
2000 ರೂಪಾಯಿ ನೋಟ್
ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ ಬಿಐ) 2000 ರೂಪಾಯಿ ಮುಖಬೆಲೆಯ ನೋಟುಗಳ ವಿನಿಮಯ ಅವಧಿಯನ್ನು ಒಂದು ವಾರಗಳ ಕಾಲ ವಿಸ್ತರಿಸಿದೆ.
2000 ರೂಪಾಯಿ ನೋಟುಗಳ ಬದಲಾವಣೆಗೆ ಇಂದು ಕೊನೆಯ ದಿನವಾಗಿತ್ತು. 2000 ರೂ. ನೋಟುಗಳನ್ನು ಹಿಂಪಡೆಯುವ ಪ್ರಕ್ರಿಯೆಗೆ ನಿರ್ದಿಷ್ಟಪಡಿಸಿದ ಅವಧಿಯು ಅಂತ್ಯಗೊಂಡಿರುವುದರಿಂದ ಮತ್ತು ಪರಿಶೀಲನೆಯ ಆಧಾರದ ಮೇಲೆ, 2,000 ರೂಪಾಯಿಗಳ ಬ್ಯಾಂಕ್ ನೋಟುಗಳ ಠೇವಣಿ/ವಿನಿಮಯಕ್ಕಾಗಿ ನೀಡಿದ್ದ ಗಡುವನ್ನು ಅಕ್ಟೋಬರ್ 07, 2023 ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ.
ಇದನ್ನು ಓದಿ: ಶೇ.88 ರಷ್ಟು 2000 ರೂಪಾಯಿ ನೋಟುಗಳು ಬ್ಯಾಂಕ್ ಗಳಿಗೆ ವಾಪಸ್: ಆರ್ ಬಿಐ
ಮೇ 19 ರಿಂದ ಸಾರ್ವಜನಿಕರು 3.42 ಲಕ್ಷ ಕೋಟಿ ರೂ. 2,000 ನೋಟುಗಳನ್ನು ಹಿಂದಿರುಗಿಸಿದ್ದಾರೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಈ ನೋಟುಗಳನ್ನು ಸೆಪ್ಟೆಂಬರ್ 29 ರವರೆಗೆ ಬ್ಯಾಂಕ್ ಶಾಖೆಗಳಲ್ಲಿ ಠೇವಣಿ ಮಾಡಲಾಗಿದೆ ಅಥವಾ ವಿನಿಮಯ ಮಾಡಿಕೊಳ್ಳಲಾಗಿದೆ ಮತ್ತು ಈ ವರ್ಷದ ಮೇ 19 ರವರೆಗೆ ಚಲಾವಣೆಯಲ್ಲಿರುವ ಬಾಕಿ ಉಳಿದಿರುವ ಕರೆನ್ಸಿಯ ಶೇ. 96 ರಷ್ಟು ಇದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಹೇಳಿದೆ.
2,000 ರೂ. ನೋಟುಗಳು ಅಕ್ಟೋಬರ್ 7 ರ ನಂತರವೂ ಕಾನೂನುಬದ್ಧವಾಗಿ ಮುಂದುವರಿಯುತ್ತವೆ. ಆದರೆ ಆರ್‌ಬಿಐ ಕಚೇರಿಗಳಲ್ಲಿ ಮಾತ್ರ ಅದನ್ನು ವಿನಿಮಯ ಮಾಡಿಕೊಳ್ಳಬಹುದು ಎಂದು ಕೇಂದ್ರ ಬ್ಯಾಂಕ್ ತಿಳಿಸಿದೆ.