ಸೇವೆಯಲ್ಲಿ ಕೊರತೆ: ಏರ್ ಟೆಲ್ ಗೆ 1.55 ಲಕ್ಷ ರೂಪಾಯಿ ದಂಡ!

ಗ್ರಾಹಕರಿಗೆ ನೀಡುವ ಸೇವೆಯಲ್ಲಿ ಕೊರತೆ ಉಂಟಾಗಿದ್ದಕ್ಕೆ ದೂರಸಂಪರ್ಕ ಸಂಸ್ಥೆ ಏರ್ ಟೆಲ್ ಗೆ 1.55 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. 
ಏರ್ ಟೆಲ್
ಏರ್ ಟೆಲ್

ಬೆಂಗಳೂರು: ಗ್ರಾಹಕರಿಗೆ ನೀಡುವ ಸೇವೆಯಲ್ಲಿ ಕೊರತೆ ಉಂಟಾಗಿದ್ದಕ್ಕೆ ದೂರಸಂಪರ್ಕ ಸಂಸ್ಥೆ ಏರ್ ಟೆಲ್ ಗೆ 1.55 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಬೆಂಗಳೂರಿನ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಈ ಆದೇಶ ನೀಡಿದ್ದು, 5,000 ರೂಪಾಯಿ ದಾವೆ ವೆಚ್ಚಗಳನ್ನೂ ಏರ್ ಟೆಲ್ ಸಂಸ್ಥೆಯ ಹೆಗಲಿಗೆ ಹಾಕಿದೆ. 

ವಿಜಯನಗರ ನಿವಾಸಿಯಾಗಿರುವ ಕಿರುಚಿತ್ರ ನಿರ್ದೇಶಕ, ಸ್ಕ್ರಿಪ್ಟ್ ರೈಟರ್ ಹಾಗೂ ನಿರ್ದೇಶಕರಾಗಿರುವ ಸಿಂಹ ಎಂಬುವವರಿಗೆ ನೀಡಲಾಗಿದ್ದ ಸಿಮ್ ಕಾರ್ಡ್ ನ್ನು ಆಕ್ಟೀವ್ ಗೊಳಿಸದೇ ಸೇವೆಯಲ್ಲಿ ಕೊರತೆ ಉಂಟುಮಾಡಿರುವುದು ಹಾಗೂ ಅನ್ಯಾಯದ ವ್ಯಾಪಾರ ಮಾಡಿದ್ದಕ್ಕಾಗಿ ಏರ್ ಟೆಲ್ ಸಂಸ್ಥೆಗೆ ಈ ದಂಡ ವಿಧಿಸಲಾಗಿದೆ. ತಮಗೆ ಆದ ಸಮಸ್ಯೆಯ ಬಗ್ಗೆ ಸಂತ್ರಸ್ತ ವ್ಯಕ್ತಿ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದರು.

ಈ ಸಂಬಂಧ ನೊಟೀಸ್ ಜಾರಿಗೊಳಿಸಲಾಗಿತ್ತಾದರೂ ಏರ್ ಟೆಲ್ ಅದಕ್ಕೆ ಸ್ಪಂದಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಆಯೋಗ ಏರ್ ಟೆಲ್ ಸಂಸ್ಥೆಗೆ ದಂಡ ವಿಧಿಸಿದೆ. ದೂರು ನೀಡಿದ ವ್ಯಕ್ತಿ ವೊಡಾಫೋನ್ ಸಂಸ್ಥೆಯಿಂದ ಏರ್ ಟೆಲ್ ಗೆ ಸಿಮ್ ಪೋರ್ಟ್ ಮಾಡಿಕೊಳ್ಳಲು ಬಯಸಿದ್ದರು. ಏರ್ ಟೆಲ್ 3 ಬಾರಿ ಸಿಮ್ ನೀಡಿತ್ತಾದರೂ ಅದನ್ನು ಆಕ್ಟೀವ್ ಮಾಡುವಲ್ಲಿ ವಿಫಲವಾಗಿತ್ತು. 

ಪೋರ್ಟ್ ಪ್ರಕ್ರಿಯೆ 2018 ರ ಜ.22 ರಿಂದ 2018 ರ ಫೆ.18 ವರೆಗೆ ನಡೆದಿದೆ. ಈ ಅವಧಿಯಲ್ಲಿ ಸಂತ್ರಸ್ತ ವ್ಯಕ್ತಿಗೆ ಹೂಡಿಕೆದಾರರೊಂದಿಗೆ ಸಭೆಗಳು ವಿಫಲವಾಗಿ, ಅವರ ಜೀವನದಲ್ಲಿನ ಬಹುದೊಡ್ಡ ಅವಕಾಶಗಳನ್ನು ಕಳೆದುಕೊಂಡು ಆರ್ಥಿಕವಾಗಿಯೂ ನಷ್ಟ ಎದುರಿಸಿರುವ ಸಾಧ್ಯತೆಗಳಿವೆ ಎಂದು ಆಯೋಗ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com