'ಬಾಲಿವುಡ್ ನಲ್ಲಿ ನನ್ನ ವಿರುದ್ಧ ಕೆಲಸ ಮಾಡುವ ದೊಡ್ಡ ಗುಂಪು ಇದೆ, ಸಾಕಷ್ಟು ಅವಕಾಶ ತಪ್ಪಿಹೋಗಿದೆ:ಎ ಆರ್ ರೆಹಮಾನ್

ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಬಾಲಿವುಡ್ ನಲ್ಲಿ ಕಂಗನಾ ರಾನಾವತ್ ಸೇರಿದಂತೆ ಹಲವರಿಂದ ನೆಪೊಟಿಸಂ ಅಂದರೆ ಸ್ವಜನ ಪಕ್ಷಪಾತದ ಮಾತುಗಳು ಜೋರಾಗಿ ಕೇಳಿಬರುತ್ತಿದೆ. ಅನೇಕರು ತಮಗೆ ಅನ್ಯಾಯವಾಗಿದೆ ಮತ್ತು ಆಗುತ್ತಿದೆ, ತಮಗೆ ಅನೇಕ ಅವಕಾಶಗಳು ಬಾಲಿವುಡ್ ನಲ್ಲಿ ಕೈ ತಪ್ಪಿ ಹೋಗಿವೆ, ಇದಕ್ಕೆ ಅಲ್ಲಿನ ಗುಂಪುಗಾರಿಕೆಯೇ ಕಾರಣ ಎಂದು ಅನೇಕ ಕಲಾವಿದರು ಆರೋಪಿಸುತ್ತಿದ್ದಾರೆ
ಎ ಆರ್ ರೆಹಮಾನ್
ಎ ಆರ್ ರೆಹಮಾನ್

ನವದೆಹಲಿ: ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಬಾಲಿವುಡ್ ನಲ್ಲಿ ಕಂಗನಾ ರಾನಾವತ್ ಸೇರಿದಂತೆ ಹಲವರಿಂದ ನೆಪೊಟಿಸಂ ಅಂದರೆ ಸ್ವಜನ ಪಕ್ಷಪಾತದ ಮಾತುಗಳು ಜೋರಾಗಿ ಕೇಳಿಬರುತ್ತಿದೆ. ತಮಗೆ ಅನ್ಯಾಯವಾಗಿದೆ ಮತ್ತು ಆಗುತ್ತಿದೆ, ತಮಗೆ ಅನೇಕ ಅವಕಾಶಗಳು ಬಾಲಿವುಡ್ ನಲ್ಲಿ ಕೈ ತಪ್ಪಿ ಹೋಗಿವೆ, ಇದಕ್ಕೆ ಅಲ್ಲಿನ ಗುಂಪುಗಾರಿಕೆಯೇ ಕಾರಣ ಎಂದು ಅನೇಕ ಕಲಾವಿದರು ಆರೋಪಿಸುತ್ತಿದ್ದಾರೆ.

ಖ್ಯಾತ ಸಂಗೀತ ನಿರ್ದೇಶಕ, ಆಸ್ಕರ್ ಪ್ರಶಸ್ತಿ ವಿಜೇತ ಎ ಆರ್ ರೆಹಮಾನ್ ಕೂಡ ಅಂಥದ್ದೇ ವಿಷಯ ಹೊರಹಾಕಿದ್ದಾರೆ. ಹಿಂದಿ ಸಿನಿಮಾ ಉದ್ಯಮದಲ್ಲಿ ತಮಗೆ ಸಾಕಷ್ಟು ಕೆಲಸ ಸಿಗುತ್ತಿಲ್ಲ, ಹಲವು ಉತ್ತಮ ಅವಕಾಶಗಳು ಕೈತಪ್ಪಿ ಹೋಗಿವೆ, ಅಲ್ಲಿ ತಮ್ಮ ವಿರುದ್ಧ ಕೆಲಸ ಮಾಡುತ್ತಿರುವ ಒಂದು ದೊಡ್ಡ ಗುಂಪು ಇದೆ ಎಂದು ಹೇಳಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಸುಶಾಂತ್ ಸಿಂಗ್ ರಜಪೂತ್ ಅವರ ಕೊನೆಯ ಚಿತ್ರ 'ದಿಲ್ ಬೆಚಾರ' ಚಿತ್ರಕ್ಕೆ ಎ ಆರ್ ರೆಹಮಾನ್ 9 ಗೀತೆಗಳನ್ನು ನಿರ್ದೇಶಿಸಿದ್ದಾರೆ. ಅದು ಡಿಸ್ನೆ+ಹಾಟ್ ಸ್ಟಾರ್ ನಲ್ಲಿ ಮೊನ್ನೆ 24ರಂದು ಬಿಡುಗಡೆಯಾಗಿದೆ. ಈ ಸಂದರ್ಭದಲ್ಲಿ ಖಾಸಗಿ ರೇಡಿಯೊ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ರೆಹಮಾನ್, ಬಾಲಿವುಡ್ ಸಿನೆಮಾಗಳಿಗೆ ನೀವು ಏಕೆ ಹೆಚ್ಚೆಚ್ಚು ಸಂಗೀತ ನಿರ್ದೇಶನ ಮಾಡುತ್ತಿಲ್ಲ ಎಂದು ಕೇಳಿದಾಗ ಬಾಲಿವುಡ್ ನಲ್ಲಿ ಕೆಲವರು ತಮ್ಮ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಒಳ್ಳೆ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡುವುದಿಲ್ಲ ಎಂದು ನಾನು ಹೇಳುವುದಿಲ್ಲ, ಅಲ್ಲಿ ಒಂದು ಗುಂಪು ಇದೆ, ಆ ಗುಂಪು ನನ್ನ ಬಗ್ಗೆ ತಪ್ಪಾಗಿ ಅರ್ಥೈಸಿಕೊಂಡು ಇಲ್ಲಸಲ್ಲದ ಆರೋಪ, ಸುಳ್ಳುಸುದ್ದಿ ಹಬ್ಬಿಸುತ್ತಿದೆ ಎಂದು ಹೇಳಿದ್ದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ದಿಲ್ ಬೇಚಾರ ಚಿತ್ರದ ನಿರ್ದೇಶಕ ಮುಕೇಶ್ ಛಬ್ರಾ ಅವರಲ್ಲಿ ಅನೇಕರು ನೀವು ರೆಹಮಾನ್ ಕೈಯಲ್ಲಿ ಸಂಗೀತ ನಿರ್ದೇಶನ ಮಾಡಿಸಬೇಡಿ ಎಂದು ಹೇಳಿದ್ದರಂತೆ. ಇದನ್ನು ನನಗೆ ಅವರೇ ಹೇಳಿದರು. ಅವರು ನನ್ನ ಬಳಿ ಬಂದು ಸಂಗೀತ ನಿರ್ದೇಶನ ಮಾಡಿಕೊಡಿ ಎಂದು ಕೇಳಿದಾಗ ಎರಡು ದಿನಗಳಲ್ಲಿ ನಾಲ್ಕು ಹಾಡುಗಳನ್ನು ಸಂಯೋಜಿಸಿಕೊಟ್ಟೆ ಎಂದು ರೇಡಿಯೊ ವಾಹಿನಿ ಸಂದರ್ಶನದಲ್ಲಿ ರೆಹಮಾನ್ ಹೇಳಿದ್ದಾರೆ.

ನಿಮ್ಮ ಬಗ್ಗೆ ಒಂದರ ಮೇಲೊಂದು, ಒಂದರ ಮೇಲೊಂದು ಹಲವು ಕಥೆಗಳನ್ನು ಹೇಳಿದರು. ಅವರ ಬಳಿ ಹೋಗಬೇಡಿ ಎಂದು ಎಷ್ಟು ಜನ ಹೇಳಿದರು ಎಂದು ಮುಕೇಶ್ ಛಬ್ರಾ ನನಗೆ ಹೇಳಿದರು ಎಂದು ಸಂದರ್ಶನದಲ್ಲಿ ರೆಹಮಾನ್ ಹೇಳಿ, ಈಗ ಅರ್ಥವಾಯಿತೆ ನಾನು ಯಾಕೆ ಬಾಲಿವುಡ್ ನಲ್ಲಿ ಅಷ್ಟೊಂದು ಸಿನಿಮಾಗಳಿಗೆ ಸಂಗೀತ ಮಾಡುತ್ತಿಲ್ಲ ಎಂದು, ನನಗೆ ಉತ್ತಮ ಸಿನಿಮಾಗಳು ಸಿಗದಂತೆ ಅಲ್ಲಿ ತಡೆಯುವ ಒಂದು ಗುಂಪೇ ಇದೆ ಎಂದಿದ್ದಾರೆ.

ಬಾಲಿವುಡ್ ನಲ್ಲಿ ಗುರು, ರಾಕ್ ಸ್ಟಾರ್, ದಿಲ್ ಸೆ, ರೋಜಾ, ಲಗಾನ್, ರಾಂಜನಾ, ಸ್ವದೇಶ್ ನಂತಹ ಜನಪ್ರಿಯ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದವರು ರೆಹಮಾನ್. ಆಸ್ಕರ್ ಪ್ರಶಸ್ತಿ ಪಡೆದ ನನ್ನಿಂದ ಜನರು ಏನು ನಿರೀಕ್ಷಿಸುತ್ತಾರೆ ಎಂದು ಗೊತ್ತಿದೆ, ಆದರೆ ಬಾಲಿವುಡ್ ನಲ್ಲಿ ಆ ನಿರೀಕ್ಷೆಗಳನ್ನು ಈಡೇರಿಸಲು ಕೆಲವರು ನನ್ನನ್ನು ತಡೆಯುತ್ತಿದ್ದಾರೆ. ಇದರಿಂದ ನನಗೆ ಉತ್ತಮ ಚಿತ್ರಗಳು ಅವುಗಳಿಗೆ ಉತ್ತಮ ಸಂಗೀತ ನಿರ್ದೇಶನ ಮಾಡುವ ಅವಕಾಶಗಳು ಕೈತಪ್ಪಿಹೋಗುತ್ತಿವೆ, ಇವೆಲ್ಲ ಓಕೆ, ನನಗೆ ವಿಧಿ, ಹಣೆಬರಹದ ಮೇಲೆ ನಂಬಿಕೆಯಿದೆ. ದೇವರಿಂದ ಎಲ್ಲಾ ಸಿಗುತ್ತದೆ ಎಂದು ಭಾವಿಸುವವನು ನಾನು. ಉತ್ತಮ ಚಿತ್ರಗಳನ್ನು ಮಾಡಿದ ಯಾರೇ ಆದರೂ ನನ್ನ ಬಳಿ ಬರಬಹುದು, ಅವರ ಜೊತೆ ಕೆಲಸ ಮಾಡಲು ನಾನು ಸದಾ ಸಿದ್ದ ಎಂದು ರೆಹಮಾನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com