ನವದೆಹಲಿ: ಇತ್ತೀಚೆಗಷ್ಟೇ ಗೃಹ ಬಳಕೆಯ ಎಲ್ ಪಿಜಿ ಸಿಲಿಂಡರ್ ಗಳ ದರ ಇಳಿಕೆ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಗಳ ಬೆಲೆಯಲ್ಲೂ ಗಣನೀಯ ಇಳಿಕೆ ಮಾಡಿದೆ.
ಹೌದು.. ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) 19 ಕೆ.ಜಿ ತೂಕದ ವಾಣಿಜ್ಯ ಬಳಕೆ ಸಿಲಿಂಡರ್ ದರವನ್ನು ಇಳಿಕೆ ಮಾಡಿದ್ದು, ಪ್ರತೀ ಸಿಲಿಂಡರ್ ದರಗಳಲ್ಲಿ 158ರೂ ಇಳಿಕೆ ಮಾಡಲಾಗಿದೆ ಎಂದು ಹೇಳಲಾಗಿದೆ. ಪರಿಷ್ಕೃತ ದರ ಇಂದಿನಿಂದ ಜಾರಿಗೆ ಬರಲಿದ್ದು, ದೆಹಲಿಯಲ್ಲಿ 19 ಕೆ.ಜಿ ತೂಕದ ಸಿಲಿಂಡರ್ ದರ 1,522 ರೂ ನಷ್ಟಿದ್ದರೆ, ಬೆಂಗಳೂರಿನಲ್ಲಿ ಈ ದರ1,609 ರೂ ರಷ್ಟಿದೆ ಎಂದು ಹೇಳಲಾಗಿದೆ.
ಆಗಸ್ಟ್ 1ರಂದು ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು 100ರಷ್ಟು ಕಡಿಮೆ ಮಾಡಲಾಗಿತ್ತು. ಇದಕ್ಕೂ ಮೊದಲು ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಮೂರು ಬಾರಿ ಇಳಿಕೆ ಮಾಡಲಾಗಿದೆ. ಇತ್ತೀಚೆಗಷ್ಟೇ ಮನೆಗಳಲ್ಲಿ ಅಡುಗೆಗೆ ಬಳಸುವ ಗೃಹ ಬಳಕೆಯ 14.2 ಕೆ.ಜಿ. ತೂಕದ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಕೇಂದ್ರ ಸರ್ಕಾರವು 200ರಷ್ಟು ಇಳಿಕೆ ಮಾಡಿತ್ತು. ಬುಧವಾರದಿಂದಲೇ ಪರಿಷ್ಕೃತ ಬೆಲೆ ಅನ್ವಯವಾಗುತ್ತಿದೆ.
ದರ ಏರಿಕೆಗೆ ಮೊದಲು, ಈ ವರ್ಷದ ಮೇ ಮತ್ತು ಜೂನ್‌ನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ದರ ಸತತ ಎರಡು ಬಾರಿ ಕಡಿತ ಮಾಡಲಾಗಿತ್ತು. ಮೇ ತಿಂಗಳಲ್ಲಿ OMCಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 172 ರೂಪಾಯಿಗಳಷ್ಟು ಕಡಿಮೆಗೊಳಿಸಿದರೆ, ಜೂನ್‌ನಲ್ಲಿ 83 ರೂಪಾಯಿಗಳಷ್ಟು ಕಡಿಮೆ ಮಾಡಲಾಗಿತ್ತು. ಏಪ್ರಿಲ್‌ನಲ್ಲಿಯೂ ಅವುಗಳ ಬೆಲೆ ಪ್ರತಿ ಸಿಲಿಂಡರ್ ಬೆಲೆ 91.50 ರೂ. ಕಡಿತವಾಗಿತ್ತು.
Advertisement