ವಿದ್ಯಾಬಾಲನ್ ಅರಣ್ಯಾಧಿಕಾರಿ ಪಾತ್ರದಲ್ಲಿರುವ ಬಹುನಿರೀಕ್ಷಿತ 'ಶೇರ್ನಿ' ಚಿತ್ರದ ಟ್ರೈಲರ್; ಜೂ.18 ಕ್ಕೆ ಚಿತ್ರ ಬಿಡುಗಡೆ

ಒಂದು ವರ್ಷದಿಂದ ನಿರೀಕ್ಷೆ ಮೂಡಿಸಿದ್ದ ಚಿತ್ರ ಶೇರ್ನಿ ಜೂ.18 ಕ್ಕೆ ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗುತ್ತಿದೆ. ಇದಕ್ಕೂ ಮುನ್ನ ಜೂ.02 ರಂದು ಚಿತ್ರ ತಂಡ ಬಹುನಿರೀಕ್ಷಿತ ಚಿತ್ರ ಪವರ್ ಪ್ಯಾಕ್ಡ್ ಟ್ರೈಲರ್ ನ್ನು ಬಿಡುಗಡೆ ಮಾಡಿದೆ. 
ಶೇರ್ನಿ ಚಿತ್ರದ ನಟಿ ವಿದ್ಯಾಬಾಲನ್
ಶೇರ್ನಿ ಚಿತ್ರದ ನಟಿ ವಿದ್ಯಾಬಾಲನ್

ನವದೆಹಲಿ: ಒಂದು ವರ್ಷದಿಂದ ನಿರೀಕ್ಷೆ ಮೂಡಿಸಿದ್ದ ಚಿತ್ರ ಶೇರ್ನಿ ಜೂ.18 ಕ್ಕೆ ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗುತ್ತಿದೆ. ಇದಕ್ಕೂ ಮುನ್ನ ಜೂ.02 ರಂದು ಚಿತ್ರ ತಂಡ ಬಹುನಿರೀಕ್ಷಿತ ಚಿತ್ರ ಪವರ್ ಪ್ಯಾಕ್ಡ್ ಟ್ರೈಲರ್ ನ್ನು ಬಿಡುಗಡೆ ಮಾಡಿದ್ದು, ಜನರ ನಿರೀಕ್ಷೆ ಮತ್ತಷ್ಟು ಹೆಚ್ಚುವಂತೆ ಮಾಡಿದೆ. 

ಎರಡುವರೆ ನಿಮಿಷಗಳಿರಿವ ಟ್ರೈಲರ್ ನಲ್ಲಿ ವಿದ್ಯಾ ಬಾಲನ್ ಖಡಕ್ ಅರಣ್ಯ ಅಧಿಕಾರಿಯ ಪಾತ್ರದಲ್ಲಿ ಮಿಂಚಿದ್ದಾರೆ. ಸಾಮಾಜಿಕ ನಿರ್ಬಂಧ, ಇಲಾಖೆಯಲ್ಲಿಯೇ ಇರುವ ಜಡ ಮನಸ್ಥಿತಿಗಳನ್ನೂ ಮೀರಿ, ಅರಣ್ಯಾಧಿಕಾರಿಯೊಬ್ಬರು ಮಾನವ-ಪ್ರಾಣಿಗಳ ನಡುವಿನ ಸಂಘರ್ಷವನ್ನು ನಿಭಾಯಿಸುವ ಕಥಾಹಂದರವನ್ನು ಹೊಂದಿರುವುದು ಈ ಸಿನಿಮಾದ ವಿಶೇಷತೆಯಾಗಿದೆ. 

ಈ ನಡುವೆ ಓರ್ವ ಮಹಿಳೆಯಾಗಿ ತನ್ನ ವೈವಾಹಿಕ ಜೀವನದ ನಡುವೆಯೂ ತನ್ನ ವೈಶಿಷ್ಟ್ಯಪೂರ್ಣ ವೃತ್ತಿಯನ್ನು ಹೇಗೆ ನಿಭಾಯಿಸುತ್ತಾರೆ ಎಂಬುದೂ ಸಿನಿಮಾದ ಬಗ್ಗೆ ಕುತೂಹಲವನ್ನು ಹೆಚ್ಚಿಸುತ್ತದೆ. 

ಟ್ರೈಲರ್ ನಲ್ಲಿ ಚಿತ್ರದ ತಾರಾಗಣದ ಭಾಗವಾಗಿರುವ ಶರದ್ ಸಕ್ಸೇನಾ, ಮುಕುಲ್ ಚಡ್ಡಾ, ವಿಜಯ್ ರಾಜ್, ಇಲಾ ಅರುಣ್, ಬ್ರಿಜೇಂದ್ರ ಕಾಲಾ, ನೀರಜ್ ಕಬಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಸಿನಿಮಾದ ಬಗ್ಗೆ ನಿರ್ದೇಶಕ ಅಮಿತ್ ಮಸೂರ್ಕರ್ ಮಾತನಾಡಿದ್ದು, ಶೇರ್ನಿ ಸಂಕೀರ್ಣ, ಸೂಕ್ಷ್ಮ ಅಂಶಗಳನ್ನು ಹೊಂದಿರುವ ಕಥೆಯಾಗಿದ್ದು, ಮನುಕುಲ ಹಾಗೂ ಪ್ರಾಣಿಗಳ ನಡುವಿನ ಸಂಘರ್ಷದ ಸಂಕೀರ್ಣ ವಿಷಯದ ಬಗ್ಗೆ ಮಾತನಾಡುತ್ತದೆ. ಈ ಸಿನಿಮಾದಲ್ಲಿ ವಿದ್ಯಾಬಾಲನ್ ಮಧ್ಯಮ ಶ್ರೇಣಿಯ ಅರಣ್ಯಾಧಿಕಾರಿಯಾಗಿ, ಒತ್ತಡ, ಅಡೆತಡೆಗಳ ನಡುವೆಯೂ ತನ್ನ ತಂಡ ಹಾಗೂ ಸ್ಥಳೀಯರ ಸಹಕಾರದಿಂದ ಪರಿಸರದಲ್ಲಿ ಸಮತೋಲನ ಕಾಯ್ದುಕೊಳ್ಳುವಂತೆ ಮಾಡುವುದನ್ನು ತೋರಿಸಲಾಗಿದೆ. 

ವಿದ್ಯಾಬಾಲನ್ ಜೊತೆಗೆ ಅದ್ಭುತ ತಾರಾಗಣದೊಂದಿಗೆ ಕೆಲಸ ಮಾಡಿದ್ದು ಅದ್ಭುತ ಅನುಭವ ನೀಡಿತ್ತು. ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗುತ್ತಿರುವುದು ಭಾರತವಷ್ಟೇ ಅಲ್ಲದೇ ಜಾಗತಿಕ ಮಟ್ಟದಲ್ಲಿ ಪ್ರೇಕ್ಷಕರನ್ನು ತಲುಪಲು ಸಾಧ್ಯವಾಗಲಿದೆ ಎಂದು ಅಮಿತ್ ಮಸೂರ್ಕರ್ ಹೇಳಿದ್ದಾರೆ. 

ಇನ್ನು ನಟಿ ವಿದ್ಯಾಬಾಲನ್ ಸಹ ಟ್ರೈಲರ್ ಬಿಡುಗಡೆ ಬಗ್ಗೆ ಉತ್ಸಾಹಗೊಂಡಿದ್ದು, ಶೇರ್ನಿ ಕಥೆ ಕೇಳುತ್ತಿದ್ದಂತೆಯೇ ಆಕರ್ಷಕ, ಮೈಮರೆಯುವ ಪ್ರಪಂಚವೊಂದು ಕಣ್ಮುಂದೆ ತೆರೆದುಕೊಂಡಿತು, ನಾನು ನಟಿಸುವ ಪಾತ್ರದ ಅಧಿಕಾರಿ ಕಡಿಮೆ ಮಾತಿನ, ಬಹು ಆಯಾಮ ಹೊಂದಿರುವ ಪಾತ್ರವಾಗಿದೆ ಎಂದು ಹೇಳಿದ್ದಾರೆ. 

ಕೇವಲ ಮನುಷ್ಯ-ಪ್ರಾಣಿಗಳಷ್ಟೇ ಅಲ್ಲದೇ ಮನುಷ್ಯರ ನಡುವಿನ ಪರಸ್ಪರ ಗೌರವ-ಸಹಬಾಳ್ವೆಯ ವಿಷಯಗಳನ್ನೂ ಈ ಚಿತ್ರ ಹೇಳಲಿದೆ. ಜಾಗತಿಕ ಮಟ್ಟದ ಪ್ರೇಕ್ಷಕರೆದುರು ಈ ವಿಶಿಷ್ಟವಾದ ಪಾತ್ರ, ಕಥೆಗಳನ್ನು ಮುಂದಿಡುವುದೂ ಅಪಾರ ಸಂತೋಷ ಮೂಡಿಸುತ್ತದೆ ಎಂದು ವಿದ್ಯಾಬಾಲನ್ ಹೇಳಿದ್ದಾರೆ. 

ಭೂಷಣ್ ಕುಮಾರ್, ಕೃಷ್ಣ್ ಕುಮಾರ್, ವಿಕ್ರಮ್ ಮಲ್ಹೋತ್ರ, ಅಮಿತ್ ಮಸೂರ್ಕರ್ ಚಿತ್ರ ನಿರ್ಮಾಣ ಮಾಡಿದ್ದು, ನ್ಯೂಟನ್ ಖ್ಯಾತಿಯ ಅಮಿತ್ ಮಸೂರ್ಕರ್ ನಿರ್ದೇಶನವನ್ನೂ ಮಾಡಿದ್ದಾರೆ. ಜೂ.18 ರಂದು ಜಾಗತಿಕವಾಗಿ 240ಕ್ಕೂ ಹೆಚ್ಚು ದೇಶಗಳಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com