ಧಾರ್ಮಿಕ ಭಾವನೆಗೆ ಧಕ್ಕೆ; ‘ತಾಂಡವ್’ ವೆಬ್ ಸಿರೀಸ್ ತಂಡ ವಿರುದ್ಧ ಪ್ರಕರಣ ದಾಖಲು
ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಡಿ ‘ತಾಂಡವ್’ ವೆಬ್ ಸರಣಿ ನಿರ್ಮಾಣ ತಂಡ ಹಾಗೂ ಅದನ್ನು ಪ್ರಸಾರ ಮಾಡಿದ ಅಮೆಜಾನ್ ಪ್ರೈಮ್ ಮುಖ್ಯಸ್ಥರ ವಿರುದ್ಧ ಪ್ರಕರಣ ದಾಖಲಾಗಿದೆ.
Published: 24th January 2021 07:09 AM | Last Updated: 24th January 2021 07:09 AM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಡಿ ‘ತಾಂಡವ್’ ವೆಬ್ ಸರಣಿ ನಿರ್ಮಾಣ ತಂಡ ಹಾಗೂ ಅದನ್ನು ಪ್ರಸಾರ ಮಾಡಿದ ಅಮೆಜಾನ್ ಪ್ರೈಮ್ ಮುಖ್ಯಸ್ಥರ ವಿರುದ್ಧ ಪ್ರಕರಣ ದಾಖಲಾಗಿದೆ.
‘ಕಿರಣ ಆರಾಧ್ಯ ಎಂಬುವವರು ನೀಡಿದ ದೂರು ಆಧಾರದ ಮೇರೆಗೆ ಕೆ.ಆರ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಗಳು ತಿಳಿಸಿವೆ.
ತಾಂಡವ್’ ವೆಬ್ ಸರಣಿ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್, ನಿರ್ಮಾಪಕ ಫರಾನ್ ಅಖ್ತರ್, ನಟರಾದ ಸೈಫ್ ಅಲಿ ಖಾನ್, ಮೊಹಮ್ಮದ್ ಜಿಸಾನ್ ಆಯೂಬ್ ಹಾಗೂ ಅಮೆಜಾನ್ ಪ್ರೈಮ್ ಮುಖ್ಯಸ್ಥೆ ಅಪರ್ಣಾ ಪುರೋಹಿತ್ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ವೆಬ್ ಸರಣಿಯ ದೃಶ್ಯವೊಂದರಲ್ಲಿ, ಹಿಂದೂ ಧರ್ಮದ ದೇವರಾದ ಈಶ್ವರನ ಬಾಯಿಯಲ್ಲಿ ಅವಾಚ್ಯ ಸಂಭಾಷಣೆ ಹೇಳಿಸಲಾಗಿದೆ. ಉದ್ದೇಶಪೂರ್ವಕವಾಗಿಯೇ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.