ಬಾಲಿವುಡ್ ನ ‘ಮಿಷನ್ ಮಂಗಳ್’ ಚಿತ್ರದಲ್ಲಿ ಕನ್ನಡದ ಹಿರಿಯ ನಟ ದತ್ತಣ್ಣ

ದತ್ತಣ್ಣ ಎಂದೇ ಮನೆ ಮಾತಾಗಿರುವ ಎಚ್ ಜಿ ದತ್ತಾತ್ರೇಯ ಕನ್ನಡ ಚಿತ್ರರಂಗ ಕಂಡ ಹಿರಿಯ ಹಾಗೂ ಅಧ್ಭುತ ನಟ. ಉದ್ಭವ, ಉಲ್ಟಾ ಪಲ್ಟಾ, ಮೈಸೂರು...
ನಟ ದತ್ತಣ್ಣ - ಅಕ್ಷಯ್ ಕುಮಾರ್
ನಟ ದತ್ತಣ್ಣ - ಅಕ್ಷಯ್ ಕುಮಾರ್
ಬೆಂಗಳೂರು: ದತ್ತಣ್ಣ  ಎಂದೇ ಮನೆ ಮಾತಾಗಿರುವ ಎಚ್ ಜಿ ದತ್ತಾತ್ರೇಯ ಕನ್ನಡ ಚಿತ್ರರಂಗ ಕಂಡ ಹಿರಿಯ ಹಾಗೂ ಅಧ್ಭುತ ನಟ.  ಉದ್ಭವ, ಉಲ್ಟಾ ಪಲ್ಟಾ, ಮೈಸೂರು ಮಲ್ಲಿಗೆ, ನೀರ್ ದೋಸೆ, ರಾಮ ಶಾಮ ಭಾಮಾ ಸೇರಿದಂತೆ ನೂರಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿ ಎಲ್ಲರ ಮೆಚ್ಚುಗೆ ಗಳಿಸಿರುವ ಕಲಾವಿದ. ಕಲೆಗೆ ಭಾಷೆಯ ಗಡಿಯಿಲ್ಲ ಎಂಬಂತೆ, ಬಾಲಿವುಡ್ ನಲ್ಲಿಯೂ ದತ್ತಣ್ಣ ತಮ್ಮ ಪ್ರತಿಭಾ ಕಾರಂಜಿಯನ್ನು ಚಿಮ್ಮಿಸಿದ್ದು, ಆಗಸ್ಟ್ 15ರಂದು ದೇಶಾದ್ಯಂತ ಬಿಡುಗಡೆಗೆ ಸಿದ್ಧವಾಗಿರುವ ‘ಮಿಷನ್ ಮಂಗಳ್’ ಚಿತ್ರದಲ್ಲಿ ನಟಿಸಿದ್ದಾರೆ ಎಂಬುದು ಹೆಮ್ಮೆಯ ವಿಷಯ.
ಇತ್ತೀಚೆಗೆ ‘ಮಿಷನ್​ ಮಂಗಳ್​’ ಚಿತ್ರದ ಟ್ರೈಲರ್​ ಬಿಡುಗಡೆ ವೇಳೆ ದತ್ತಣ್ಣನವರ ಬಗ್ಗೆ ಬಹುತೇಕ ಕನ್ನಡಿಗರಿಗೆ ತಿಳಿಯದ ಹಲವು ವಿಷಯಗಳನ್ನು ನಟ ಅಕ್ಷಯ್ ಕುಮಾರ್ ತಿಳಿಸಿಕೊಟ್ಟಿದ್ದಾರೆ. ಅಲ್ಲದೆ ದತ್ತಣ್ಣ ಕೂಡ ಮಾತನಾಡಿ, ಚಿತ್ರರಂಗಕ್ಕೆ ಕಾಲಿಡುವ ಮೊದಲು ತಾವು ಮಾಡುತ್ತಿದ್ದ ವೃತ್ತಿಯ ಬಗ್ಗೆ ಹೇಳಿ ಕನ್ನಡಿಗರು ‘ವಾವ್’ ಎನ್ನುವಂತೆ ಮಾಡಿದ್ದಾರೆ.
ದತ್ತಣ್ಣ ಈ ಮೊದಲು ವಾಯುಪಡೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರಂತೆ. “ನಾನು ರಂಗಭೂಮಿ ಹಿನ್ನೆಲೆಯಿಂದ ಬಂದವನು. ವಾಯುಪಡೆಯಲ್ಲಿ 23 ವರ್ಷ ಹಾಗೂ ಎಚ್​ಎಎಲ್​ನಲ್ಲಿ 9  ವರ್ಷ ಕಾರ್ಯನಿರ್ವಹಿಸಿದ್ದೆ. ಹಾಗಾಗಿ ಚಿತ್ರರಂಗಕ್ಕೆ ಬರುವುದು ತಡವಾಯಿತು.  ಏರ್​ಫೋರ್ಸ್​​ನಲ್ಲಿರುವಾಗ ಉಪಗ್ರಹವನ್ನು ನಾನು ಮುಟ್ಟಿದ್ದೆ. ನನ್ನ ಅನೇಕ ಗೆಳೆಯರು ಇಸ್ರೋದಲ್ಲಿ ಕೆಲಸ ಮಾಡುತ್ತಿದ್ದಾರೆ,” ಎಂದು ಹೇಳಿದ್ದಾರೆ.
ಜಗನ್​ ಶಕ್ತಿ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್​ ಕುಮಾರ್​, ದತ್ತಣ್ಣ ವಿದ್ಯಾ ಬಾಲನ್​, ಸೋನಾಕ್ಷಿ ಸಿನ್ಹಾ, ತಾಪ್ಸೀ ಪನ್ನು, ನಿತ್ಯಾ ಮೆನನ್​ ಮೊದಲಾದವರು ಬಣ್ಣ ಹಚ್ಚಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆ.15ರಂದು ಸಿನಿಮಾ ತೆರೆಗೆ ಬರುತ್ತಿದೆ.
ಚಿತ್ರದಲ್ಲಿ ದತ್ತಣ್ಣ ಅವರು ಇಸ್ರೋ ವಿಜ್ಞಾನಿ ಪಾತ್ರವನ್ನು ಮಾಡುತ್ತಿದ್ದಾರೆ. ಚಿತ್ರದ ಟ್ರೇಲರ್ ನಲ್ಲಿ ದತ್ತಣ್ಣ ಸಹ ಕಾಣಿಸಿಕೊಂಡಿರುವುದು ಸ್ಯಾಂಡಲ್‌ವುಡ್‌ ಸಿನಿಮಾ ಪ್ರೇಮಿಗಳಿಗೆ ಖುಷಿ ತಂದಿದೆ. ಕರ್ನಾಟಕವೇ ಈ ಚಿತ್ರದ ಪ್ರಮುಖ ಮಿಷನ್‌ ಸೆಂಟರ್‌ ಆಗಿರುವುದರಿಂದ ಈ ಚಿತ್ರದಲ್ಲಿ ಕೆಲವು ಸಲ ಕನ್ನಡ ಮಾತನಾಡಿದ್ದಾರಂತೆ . ಈ ಸಿನಿಮಾಗಾಗಿ ಹಾಸನದಲ್ಲಿರುವ ಇಸ್ರೋ ಸೆಂಟರ್‌ನ್ನು ರೀ ಕ್ರಿಯೇಟ್‌ ಮಾಡಲಾಗಿದ್ದು, ತನ್ಮೂಲಕ ಹಾಸನ ಬಾಲಿವುಡ್‌ ಸಿನಿಮಾದಲ್ಲಿ ರೀ ಕ್ರಿಯೇಟ್‌ ಆಗಿದೆ ಎನ್ನಬಹುದು
ಮತ್ತೊಂದು ವಿಶೇಷವೇನೆಂದರೆ ಈ ಚಿತ್ರದ ನಿರ್ದೇಶಕ ಜಗನ್ ಶಕ್ತಿ ಕೂಡ ಕನ್ನಡಿಗ, ಮೂಲತಃ ಬೆಂಗಳೂರಿನವರಾದ ಜಗನ್ ಈ ಹಿಂದೆ ಉಗ್ರಂ ಚಿತ್ರದ ಕಲಾ ವಿಭಾಗದಲ್ಲಿ ಕೆಲಸ ಮಾಡಿದ್ದರು.
ಈ ಸಿನಿಮಾದ ಮತ್ತೊಂದು ವಿಶೇಷ ಎಂದರೆ ಬೆಂಗಳೂರಿನ ಆನಂದರಾವ್‌ ಸರ್ಕಲ್‌ನಲ್ಲಿ ಚಿತ್ರೀಕರಣ ನಡೆದಿದ್ದು, ಅದಕ್ಕಾಗಿ ಇಡೀ ಸಿನಿಮಾ ತಂಡವೇ ಬೆಂಗಳೂರಿನಲ್ಲಿತ್ತು’ ಎಂದು ಚಿತ್ರತಂಡ ತಿಳಿಸಿದೆ.  ಇಸ್ರೋದ ಮಂಗಳಯಾನ ಪ್ರಾಜೆಕ್ಟ್ ಆಧರಿಸಿರುವ ಚಿತ್ರ ಇದಾಗಿದ್ದು, ಆಗಸ್ಟ್ 15ರಂದು ತೆರೆಗೆ ಬರುತ್ತಿದೆ. ಈಗಾಗಲೇ ಇಸ್ರೋ ಕೂಡ ‘ಮಿಷನ್ ಮಂಗಳ್’ ಚಿತ್ರಕ್ಕೆ ಶುಭ ಕೋರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com