ಪ್ರಯಾಣಿಕರ ಅಶಿಸ್ತಿನ ವರ್ತನೆ ಬೆನ್ನಲ್ಲೇ 'ಎಣ್ಣೆ ನೀತಿ' ಮಾರ್ಪಡಿಸಿದ ಏರ್ ಇಂಡಿಯಾ
ಇತ್ತೀಚಿಗೆ ವಿಮಾನದಲ್ಲಿ ಕುಡಿದ ಮತ್ತಿನಲ್ಲಿ ಪ್ರಯಾಣಿಕರ ಅಶಿಸ್ತಿನ ವರ್ತನೆಗಳು ಹೆಚ್ಚುತ್ತಿದ್ದು, ಇದರಿಂದ ಎಚ್ಚೆತ್ತುಕೊಂಡ ಏರ್ ಇಂಡಿಯಾ, ತನ್ನ ವಿಮಾನದಲ್ಲಿನ ಆಲ್ಕೋಹಾಲ್ ಸೇವಾ ನೀತಿಯನ್ನು ಮಾರ್ಪಡಿಸಿದೆ.
Published: 25th January 2023 08:35 PM | Last Updated: 25th January 2023 08:35 PM | A+A A-

ಏರ್ ಇಂಡಿಯಾ
ನವದೆಹಲಿ: ಇತ್ತೀಚಿಗೆ ವಿಮಾನದಲ್ಲಿ ಕುಡಿದ ಮತ್ತಿನಲ್ಲಿ ಪ್ರಯಾಣಿಕರ ಅಶಿಸ್ತಿನ ವರ್ತನೆಗಳು ಹೆಚ್ಚುತ್ತಿದ್ದು, ಇದರಿಂದ ಎಚ್ಚೆತ್ತುಕೊಂಡ ಏರ್ ಇಂಡಿಯಾ, ತನ್ನ ವಿಮಾನದಲ್ಲಿನ ಆಲ್ಕೋಹಾಲ್ ಸೇವಾ ನೀತಿಯನ್ನು ಮಾರ್ಪಡಿಸಿದೆ.
ನಿನ್ನೆಯಷ್ಟೇ ಪ್ರಯಾಣಿಕರು ಅಶಿಸ್ತಿನ ವರ್ತನೆ ತೋರಿದ ಎರಡು ಘಟನೆಗಳನ್ನು ವರದಿ ಮಾಡದಿದ್ದಕ್ಕಾಗಿ ಏರ್ ಇಂಡಿಯಾಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) 10 ಲಕ್ಷ ರೂಪಾಯಿ ದಂಡ ವಿಧಿಸಿತ್ತು.
ಇದನ್ನು ಓದಿ: ವಿಮಾನದಲ್ಲಿ ಅಶಿಸ್ತಿನ ವರ್ತನೆ: ಏರ್ ಇಂಡಿಯಾಗೆ 10 ಲಕ್ಷ ರೂ. ದಂಡ ವಿಧಿಸಿದ ಡಿಜಿಸಿಎ
ಕಳೆದ ವರ್ಷ ನ್ಯೂಯಾರ್ಕ್‌ನಿಂದ ನವದೆಹಲಿಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಬಿಸಿನೆಸ್ ಕ್ಲಾಸ್‌ನಲ್ಲಿ ಕುಳಿತಿದ್ದ 72 ವರ್ಷದ ಮಹಿಳೆಯ ಮೇಲೆ ಕುಡಿದ ಅಮಲಿನಲ್ಲಿ ಅಮೆರಿಕದ ಹಿರಿಯ ಬ್ಯಾಂಕ್ ಅಧಿಕಾರಿಯೊಬ್ಬರು ಮೂತ್ರ ವಿಸರ್ಜನೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಈ ಘಟನೆ ಸಂಬಂಧ ಏರ್ ಇಂಡಿಯಾ ತೀವ್ರ ಟೀಕೆಗೆ ಗುರಿಯಾಗಿತ್ತು.
ಏರ್ ಇಂಡಿಯಾ ಈಗ ಆಲ್ಕೋಹಾಲ್ ಸೇವಾ ನೀತಿಯನ್ನು ಮಾರ್ಪಡಿಸಿದ್ದು, ಅಗತ್ಯವಿದ್ದರೆ ಮಾತ್ರ ಜಾಣ್ಮೆಯಿಂದ ಮದ್ಯ ಪೂರೈಸುವಂತೆ ಕ್ಯಾಬಿನ್ ಸಿಬ್ಬಂದಿಗೆ ಸೂಚಿಸಲಾಗಿದೆ.
ಪರಿಷ್ಕೃತ ನೀತಿಯ ಪ್ರಕಾರ, ಕ್ಯಾಬಿನ್ ಸಿಬ್ಬಂದಿ ಮದ್ಯ ಪೂರೈಸದ ಹೊರತು ಪ್ರಯಾಣಿಕರು ಮದ್ಯಪಾನ ಮಾಡಲು ಅನುಮತಿ ನೀಡಬಾರದು. ಕ್ಯಾಬಿನ್ ಸಿಬ್ಬಂದಿ ಸ್ವಯಂ ಮದ್ಯ ಸೇವಿಸುವ ಪ್ರಯಾಣಿಕರನ್ನು ಗುರುತಿಸಿ ಗಮನಹರಿಸಬೇಕು ಎಂದು ಹೇಳಲಾಗಿದೆ.
"ನಾವು ಅಸ್ತಿತ್ವದಲ್ಲಿರುವ ವಿಮಾನದಲ್ಲಿ ಆಲ್ಕೋಹಾಲ್ ಸೇವಾ ನೀತಿಯನ್ನು ಪರಿಶೀಲಿಸಿದ್ದೇವೆ. ಇತರ ವಾಹಕಗಳ ಅಭ್ಯಾಸದಿಂದ ಉಲ್ಲೇಖವನ್ನು ಪಡೆದುಕೊಳ್ಳಲಾಗಿದೆ ಮತ್ತು ಅಮೆರಿಕ ರಾಷ್ಟ್ರೀಯ ರೆಸ್ಟೋರೆಂಟ್‌ಗಳ ಸಂಘದ ಮಾರ್ಗಸೂಚಿಗಳಿಂದ ಇನ್‌ಪುಟ್ ಅನ್ನು ಪಡೆದುಕೊಂಡಿದ್ದೇವೆ" ಎಂದು ಏರ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.