ಆರ್ ಐಎಲ್ ನಿರ್ದೇಶಕರ ಮಂಡಳಿಗೆ ಇಶಾ, ಆಕಾಶ್, ಅನಂತ್ ಅಂಬಾನಿ ಸೇರ್ಪಡೆ!
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಉತ್ತರಾಧಿಕಾರ ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಯಾಗಿದ್ದು, ಇಶಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ಅವರನ್ನು ನಿರ್ದೇಶಕ ಮಂಡಳಿಗೆ ನೇಮಕ ಮಾಡುವುದಾಗಿ ದೇಶದ ಅತ್ಯಂತ ಶ್ರೀಮಂತ ಕಂಪನಿಯ ಅಧ್ಯಕ್ಷರು ಘೋಷಿಸಿದ್ದಾರೆ.
Published: 28th August 2023 07:06 PM | Last Updated: 28th August 2023 08:27 PM | A+A A-

ಮುಖೇಶ್ ಅಂಬಾನಿ ಕುಟುಂಬ
ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಉತ್ತರಾಧಿಕಾರ ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಯಾಗಿದ್ದು, ಇಶಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ಅವರನ್ನು ನಿರ್ದೇಶಕ ಮಂಡಳಿಗೆ ನೇಮಕ ಮಾಡುವುದಾಗಿ ದೇಶದ ಅತ್ಯಂತ ಶ್ರೀಮಂತ ಕಂಪನಿಯ ಅಧ್ಯಕ್ಷರು ಘೋಷಿಸಿದ್ದಾರೆ.
ಸೋಮವಾರ ಆರ್‌ಐಎಲ್‌ನ 46ನೇ ವಾರ್ಷಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖೇಶ್ ಅಂಬಾನಿ, ತಮ್ಮ ಪತ್ನಿ ನೀತಾ ಅಂಬಾನಿ ಮಂಡಳಿಗೆ ರಾಜೀನಾಮೆ ನೀಡಿದ್ದಾರೆ ಮತ್ತು ರಿಲಯನ್ಸ್ ಫೌಂಡೇಶನ್‌ನ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ಹೇಳಿದರು.
ತಮ್ಮ ಕುಟುಂಬದ ಮುಂದಿನ ತಲೆಮಾರು ಆದ ಇಶಾ, ಆಕಾಶ್ ಮತ್ತು ಅನಂತ್ ಅಂಬಾನಿ ಅವರನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ನಿರ್ದೇಶಕರ ಮಂಡಳಿಗೆ ಸೇರ್ಪಡೆಗೊಳಿಸಲು ಮಂಡಳಿ ಶಿಫಾರಸು ಮಾಡಿದೆ. ಅವರು ಸಮರ್ಪಣೆ, ಬದ್ಧತೆ ಮತ್ತು ಕಠಿಣ ಪರಿಶ್ರಮದ ಮೂಲಕ ಒಳ್ಳೆಯ ಹೆಸರು ಗಳಿಸುತ್ತಾರೆ ಎಂದು ಹೆಮ್ಮೆಯಿಂದ ಹೇಳಬಲ್ಲೆ. ಇತರ ನಿರ್ದೇಶಕರೊಂದಿಗೆ ಸೇರಿಕೊಂಡು, ಒಂದು ತಂಡವಾಗಿ ಕೆಲಸ ಮಾಡುತ್ತಾರೆ ಮತ್ತು ಸಮಗ್ರ ದೃಷ್ಟಿಕೋನದಿಂದ ನಮ್ಮ ಎಲ್ಲಾ ವೈವಿಧ್ಯಮಯ ವ್ಯವಹಾರಗಳ ಬೆಳವಣಿಗೆಗೆ ಮಾರ್ಗದರ್ಶನ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸೆಪ್ಟೆಂಬರ್ 19ರಂದು ಜಿಯೋ ಏರ್ ಫೈಬರ್ ಬಿಡುಗಡೆ: ಮುಖೇಶ್ ಅಂಬಾನಿ
ಈ ಮೂವರು ಇಲ್ಲಿಯವರೆಗೆ ಕಾರ್ಯಾಚರಣೆಯ ವ್ಯವಹಾರ ಮಟ್ಟದಲ್ಲಿ ಮಾತ್ರ ತೊಡಗಿಸಿಕೊಂಡಿದ್ದರು ಮತ್ತು ಯಾರೂ ಮಂಡಳಿಯಲ್ಲಿ ಇರಲಿಲ್ಲ. ಷೇರುದಾರರ ಅನುಮೋದನೆಯ ನಂತರ ಅವರು ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಅವರ ನೇಮಕಾತಿಯು ಜಾರಿಗೆ ಬರಲಿದೆ. ಈ ಮಧ್ಯೆ ಮುಕೇಶ್ ಅಂಬಾನಿ ಇನ್ನೂ ಐದು ವರ್ಷಗಳ ಕಾಲ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಲಿದ್ದಾರೆ.
“ಇದು ನಿಜವಾಗಿಯೂ ನನಗೆ ಭಾವನಾತ್ಮಕ ಕ್ಷಣವಾಗಿದೆ ಏಕೆಂದರೆ ಇದು 1977 ರಲ್ಲಿ ನನ್ನ ತಂದೆ ನನ್ನನ್ನು ರಿಲಯನ್ಸ್‌ನ ನಿರ್ದೇಶಕರ ಮಂಡಳಿಗೆ ಸೇರಿಸಿಕೊಂಡ ಆ ದಿನವನ್ನು ನೆನಪಿಸುತ್ತದೆ. ಆಗ ನನಗೆ ಕೇವಲ 20 ವರ್ಷ. ಇಂದು ನಾನು ನನ್ನ ತಂದೆ ಮತ್ತು ನನ್ನನ್ನು ಇಶಾ, ಆಕಾಶ್ ಮತ್ತು ಅನಂತ್ ಅವರಲ್ಲಿ ನೋಡುತ್ತೇನೆ. ಅವರೆಲ್ಲರಲ್ಲೂ ಧೀರೂಭಾಯಿಯವರ ಜ್ಯೋತಿ ಬೆಳಗುವುದನ್ನು ನಾನು ನೋಡುತ್ತೇನೆ. ಧೀರೂಭಾಯಿ ಅಂಬಾನಿಯವರ ಉದ್ದೇಶ, ತತ್ವಶಾಸ್ತ್ರ, ಉತ್ಸಾಹ ಮತ್ತು ಪ್ರವರ್ತಕ ಉತ್ಸಾಹವನ್ನು ಸಂರಕ್ಷಿಸಲು ಮತ್ತು ಮತ್ತಷ್ಟು ಶ್ರೀಮಂತಗೊಳಿಸಲು ಅವರು ಸಂಪೂರ್ಣವಾಗಿ ಬದ್ಧರಾಗಿದ್ದಾರೆ ಎಂದು ಮುಖೇಶ್ ಅಂಬಾನಿ ಹೇಳಿದರು.