ಎನ್ಎಸ್ಇ ಫೋನ್ ಕದ್ದಾಲಿಕೆ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಚಿತ್ರಾ ರಾಮಕೃಷ್ಣಗೆ ಜಾಮೀನು
ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (ಎನ್‌ಎಸ್‌ಇ) ಉದ್ಯೋಗಿಗಳ ಅಕ್ರಮ ಫೋನ್ ಕದ್ದಾಲಿಕೆ ಆರೋಪಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಗುರುವಾರ ಚಿತ್ರಾ ರಾಮಕೃಷ್ಣ ಅವರಿಗೆ ಜಾಮೀನು ಮಂಜೂರು ಮಾಡಿದೆ.
Published: 09th February 2023 11:15 AM | Last Updated: 09th February 2023 11:15 AM | A+A A-

ಎನ್ ಎಸ್ ಇ ಮಾಜಿ ಎಂಡಿ ಚಿತ್ರಾ ರಾಮಕೃಷ್ಣ
ನವದೆಹಲಿ: ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (ಎನ್‌ಎಸ್‌ಇ) ಉದ್ಯೋಗಿಗಳ ಅಕ್ರಮ ಫೋನ್ ಕದ್ದಾಲಿಕೆ ಆರೋಪಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಗುರುವಾರ ಚಿತ್ರಾ ರಾಮಕೃಷ್ಣ ಅವರಿಗೆ ಜಾಮೀನು ಮಂಜೂರು ಮಾಡಿದೆ.
ಅವರು ಸಲ್ಲಿಸಿದ್ದ ಅರ್ಜಿಯನ್ನು ಅನುಮತಿಸಲಾಗಿದೆ. ಅರ್ಜಿದಾರರಿಗೆ ಜಾಮೀನು ನೀಡಲಾಗಿದೆ ಎಂದು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಹೇಳಿದರು.
ಎನ್‌ಎಸ್‌ಇ ಸಹ-ಸ್ಥಳ ಹಗರಣದಲ್ಲಿ ಸಿಬಿಐನಿಂದ ಈ ಹಿಂದೆ ಬಂಧಿಸಲ್ಪಟ್ಟಿದ್ದ ಮಾಜಿ ಎನ್‌ಎಸ್‌ಇ ವ್ಯವಸ್ಥಾಪಕ ನಿರ್ದೇಶಕಿಯನ್ನು ಪ್ರಸ್ತುತ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಕಳೆದ ವರ್ಷ ಜುಲೈ 14 ರಂದು ಬಂಧಿಸಿತ್ತು. ಸಿಬಿಐ ಪ್ರಕರಣದಲ್ಲಿ ಆಕೆಗೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಹೈಕೋರ್ಟ್ ಜಾಮೀನು ನೀಡಿತ್ತು.
ಈ ಪಿತೂರಿಯ ಹಿಂದಿನ ಸೂತ್ರಧಾರಿ ಎಂಬ ಕಾರಣಕ್ಕೆ ಜಾರಿ ನಿರ್ದೇಶನಾಲಯ (ಇಡಿ) ಸದ್ಯದ ಪ್ರಕರಣದಲ್ಲಿ ಆಕೆಯ ಜಾಮೀನು ಅರ್ಜಿಯನ್ನು ವಿರೋಧಿಸಿತ್ತು.
ಇಡಿ ಪ್ರಕಾರ, ಫೋನ್ ಕದ್ದಾಲಿಕೆ ಪ್ರಕರಣವು 2009 ರಿಂದ 2017ರ ಅವಧಿಗೆ ಸಂಬಂಧಿಸಿದೆ. ಮಾಜಿ ಎನ್ಎಸ್ಇ ಸಿಇಒ ರವಿ ನಾರಾಯಮ್, ಚಿತ್ರಾ ರಾಮಕೃಷ್ಣ, ಕಾರ್ಯನಿರ್ವಾಹಕ ಉಪಾಧ್ಯಕ್ಷ ರವಿ ವಾರಣಾಸಿ ಮತ್ತು ಮುಖ್ಯಸ್ಥ (ಆವರಣ) ಮಹೇಶ್ ಹಲ್ದಿಪುರ್ ಮತ್ತು ಇತರರು ಎನ್‌ಎಸ್‌ಇ ಹಾಗೂ ಅದರ ಉದ್ಯೋಗಿಗಳನ್ನು ವಂಚಿಸಲು ಸಂಚು ರೂಪಿಸಿದ್ದರು. ಎನ್‌ಎಸ್‌ಇಯ ಸೈಬರ್ ದೋಷಗಳ ಆವರ್ತಕ ಅಧ್ಯಯನ ಮಾಡುವ ನೆಪದಲ್ಲಿ ಎನ್‌ಎಸ್‌ಇ ಉದ್ಯೋಗಿಗಳ ಫೋನ್ ಕರೆಗಳನ್ನು ಅಕ್ರಮವಾಗಿ ಕದ್ದಾಲಿಸುವಲ್ಲಿ ಐಎಸ್ಇಸಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ತೊಡಗಿಸಿಕೊಂಡಿದೆ.
ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಕೇಸು: ಎನ್ಎಸ್ ಇ ಮಾಜಿ ಸಿಇಒ ಚಿತ್ರಾ ರಾಮಕೃಷ್ಣ ಜಾಮೀನು ಅರ್ಜಿ ವಜಾ
ಜಾಮೀನು ಕೋರಿ ಚಿತ್ರಾ ರಾಮಕೃಷ್ಣ ಅವರು, ತಮ್ಮ ವಿರುದ್ಧ ಯಾವುದೇ ನಿಗದಿತ ಅಪರಾಧವನ್ನು ಮಾಡಲಾಗಿಲ್ಲ ಮತ್ತು ಆರೋಪಗಳು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ವ್ಯಾಪ್ತಿಯೊಳಗೆ ಬರುವುದಿಲ್ಲ ಎಂದು ವಾದಿಸಿದ್ದರು.
ಚಿತ್ರ ರಾಮಕೃಷ್ಣ ಅವರು 2009 ರಲ್ಲಿ ಎನ್ಎಸ್ಇಯಲ್ಲಿ ಜಂಟಿ ವ್ಯವಸ್ಥಾಪಕ ನಿರ್ದೇಶಕಿಯಾಗಿ ನೇಮಕಗೊಂಡರು ಮತ್ತು 2013ರ ಮಾರ್ಚ್ 31 ರವರೆಗೆ ಆ ಸ್ಥಾನದಲ್ಲಿ ಇದ್ದರು. ಅವರು 2013ರ ಏಪ್ರಿಲ್ 1 ರಂದು ವ್ಯವಸ್ಥಾಪಕ ನಿರ್ದೇಶಕಿಯಾಗಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿ ಉನ್ನತೀಕರಿಸಲ್ಪಟ್ಟರು. ಎನ್ಎಸ್ಇನಲ್ಲಿ ಅವರ ಅಧಿಕಾರಾವಧಿಯು ಡಿಸೆಂಬರ್ 2016 ರಲ್ಲಿ ಕೊನೆಗೊಂಡಿತು.