ಇಲ್ಲಿ ಜನ ಸಾಯುತ್ತಿದ್ದಾರೆ.. ನೀವು ಮಾಲ್ಡೀವ್ಸ್ ನಲ್ಲಿ ಮೋಜು-ಮಸ್ತಿ ಮಾಡುತ್ತಿದ್ದೀರಾ!: ಬಾಲಿವುಡ್ ನಟರ ವಿರುದ್ಧ ನವಾಜುದ್ದೀನ್ ಸಿದ್ದಿಕಿ ಆಕ್ರೋಶ
ಇಲ್ಲಿ ಜನರು ಸಾಯುತ್ತಿದ್ದಾರೆ.. ನೀವು ಅಲ್ಲಿ ಮಾಲ್ಡೀವ್ಸ್ ನಲ್ಲಿ ಮೋಜು-ಮಸ್ತಿ ಮಾಡುತ್ತಿದ್ದೀರಾ ಎಂದು ಬಾಲಿವುಡ್ ನಟರ ವಿರುದ್ಧ ನವಾಜುದ್ದೀನ್ ಸಿದ್ದಿಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published: 25th April 2021 02:06 PM | Last Updated: 26th April 2021 12:23 PM | A+A A-

ನವಾಜುದ್ದೀನ್ ಸಿದ್ದಿಕಿ
ನವದೆಹಲಿ: ಇಲ್ಲಿ ಜನರು ಸಾಯುತ್ತಿದ್ದಾರೆ.. ನೀವು ಅಲ್ಲಿ ಮಾಲ್ಡೀವ್ಸ್ ನಲ್ಲಿ ಮೋಜು-ಮಸ್ತಿ ಮಾಡುತ್ತಿದ್ದೀರಾ ಎಂದು ಬಾಲಿವುಡ್ ನಟರ ವಿರುದ್ಧ ನವಾಜುದ್ದೀನ್ ಸಿದ್ದಿಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋವಿಡ್-19 2ನೇ ಅಲೆ ತಾರಕಕ್ಕೇರಿರುವಂತೆಯೇ ದೇಶಾದ್ಯಂತ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಅಂತೆಯೇ ಬೆಡ್ ಗಳ ಅಭಾವ ಮತ್ತು ಆಕ್ಸಿಜನ್ ಕೊರತೆಯಿಂದಾಗಿ ಸಾವಿರಾರು ಮಂದಿ ಸಾವನ್ನಪ್ಪುತ್ತಿದ್ದಾರೆ. ಇದರ ನಡುವೆಯೇ ಖ್ಯಾತ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ತಮ್ಮ ಸಹನಟರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಲಿವುಡ್ ತಾರೆಗಳಾದ ದಿಶಾ ಪಟಾನಿ, ಸಾರಾ ಅಲಿ ಖಾನ್, ಆಲಿಯಾ ಭಟ್, ರಣಬೀರ್ ಕಪೂರ್ ಸೇರಿದಂತೆ ಹಲವರು ಮಾಲ್ಡೀವ್ಸ್ ನಲ್ಲಿ ತಾವು ವಿಹಾರಕ್ಕೆ ತೆರಳಿದ್ದನ್ನು ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಗೆ ಬಾಲಿವುಡ್ ನ ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿ ಆಕ್ರೋಶ ವ್ಯಕ್ತಪಡಿಸಿದ್ದು, 'ಈ ಸಂದರ್ಭದಲ್ಲಿ ವಿಹಾರಕ್ಕೆಂದು ಮಾಲ್ಡೀವ್ಸ್ ಗೆ ತೆರಳಿದ ಕೆಲ ಸೆಲೆಬ್ರಿಟಿಗಳು ಮಾಲ್ಡಿವ್ಸ್ ನ ಹೆಸರನ್ನೇ ಅಪಹಾಸ್ಯ ಮಾಡುತ್ತಿದ್ದಾರೆ.
ಅವರು ಪ್ರವಾಸೋದ್ಯಮದೊಂದಿಗೆ ಏನು ವ್ಯವಸ್ಥೆ ಮಾಡಿದ್ದಾರೋ ನನಗೆ ತಿಳಿದಿಲ್ಲ. ಆದರೆ ಮಾನವೀಯತೆಗಾಗಿಯಾದರೂ ನಿಮ್ಮ ವಿಹಾರಗಳನ್ನು ನಿಮ್ಮಲ್ಲೇ ಇಟ್ಟುಕೊಳ್ಳಿ. ಇಲ್ಲಿ ಎಲ್ಲಾ ಕಡೆಗಳಲ್ಲೂ ನೋವಿದೆ. ಕೋವಿಡ್-19 ಪ್ರಕರಣಗಳು ದ್ವಿಗುಣಗೊಳ್ಳುತ್ತಿವೆ. ಒಂದಿಷ್ಟು ಹೃದಯವಂತಿಕೆಯಿರಲಿ. ಇಲ್ಲಿ ನರಳುತ್ತಿರುವವರನ್ನು ಅಪಹಾಸ್ಯ ಮಾಡದಿರಿ' ಎಂದು ಸಿದ್ದಿಕಿ ಹೇಳಿದ್ದಾರೆ.