ತೆರಿಗೆ ವಂಚನೆ ಆರೋಪ: ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್‌ಗೆ ಮದ್ರಾಸ್ ಹೈಕೋರ್ಟ್ ನೋಟಿಸ್

ಆದಾಯ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿ, ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಅವರಿಗೆ ಮದ್ರಾಸ್ ಹೈಕೋರ್ಟ್ ನೋಟಿಸ್ ನೀಡಿದೆ.
ಎ ಆರ್ ರೆಹಮಾನ್
ಎ ಆರ್ ರೆಹಮಾನ್

ಚೆನ್ನೈ: ಆದಾಯ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿ, ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಅವರಿಗೆ ಮದ್ರಾಸ್ ಹೈಕೋರ್ಟ್ ನೋಟಿಸ್ ನೀಡಿದೆ.

ಐಟಿ ಇಲಾಖೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಟಿ ಎಸ್ ಶಿವಜ್ಞಾನಂ ಮತ್ತು ವಿ ಭವಾನಿ ಸುಬ್ಬರಾಯನ್ ನೇತೃತ್ವದ ವಿಭಾಗೀಯ ಪೀಠ ರೆಹಮಾನ್‌ಗೆ ನೋಟಿಸ್ ನೀಡಿದೆ. ಮೇಲ್ಮನವಿಯಲ್ಲಿ, ರಹಮಾನ್ ತಮ್ಮ ಚಾರಿಟಬಲ್ ಟ್ರಸ್ಟ್ ಗೆ ಅಕ್ರಮವಾಗಿ 3.47 ಕೋಟಿ ರೂ.ವರ್ಗಾಯಿಸುವ  ಮೂಲಕ ತೆರಿಗೆ ವಂಚಿಸಿದ್ದಾರೆ ಎಂದು ಐಟಿ ಇಲಾಖೆ ತಿಳಿಸಿದೆ.

ರೆಹಮಾನ್ ಅವರ 2011-12ನೇ ಸಾಲಿನ ತೆರಿಗೆ ಸಲ್ಲಿಕೆಯಲ್ಲಿ ಐಟಿ ಇಲಾಖೆ ವ್ಯತ್ಯಾಸವನ್ನು ಗುರುತಿಸಿದೆ. ಬೃಹತ್ ಮೊತ್ತವನ್ನು ಗಾಯಕ-ಸಂಯೋಜಕರಿಂದ ಸಂಬಳವಾಗಿ ಸ್ವೀಕರಿಸಲಾಗಿದೆ. ಇಂಗ್ಲೆಂಡ್ ಮೂಲದ ಲಿಬ್ರಾ ಮೊಬೈಲ್ಸ್ ಟೆಲಿಕಾಂಗಾಗಿ ವಿಶೇಷ ರಿಂಗ್‌ ಟೋನ್‌ಗಳನ್ನು ರಚಿಸುವುದಕ್ಕಾಗಿ ಕಂಪನಿ  2011ರಲ್ಲಿ 3 ವರ್ಷಗಳ ಒಪ್ಪಂದ ಮಾಡಿಕೊಂಡಿತ್ತು. ಒಪ್ಪಂದದ ಪ್ರಕಾರ ಎ.ಆರ್.ರಹಮಾನ್‌ರವರು ಟೆಲಿಕಾಂ ಕಂಪೆನಿಗೆ ತನ್ನ ಸಂಭಾವನೆಯನ್ನು ನೇರವಾಗಿ ಚಾರಿಟೇಬಲ್ ಫೌಂಡೇಶನ್‌ಗೆ ಪಾವತಿಸುವಂತೆ ಸೂಚಿಸಿದ್ದಾರೆ.

ತೆರಿಗೆಗೆ ಒಳಪಡುವ ಆದಾಯವನ್ನು ರೆಹಮಾನ್ ಸ್ವೀಕರಿಸಬೇಕು. ತೆರಿಗೆ ಕಡಿತವಾದ ಬಳಿಕ ಅದನ್ನು ಟ್ರಸ್ಟ್‌ಗೆ ವರ್ಗಾಯಿಸಬೇಕು. ಆದರೆ ಚಾರಿಟೇಬಲ್ ಟ್ರಸ್ಟ್‌ಗೆ ಆದಾಯ ತೆರಿಗೆ ಕಾಯ್ದೆಯಡಿ ವಿನಾಯಿತಿ ನೀಡಲಾಗಿರುವುದರಿಂದ ಅದನ್ನು ಟ್ರಸ್ಟ್ ಮೂಲಕ ರವಾನಿಸಲಾಗುವುದಿಲ್ಲ ಎಂದು ಐಟಿ ವಕೀಲರು  ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com