'ನಾನು ಸನ್ನಿ ಲಿಯೋನ್ ಅಲ್ಲ.. ದಯಮಾಡಿ ಬಿಟ್ಟುಬಿಡಿ'

ಬಾಲಿವುಡ್ ನಟಿ ಸನ್ನಿಲಿಯೋನ್ ಅಭಿಮಾನಿಗಳಿಂದ ಬೇಸತ್ತು ಹೋಗಿರುವ ದೆಹಲಿ ಮೂಲದ ಯುವಕನೋರ್ವ ಇದೀಗ ಪೊಲೀಸರ ಮೊರೆ ಹೋಗಿದ್ದಾನೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಬಾಲಿವುಡ್ ನಟಿ ಸನ್ನಿಲಿಯೋನ್ ಅಭಿಮಾನಿಗಳಿಂದ ಬೇಸತ್ತು ಹೋಗಿರುವ ದೆಹಲಿ ಮೂಲದ ಯುವಕನೋರ್ವ ಇದೀಗ ಪೊಲೀಸರ ಮೊರೆ ಹೋಗಿದ್ದಾನೆ.
ಮಾಜಿ ನೀಲಿಚಿತ್ರತಾರೆ, ಹಾಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ರ ಅಭಿಮಾನಿಗಳ ಕಾಟಕ್ಕೆ ಇಲ್ಲೊಬ್ಬ ಯುವಕ ಪತರುಗುಟ್ಟಿ ಹೋಗಿದ್ದು, ನಾನು ಸನ್ನಿ ಲಿಯೋನ್ ಅಲ್ಲ.. ದಯಮಾಡಿ ನನ್ನನ್ನು ಬಿಟ್ಟು ಬಿಡಿ.. ನನಗೆ ಕರೆ ಮಾಡಬೇಡಿ ಎಂದು ಆಲವತ್ತುಕೊಂಡಿದ್ದಾನೆ. ಆದರೂ ಸನ್ನಿ ಅಭಿಮಾನಿಗಳ ಕಾಟಕ್ಕೆ ಬೇಸತ್ತು ಇದೀಗ ಪೊಲೀಸರು ಮೊರೆ ಹೋಗಿದ್ದಾನೆ.
ಅರೆ ಆಗಿದ್ದಾದರೂ ಏನು?
ದೆಹಲಿಯ ಪೀತಮಪುರದ ಯುವಕ ಪುನೀತ್ ಅಗರ್ವಾಲ್ ಎಂಬಾತನಿಗೆ ನಿತ್ಯ ನೂರಾರು ಮಂದಿ ಸನ್ನಿ ಲಿಯೋನ್ ಅಭಿಮಾನಿಗಳು ಕರೆ ಮಾಡುತ್ತಿದ್ದಾರೆ. ತಾನು ಎಷ್ಟು ಬಾರಿ ಇದು ಸನ್ನಿ ಲಿಯೋನ್ ರ ಮೊಬೈಲ್ ಸಂಖ್ಯೆಯಲ್ಲ ಎಂದು ಹೇಳಿದರೂ ಬಿಡದ ಅಭಿಮಾನಿಗಳು ನಿತ್ಯ ಕರೆ ಮಾಡಿ ಕಾಟ ನೀಡುತ್ತಿದ್ದಾರೆ. ಇದೀಗ ಈ ರೀತಿಯ ಕರೆಗಳಿಂದ ಬೇಸತ್ತಿರುವ ಪುನೀತ್ ಸ್ಥಳೀಯ ಮೌರ್ಯ ಏಕಲವ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ದೂರು ದಾಖಲಿಸಿಕೊಂಡಿರುವ ಪೊಲೀಸರು, ಸೈಬರ್ ತಜ್ಞರೊಂದಿಗೆ ಚರ್ಚಿಸಿ ತನಿಖೆ ಆರಂಭಿಸಿದ್ದಾರೆ. 
ಯುವಕನ ಫಜೀತಿಗೆ ಸಿನಿಮಾ ಕಾರಣ
ಇನ್ನು ದೆಹಲಿ ಮೂಲದ ಯುವಕನ ಈ ಫಜೀತಿಗೆ ಬಾಲಿವುಡ್ ಚಿತ್ರ ಕಾರಣ ಎಂದು ಹೇಳಲಾಗುತ್ತಿದ್ದು, ಅರ್ಜುನ ಪಟಿಯಾಲಾ ಸಿನಿಮಾದಲ್ಲಿ ನಟಿಸಿರುವ ಸನ್ನಿ ಲಿಯೋನ್ ದೃಶ್ಯವೊಂದರಲ್ಲಿ ತಮ್ಮ ಮೊಬೈಲ್ ನಂಬರ್ ಹೇಳುತ್ತಾರೆ. ಆದರೆ ಚಿತ್ರದಲ್ಲಿ ಹೇಳಿರುವ ಆ ನಂಬರ್ ದೆಹಲಿ ಮೂಲದ ಈ ಯುವಕನದ್ದು. ಇದನ್ನೇ ನಿಜವಾದ ನಂಬರ್ ಎಂದು ತಿಳಿದುಕೊಂಡಿರುವ ಅಭಿಮಾನಿಗಳು ನಿತ್ಯ ಕರೆ ಮಾಡಿ ಸನ್ನಿ ಲಿಯೋನ್ ಬಗ್ಗೆ ವಿಚಾರಿಸುತ್ತಿದ್ದಾರೆ. ಇದು ಯುವಕನ ಈ ಫಜೀತಿಗೆ ಕಾರಣವಾಗಿದೆ.
ಈ ಬಗ್ಗೆ ಮಾತನಾಡಿರುವ ಆತ 'ಸನ್ನಿ ಲಿಯೋನ್ ಸಿನಿಮಾದಲ್ಲಿ ನನ್ನ ನಂಬರ್ ಹೇಳಿದ್ದರಿಂದ ಹಲವರು ವಿದೇಶಗಳಿಂದಲೂ ಕರೆ ಮಾಡಿ ಮಾತನಾಡುತ್ತಿದ್ದಾರೆ. ನಾನು ಸನ್ನಿ ಲಿಯೋನ್ ಅಲ್ಲ ಎಂದು ತಿಳಿಸಲು ಪ್ರಯತ್ನಿಸಿದರೆ ಅವಾಚ್ಯ ಪದಗಳಿಂದ ನಿಂದಿಸಲು ಆರಂಭಿಸುತ್ತಾರೆ ಎಂದು ತನ್ನ ಅಸಹಾಯಕತೆ ತೋಡಿಕೊಂಡಿದ್ದಾನೆ.
'ಕಳೆದ ಶುಕ್ರವಾರ ಅರ್ಜುನ ಪಟಿಯಾಲಾ ಸಿನಿಮಾ ಬಿಡುಗಡೆಯಾಗಿದ್ದು, ಚಿತ್ರ ಬಿಡುಗಡೆಯಾದ ದಿನದಿಂದ ಈ ವರೆಗೂ ಸುಮಾರು 500ಕ್ಕೂ ಹೆಚ್ಚು ಕರೆಗಳನ್ನು ನಾನು ಸ್ವೀಕರಿಸಿದ್ದೇನೆ. ಆದರೆ ಎಲ್ಲ ಕರೆಗಳಿಗೂ ನಾನು ಸನ್ನಿ ಲಿಯೋನ್ ಅಲ್ಲ ಎಂದು ಹೇಳುತ್ತಿದ್ದೇನೆ. ಕರೆ ಮಾಡಿದ ಬಹುತೇಕರು ಭೇಟಿಯಾಗುವ ಇಂಗಿತವನ್ನು ವ್ಯಕ್ತಪಡಿಸುತ್ತಿದ್ದಾರೆ. ಭೇಟಿಗೆ ಒಪ್ಪದಿದ್ದರೆ ನಿಂದಿಸಲು ಆರಂಭಿಸುತ್ತಾರೆ ಎಂದು ಹೇಳಿಕೊಂಡಿದ್ದಾನೆ. 
ಅಂತೆಯೇ ಚಿತ್ರತಂಡದ ವಿರುದ್ಧವೂ ಕಿಡಿಕಾರಿರುವ ಪುನೀತ್, ಚಿತ್ರದಲ್ಲಿ ಮೊಬೈಲ್ ನಂಬರ್ ಬಳಸುವ ಮುನ್ನ ಚಿತ್ರತಂಡ ನನ್ನ ಅನುಮತಿ ಪಡೆದುಕೊಂಡಿಲ್ಲ. ಹೀಗಾಗಿ ಚಿತ್ರತಂಡ ಮತ್ತು ಕರೆ ಮಾಡುತ್ತಿರುವ ಅಭಿಮಾನಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದೇನೆ. ಪೊಲೀಸರು ಸಹ ಸೈಬರ್ ತಜ್ಞರ ಸಲಹೆ ಪಡೆದು ತನಿಖೆ ಆರಂಭಿಸಿದ್ದಾರೆ ಎಂದು ಹೇಳಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com