ ವರ್ಷ ಸಂಗ್ರಹವಾಗಿದ್ದ ಒಟ್ಟು ರೂ. 8.6 ಲಕ್ಷ ಕೋಟಿ ಕಾರ್ಪೊರೇಟ್ ತೆರಿಗೆ ಸಂಗ್ರಹಕ್ಕಿಂತ ಶೇ. 16.91 ರಷ್ಟು ಹೆಚ್ಚಾಗಿದೆ. ಒಟ್ಟು ವೈಯಕ್ತಿಕ ಆದಾಯ ತೆರಿಗೆ ಸಂಗ್ರಹ (ಎಸ್‌ಟಿಟಿ ಸೇರಿದಂತೆ) 9.60 ಲಕ್ಷ ಕೋಟಿ ರೂಪಾಯಿ ಆಗಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.24.23ರಷ್ಟು ಬೆಳವಣಿಗೆಯಾಗಿದೆ.
ಇದನ್ನೂ ಓದಿ: ಮಾರ್ಚ್ ತಿಂಗಳಲ್ಲಿ 1.6 ಲಕ್ಷ ಕೋಟಿ ರೂ. ಜಿಎಸ್ ಟಿ ಸಂಗ್ರಹ: ಎರಡನೇ ಅತಿಹೆಚ್ಚು ಸಂಗ್ರಹಣೆ
ಸರಕು ಮತ್ತು ಸೇವಾ ತೆರಿಗೆಯಲ್ಲೂ (ಕೇಂದ್ರ ಮತ್ತು ರಾಜ್ಯ ಸರ್ಕಾರ) ಶೇ. 22 ರಷ್ಟು ತೀವ್ರಗತಿಯಲ್ಲಿ ಬೆಳವಣಿಗೆಯೊಂದಿಗೆ ರೂ. 18.1 ಲಕ್ಷ ಕೋಟಿ ಸಂಗ್ರಹವಾಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜಿಎಸ್ ಟಿಯಿಂದ ರೂ. 8.54 ಲಕ್ಷ ಕೋಟಿ ರೂಪಾಯಿ ಸಂಗ್ರಹವನ್ನು ಕೇಂದ್ರ ಸರ್ಕಾರ ನಿರೀಕ್ಷಿಸಿದೆ.