ಹಿನ್ನೋಟ 2020: ಇಡೀ ವರ್ಷ ಜಿದ್ದಾಜಿದ್ದಿಯಲ್ಲೇ ಸುದ್ದಿ ಮಾಡಿದ ಕಂಗನಾ ರಣಾವತ್; ಮುಂಬಯಿ, ದೀಪಿಕಾ, ಜಯಾ ಬಚ್ಚನ್ ಯಾರನ್ನೂ ಬಿಡಲಿಲ್ಲ!

ಕಂಗನಾ ರಣಾವತ್, 2020 ನೇ ಇಸವಿಯಲ್ಲಿ ಬಾಲಿವುಡ್ ನಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಹೆಸರು. ನಟ ಸುಶಾಂತ್ ಸಾವಿನ ಬಳಿಕ ಇಡೀ ಬಾಲಿವುಡ್ ವಿರುದ್ಧ ಕಂಗನಾ ರಣಾವತ್ ಸಮರ ಸಾರಿತು. ಕಂಗನಾ ಮಾಡಿದ ಸದ್ದಿನ ವಿವಾದಗಳ ಸುದ್ದಿಯ ಒಂದು ಝಲಕ್ ಇಲ್ಲಿದೆ.
ಕಂಗನಾ ರಣಾವತ್
ಕಂಗನಾ ರಣಾವತ್

ಕಂಗನಾಕಂಗನಾ ರಣಾವತ್, 2020 ನೇ ಇಸವಿಯಲ್ಲಿ ಬಾಲಿವುಡ್ ನಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಹೆಸರು. ನಟ ಸುಶಾಂತ್ ಸಾವಿನ ಬಳಿಕ ಇಡೀ ಬಾಲಿವುಡ್ ವಿರುದ್ಧ ಕಂಗನಾ ರಣಾವತ್ ಸಮರ ಸಾರಿತು. ಇಂಡಸ್ಟ್ರಿಯಲ್ಲಿ ನೆಪೋಟಿಸಂ ಅಟ್ಟಹಾಸ ಮಾಡುತ್ತಿದೆ ಎಂದು ಪ್ರಭಾವಿಗಳ ವಿರುದ್ಧ ಗುಡುಗಿದರು.

ಶಿವಸೇನೆ ಸರ್ಕಾರದ ವಿರುದ್ಧ ಹರಿಹಾಯ್ದರು.ಕಂಗನಾ ಕಚೇರಿ ನಿರ್ಮಾಣ ಅಕ್ರಮ ಎಂದು ಪಾಲಿಕೆ ಸಿಬ್ಬಂದಿ  ಕಟ್ಟಡ ನೆಲಸಮ ಮಾಡಲು ಮುಂದಾದರು. ಕೇಂದ್ರ ಸರ್ಕಾರದ ವಿರುದ್ಧ ರೈತರು ಮಾಡಿದ ಪ್ರತಿಭಟನೆಯ ಬಗ್ಗೆ ವ್ಯಂಗ್ಯ ಮಾಡಿದರು. ಲಾಕ್‌ಡೌನ್ ಅವಧಿಯಲ್ಲಿ ಕಂಗನಾ ಮಾಡಿದ ಟ್ವೀಟ್ ಗಳನ್ನು ಅಧರಿಸಿ ಮೂರಕ್ಕೂ ಹೆಚ್ಚು ಕೇಸ್ ದಾಖಲಾಗಿದೆ. ಕಂಗನಾ ಮಾಡಿದ ಸದ್ದಿನ ವಿವಾದಗಳ ಸುದ್ದಿಯ ಒಂದು ಝಲಕ್ ಇಲ್ಲಿದೆ.

ಸುಶಾಂತ್ ಸಿಂಗ್ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿದ್ದ ಕಂಗನಾ ರಣಾವತ್

ಪ್ರತಿಭಾವಂತ ನಟ ಸುಶಾಂತ್ ಸಿಂಗ್ ಪ್ರಕರಣದ ಬಗ್ಗೆ ಹಾಗೂ ಬಾಲಿವುಡ್ ನಲ್ಲಿ ಡ್ರಗ್ ಮಾಫಿಯಾ ಬಗ್ಗೆ ಬಾಲಿವುಡ್ ನ ಹಿರಿಯ ನಟರು ಏಕೆ ಮೌನವಾಗಿದ್ದಾರೆ ಎಂದು ನಟಿ ಕಂಗನಾ ರಣಾವತ್ ಪ್ರಶ್ನಿಸಿದ್ದರು.

ಡ್ರಗ್‌‌ ಮಾಫಿಯಾ ಜತೆಗೆ ರಾಜಕಾರಣ ಮತ್ತು ಅಪರಾಧ ಜಗತ್ತೂ ಬೆಸೆದುಕೊಂಡಿದೆ. ಆದ್ದರಿಂದ ಬಾಲಿವುಡ್‌ ಮತ್ತು ಮಾಫಿಯಾ ನಂಟಿನ ಬಗ್ಗೆ ಧ್ವನಿ ಎತ್ತುವ ಧೈರ್ಯವನ್ನು ಯಾರೂ ಮಾಡುವುದಿಲ್ಲ. ಆದರೆ ನಟಿ ಕಂಗನಾ  ಈ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು.

ಬಾಲಿವುಡ್‌ನಲ್ಲಿ ಮಾದಕದ್ರವ್ಯ ನೀರಿನಂತೆ ಹರಿಯುತ್ತದೆ. ಡ್ರಗ್‌ ಮಾಫಿಯಾದಲ್ಲಿರುವವರ ಜತೆಗೆ ರಾಜಕಾರಣಿಗಳು ಹಾಗೂ ಪೊಲೀಸರಿಗೂ ನಂಟಿದೆ. ಆದ್ದರಿಂದ ಯಾರೂ ಆ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಈ ದಂಧೆಯಲ್ಲಿ ಕೆಲವು ಹಿರಿಯ, ಜನಪ್ರಿಯ ನಟರೂ ಭಾಗಿಯಾಗಿದ್ದಾರೆ ಎಂಬುದು ಪೊಲೀಸರಿಗೆ ಗೊತ್ತಿದೆ. ಇಂಥ ನಟರ ಪತ್ನಿಯರೇ ಪಾರ್ಟಿಗಳನ್ನು ಆಯೋಜಿಸುತ್ತಾರೆ. ದುರಭ್ಯಾಸ ಹೊಂದಿದವರನ್ನು ಮಾತ್ರ ಪಾರ್ಟಿಗೆ ಆಹ್ವಾನಿಸಲಾಗುತ್ತದೆ. ಇಂಥವರೇ ಉದ್ಯಮದಲ್ಲಿ ಸ್ವಜನಪಕ್ಷಪಾತವನ್ನು ಪ್ರೋತ್ಸಾಹಿಸುತ್ತಾರೆ’

ಎಂದು ಕಂಗನಾ ಹೇಳಿದ್ದರು.

ಇದಕ್ಕೂ ಮುಂದವರಿದು ಸುಶಾಂತ್ ಸಿಂಗ್ ಸಾವು ಆತ್ಮಹತ್ಯೆಯಲ್ಲ, ಅದೊಂದು ಕೊಲೆ, ಎಂಜಿನೀಯರಿಂಗ್ ಕಾಲೇಜಿನ ರ್ಯಾಂಕ್ ಹೋಲ್ಡರ್ ಆತ್ಮಹತ್ಯೆ  ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಸಿನವನೇ ಎಂದು ಪ್ರಶ್ನಿಸಿದ್ದ ಕಂಗನಾ ಇದೊಂದು ವ್ಯವಸ್ಥಿತ ಕೊಲೆ ಎಂದು ಆರೋಪಿಸಿದ್ದರು. ಸುಶಾಂತ್ ಸಿಂಗ್ ಸಾವಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದರು.  
ಆದರೆ ಏಮ್ಸ್ ಆಸ್ಪತ್ರೆ  ಕೊಲೆ ಆರೋಪವನ್ನು ತಳ್ಳಿ ಹಾಕಿತು.

ರಣವೀರ್ ಸಿಂಗ್, ವಿಕ್ಕಿ ಕೌಶಲ್, ರಣಬೀರ್ ಕಪೂರ್ ಮತ್ತು ಇತರರು ಸೇರಿದಂತೆ ನಟರು ತಾವು ವ್ಯಸನಿಗಳಲ್ಲ ಎಂದು ಸಾಬೀತುಪಡಿಸಲು ರಕ್ತದ ಮಾದರಿಗಳನ್ನು ನೀಡಬೇಕು ಎಂದು ಅವರು ಟ್ವೀಟ್ ಮಾಡಿದ್ದರು.

ಮುಂಬಯಿಯನ್ನು ಪಿಓಕೆ ಗೆ ಹೋಲಿಸಿದ ಕ್ವೀನ್

ನಟಿ ಕಂಗನಾ ರಣಾವತ್ ಮುಂಬಯಿ ನಗರವನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದರು.  ಇದಕ್ಕೆ ತಿರುಗೇಟು ನೀಡಿದ ಶಿವಸೇನಾ ನಾಯಕ ಸಂಜಯ್ ರಾವತ್ , ಒಂದು ವೇಳೆ ಕಂಗನಾ ರಣಾವತ್ ಅವರಿಗೆ ಮುಂಬಯಿ ಸುರಕ್ಷಿತ ಅಲ್ಲ ಎನಿಸಿದರೇ ಮುಂಬಯಿ ತೊರೆಯುವಂತೆ ಹೇಳಿದ್ದರು. 

ಇದಾದ ನಾಲ್ಕು ದಿನಗಳ ನಂತರ ಕಂಗನಾಗೆ ವೈ ಪ್ಲಸ್ ಭದ್ರತೆ ನೀಡಲಾಯಿತು, ಮುಂಬಯಿ ಮಹಾನಗರ ಪಾಲಿಕೆ ನಿಯಮ ಉಲ್ಲಂಘಿಸಿ ಕಂಗನಾ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿದ್ದಾರೆ ಎಂದು ನೆಲಸಮ ಮಾಡಲಾಯಿತು.

'ಊರ್ಮಿಳಾ ನೀಲಿ ಚಿತ್ರಗಳ ನಟಿ' ಕಂಗನಾ ರಣಾವತ್ ಮತ್ತೊಂದು ವಿವಾದ

ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ನೀಲಿ ಚಿತ್ರಗಳ ನಟಿ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಂಗನಾ ಹೇಳಿದ್ದರು. ಬಾಲಿವುಡ್ ನಲ್ಲಿ ಮಾದಕ ವಸ್ತು ಮಾಫಿಯಾ ಚರ್ಚೆ ಸಂಬಂಧ ಕಂಗನಾ ಮತ್ತು ಊರ್ಮಿಳಾ ನಡುವೆ ವಾಗ್ವಾದ  ನಡೆದಿತ್ತು, ನಟಿ ಕಂಗನಾ ರಣಾವತ್ ಇತ್ತೀಚಿಗೆ ಸುಶಾಂತ್ ಸಿಂಗ್ ಪ್ರಕರಣದಲ್ಲಿ ಡ್ರಗ್ ಆ್ಯಂಗಲ್
ಬಗ್ಗೆ ಮಾತನಾಡುವಾಗ 'ಬಾಲಿವುಡ್ ನಲ್ಲಿ ಶೇ. 99ರಷ್ಟು ಸ್ಟಾರ್ಸ್ ಮಾದಕ ವಸ್ತು ಸೇವನೆ ಮಾಡುತ್ತಾರೆ' ಎಂದು ಕಂಗನಾ ಹೇಳಿದ್ದರು. ಊರ್ಮಿಳಾ ಒಬ್ಬರು ಸಾಫ್ಟ್ ನೀಲಿ ತಾರೆ. ಅವರು ನಟನೆಯಿಂದ ಪರಿಚಿತರಾದವರಲ್ಲ. ಅವರು ಯಾವುದಕ್ಕೆ ಹೆಸರುವಾಸಿಯಾಗಿದ್ದಾರೆ? ನೀಲಿ ತಾರೆ ಅವರು. ಅವರಿಗೆ ಟಿಕೆಟ್ ಸಿಗುತ್ತೆ ಅಂದಮೇಲೆ ನನಗೆ ಯಾಕೆ ಸಿಗಲ್ಲ? ಎಂದಿದ್ದಾರೆ.

ದೀಪಿಕಾ ಪಡುಕೋಣೆ ಕಾಲೆಳೆದಿದ್ದ ಕಂಗನಾ

ದೀಪಿಕಾ ಪಡುಕೋಣೆ ಈ ಹಿಂದೆ 'ರಿಪೀಟ್ ಆಫ್ಟರ್ ಮಿ' ಎಂದು ಬಳಸಿ ಖಿನ್ನತೆ ಬಗ್ಗೆ ಟ್ವೀಟ್ ಮಾಡಿದ್ದರು. ಇದೀಗ ಕಂಗನಾ ಅದೇ ಪದವನ್ನು ಬಳಸಿ, "ಖಿನ್ನತೆಯೂ ಮಾದಕ ದ್ರವ್ಯ ಸೇವನೆಯ ಪರಿಣಾಮವಾಗಿದೆ. ಸಮಾಜದ ಮೇಲ್ವರ್ಗದ ಕುಟುಂಬದ ಸ್ಟಾರ್ ಮಕ್ಕಳು, ಸಭ್ಯಸ್ಥರ ಹಾಗೆ ಬೆಳೆದುಬಂದವರು ಎಂದು ಹೇಳಿಕೊಳ್ಳುವವರು ಈಗ ಅವರ ಮ್ಯಾನೇಜರ್
ಬಳಿ ಮಾಲ್ ಇದಿಯಾ ಎಂದು ಹೇಳುತ್ತಾರೆ." ಎಂದು ಹೇಳಿ ದೀಪಿಕಾ ಕಾಲೆಳೆದಿದ್ದರು. 8 ವರ್ಷಗಳ ನಂತರ ಯಾವ ರೀತಿಯ ಖಿನ್ನತೆ ಕಾಡುತ್ತಿದೆ ಎಂದು ಪ್ರಶ್ನಿಸಿದ್ದರು.

"ಮಾದಕ ವಸ್ತು ಭಯೋತ್ಪಾದನೆ ನಾವು ಎದುರಿಸುತ್ತಿರುವ ದೊಡ್ಡ ಸವಾಲಾಗಿದೆ. ನಮ್ಮ ರಾಷ್ಟ್ರ ಮತ್ತು ಪಕ್ಕದ ರಾಷ್ಟ್ರಗಳ ಪಟ್ಟಭದ್ರ ಹಿತಾಸಕ್ತಿಗಳು, ನಮ್ಮ ಯುವ ಜನಾಂಗವನ್ನು ನಾಶಮಾಡಲು ಮತ್ತು ನಮ್ಮ ಭವಿಷ್ಯವನ್ನು ವ್ಯವಸ್ಥಿತವಾಗಿ ಹಾಳುಮಾಡುತ್ತಿದ್ದಾರೆ." ಎಂದು ಕಂಗನಾ ಹೇಳಿದ್ದಾರೆ.

ಹಿರಿಯ ನಟಿ ಜಯಾ ಬಚ್ಚನ್ ಗೂ ಚಳಿ ಬಿಡಿಸಿದ್ದ ಕಂಗನಾ ರಣಾವತ್

ಸಂಸತ್‌ನಲ್ಲಿ ಬಹುಭಾಷಾ ನಟ, ಸಂಸದ ರವಿ ಕಿಶನ್‌, 'ಚಿತ್ರರಂಗದಲ್ಲಿ ಡ್ರಗ್ಸ್‌ ಹಾವಳಿ' ಜಾಸ್ತಿ ಆಗಿದೆ ಎಂದು ಹೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಜಯಾ ಬಚ್ಚನ್, 'ಲೋಕಸಭೆಯ ಸದಸ್ಯರೊಬ್ಬರು ಡ್ರಗ್ಸ್‌ ಬಗ್ಗೆ ಮಾತನಾಡಿದ್ದು ನಾಚಿಕೆಗೇಡಿನ ವಿಚಾರ. ಅವರು ಕೂಡ ಚಿತ್ರರಂಗದಿಂದಲೇ ಬಂದವರು. ಕೆಲವರು ತಪ್ಪು ಮಾಡಿದ್ದಕ್ಕಾಗಿ ಪೂರ್ತಿ ಚಿತ್ರರಂಗದ
ಇಮೇಜ್‌ ಹಾಳು ಮಾಡುವುದು ಸರಿಯಲ್ಲ' ಎಂದಿದ್ದ ಅವರು, ನಂತರ ಕಂಗನಾ ಅವರನ್ನು ಗುರಿಯಾಗಿಸಿಕೊಂಡು, 'ಚಿತ್ರರಂಗದಲ್ಲೇ ಹೆಸರು ಮಾಡಿದ ಕೆಲವರು ಈಗ ಈ ಕ್ಷೇತ್ರವನ್ನು ಮೋರಿ ಎನ್ನುತ್ತಿದ್ದಾರೆ. ಅಂಥವರ ಮಾತಿಗೆ ನನ್ನ ಸಂಪೂರ್ಣ ವಿರೋಧವಿದೆ' ಎಂದು ಹೇಳಿದ್ದರು.

ಈ ಕುರಿತು ಟ್ವೀಟ್ ಮಾಡಿರುವ ನಟಿ ಕಂಗನಾ ರಣಾವತ್‌, 'ಜಯಾ ಜೀ, ನನ್ನ ಜಾಗದಲ್ಲಿ ನಿಮ್ಮ ಮಗಳು ಶ್ವೇತಾ ಇದ್ದು, ಅವರಿಗೆ ಯಾರಾದರೂ ಡ್ರಗ್ಸ್ ನೀಡಿದರೆ, ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದರೆ, ಅವರ ಮೇಲೆ ಹಲ್ಲೆ ನಡೆಸಿದ್ದರೆ ನೀವು ಹೀಗೆಯೇ ಮಾತನಾಡುತ್ತಿದ್ದಿರೇ? ಒಂದು ವೇಳೆ, ಬೆದರಿಕೆ ಹಾಗೂ ಕಿರುಕುಳ ನೀಡಿದ್ದಾರೆಂದು ಅಭಿಷೇಕ್ ದೂರು ನೀಡಿ, ನಂತರ ಒಂದು ದಿನ ಆತ್ಮಹತ್ಯೆ ಮಾಡಿಕೊಂಡಿದ್ದರೆ ನೀವು ಹೀಗೆ ಮಾತನಾಡುತ್ತಿದ್ದಿರೇ' ಎಂದು ಖಾರವಾಗಿ ಪ್ರಶ್ನೆ ಮಾಡಿದ್ದರು.

ರೈತರು ದೆಹಲಿಯಲ್ಲಿ ಹೋರಾಟ ನಿರತರಾಗಿದ್ದಾರೆ. ಸಿಎಎ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದ 82 ವರ್ಷದ ಬಿಲ್ಕೀಸ್​ ಭಾನು ದಾದಿ ಸಹ ಈ ಹೋರಾಟದಲ್ಲಿ ಪಾಲ್ಗೊಂಡು ತಮ್ಮ ಬೆಂಬಲವನ್ನು ಸೂಚಿಸಿದ್ದರು. ಆನಂತರ ಬಂಧನಕ್ಕೂ ಒಳಗಾಗಿದ್ದರು. 

ರೈತರ ಪ್ರತಿಭಟನೆ ಬಗ್ಗೆ ಕಿಡಿ ಕಾರಿದ್ದ ನಟಿ

ಆದರೆ, ನಟಿ ಕಂಗನಾ ರಣಾವತ್​ ಹಿರಿಯ ವೃದ್ಧೆಯೊಬ್ಬರನ್ನು ದೆಹಲಿ ಚಲೋ ರೈತರ ಪ್ರತಿಭನೆಯಲ್ಲಿ ಭಾಗಿಯಾಗಿರುವ ಬಿಲ್ಕೀಸ್ ಬಾನು ಎಂದು ತಪ್ಪಾಗಿ ಗುರುತಿಸಿದ್ದರು. ಅಲ್ಲದೆ,
"ಅವರು ಪಾಕಿಸ್ತಾನದ ಏಜೆಂಟ್​ಗಳಾಗಿದ್ದು 100 ರೂ ನೀಡಿ ಹೋರಾಟಕ್ಕೆ ನೇಮಕ ಮಾಡಲಾಗಿದೆ" ಎಂದು ಟ್ವೀಟ್ ಮೂಲಕ ಅಪಹಾಸ್ಯ ಮಾಡಿದ್ದರು. 

ನಟಿ ಕಂಗನಾ ಟ್ವೀಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆ ವ್ಯಕ್ತವಾದ ನಂತರ ವೃದ್ಧೆ ಹಾಗೂ ಹಿರಿಯ ಹೋರಾಟಗಾರ್ತಿಯ ಕುರಿತಾದ ದ್ವಿತೀಯ ದರ್ಜೆಯ ಟ್ವೀಟ್​ ಅನ್ನು
ಅವರು ಅಳಿಸಿದ್ದರು. ಇದರಿಂದ ಸಿಟ್ಟಿಗೆದ್ದ ದಿಲ್ಜಿತ್, ಕಂಗನಾ ಜೊತೆ ಟ್ವೀಟ್ ವಾರ್‌ ಮಾಡಿದ್ದರು. ನೆಟ್ಟಿಗರು ದಿಲ್ಜಿತ್‌ ಬೆಂಬಲಕ್ಕೆ ನಿಂತಿದ್ದರು. ಅಷ್ಟೇ ಅಲ್ಲ, ಈ ಟ್ವೀಟ್‌ ವಾರ್‌ನಿಂದಾಗಿ ಈ ಪಂಜಾಬಿನ ನಟನ ಜನಪ್ರಿಯತೆ ಇನ್ನಷ್ಟು ಹೆಚ್ಚಿಸಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com