ಲೈಂಗಿಕ ಕಿರುಕುಳ ಆರೋಪ: ಖ್ಯಾತ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ವಿರುದ್ಧ ಚಾರ್ಜ್ ಶೀಟ್ ದಾಖಲು!
ಲೈಂಗಿಕ ಕಿರುಕುಳ ಆರೋಪದ ಮೇರೆಗೆ ಬಾಲಿವುಡ್ ನ ಖ್ಯಾತ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ವಿರುದ್ಧ ಮುಂಬೈ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
Published: 01st April 2022 03:11 PM | Last Updated: 01st April 2022 03:11 PM | A+A A-

ಗಣೇಶ್ ಆಚಾರ್ಯ
ಮುಂಬೈ: ಲೈಂಗಿಕ ಕಿರುಕುಳ ಆರೋಪದ ಮೇರೆಗೆ ಬಾಲಿವುಡ್ ನ ಖ್ಯಾತ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ವಿರುದ್ಧ ಮುಂಬೈ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಸಹ ನೃತ್ಯಗಾತಿಗೆ ಲೈಂಗಿಕ ಕಿರುಕುಳದ ಆರೋಪ ಪ್ರಕರಣದಲ್ಲಿ ಮುಂಬೈ ಪೊಲೀಸರು ಬಾಲಿವುಡ್ ನ ಖ್ಯಾತ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದು, ಮುಂಬೈನ ಓಶಿವಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಇತ್ತೀಚೆಗೆ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ, ಗಣೇಶ್ ಆಚಾರ್ಯ ಮತ್ತು ಅವರ ಸಹಾಯಕರ ವಿರುದ್ಧ ಸೆಕ್ಷನ್ 354-ಎ (ಲೈಂಗಿಕ ಕಿರುಕುಳ), 354-ಸಿ, 354-ಡಿ (ಹಿಂಬಾಲಿಸುವಿಕೆ), 509 (ಮಹಿಳೆಗೆ ಅವಮಾನ), 323 (ನೋವು), 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಅವಮಾನ), 506 (ಅಪರಾಧ ಬೆದರಿಕೆ)ದ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.
ಗಣೇಶ್ ಆಚಾರ್ಯ ವಿರುದ್ಧ ಸಹ ಡ್ಯಾನ್ಸರ್ ಒಬ್ಬರು ಲೈಂಗಿಕ ಕಿರಕುಳ ಆರೋಪ ಮಾಡಿದ್ದರು. ‘ಲೈಂಗಿಕವಾಗಿ ಸಹಕರಿಸುವಂತೆ ಗಣೇಶ್ ಕೋರಿದ್ದರು. ಆದರೆ, ಇದನ್ನು ನಿರಾಕರಿಸಿದೆ. ಚಿತ್ರರಂಗದಲ್ಲಿ ಯಶಸ್ಸು ಸಿಗಬೇಕಾದರೆ ದೈಹಿಕವಾಗಿ ಸಹಕರಿಸುವಂತೆ ಹೇಳಿದ್ದರು. ಆದರೆ ನಾನು ವಿರೋಧಿಸಿದ್ದೆ. ಹೀಗಾಗಿ ಭಾರತೀಯ ಸಿನಿಮಾ ಮತ್ತು ದೂರದರ್ಶನ ನೃತ್ಯ ನಿರ್ದೇಶಕರ ಸಂಘದಿಂದ ನಾನು ಸದಸ್ಯತ್ವ ಕಳೆದುಕೊಂಡೆ” ಎಂದು ಅವರು ಆರೋಪಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಲು ಬಾಲಿವುಡ್ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ಅವರ ಪರ ವಕೀಲ ರವಿ ಸೂರ್ಯವಂಶಿ ಮಾತನಾಡಿ, “ನನ್ನ ಬಳಿ ಚಾರ್ಜ್ ಶೀಟ್ ಇಲ್ಲ. ಆದ್ದರಿಂದ ನಾನು ಏನನ್ನೂ ಹೇಳಲಾರೆ, ಆದರೆ ಎಫ್‌ಐಆರ್‌ನಲ್ಲಿನ ಎಲ್ಲಾ ಸೆಕ್ಷನ್‌ಗಳು ಜಾಮೀನು ನೀಡಬಲ್ಲವು” ಎಂದು ಹೇಳಿದ್ದಾರೆ.
ಷಡ್ಯಂತ್ರ ಎಂದಿದ್ದ ಗಣೇಶ್ ಆಚಾರ್ಯ
ಇನ್ನು ಮೊದಲ ಬಾರಿಗೆ ತಮ್ಮ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಾಗ ಈ ಕುರಿತು ಪ್ರತಿಕ್ರಿಯಿಸಿದ್ದ ಗಣೇಶ್ ಆಚಾರ್ಯ ಅವರು, ಈ ಆರೋಪದ ಹಿಂದೆ ಬಾಲಿವುಡ್ ನ ಕೆಲ ಗಣ್ಯರ ಷಡ್ಯಂತ್ರವಿದೆ ಎಂದು ಆರೋಪಿಸಿದ್ದರು. 'ಇದು ನನ್ನ ಇಮೇಜ್ ಹಾಳುಮಾಡಲು ನನ್ನ ವಿರುದ್ಧದ ನಡೆಸಲಾಗುತ್ತಿರುವ ಪಿತೂರಿಯಾಗಿದೆ.. ಸರೋಜ್ ಖಾನ್ ಮತ್ತು ಅವರ ಸಹೋದ್ಯೋಗಿಗಳು ಉದ್ಯಮದಲ್ಲಿ ಭ್ರಷ್ಟಾಚಾರ ಮಾಡುತ್ತಿದ್ದಾರೆ. ನಾನು ಸಂಘಕ್ಕೆ ಪ್ರವೇಶಿಸಿದ್ದರಿಂದ ಅವರ ಈ ಅವ್ಯವಹಾರವು ವಿಫಲವಾಗಿದೆ.
ಹೀಗಾಗಿ ಅವರಿಗೆ ನನ್ನ ಮೇಲೆ ಕೋಪವಿದೆ. ನನ್ನ ಮಾನಹಾನಿ ಮತ್ತು ಅದನ್ನು ಮಾಡಲು ತುಂಬಾ ಕೆಳಮಟ್ಟಕ್ಕಿಳಿದಿರುವ ಸರೋಜ್ ಖಾನ್ ಮತ್ತು ಅವರ ತಂಡದ ವಿರುದ್ಧ ನಾನು ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ಅವರ ತಮ್ಮ ವ್ಯಾಪಾರ ವ್ಯರ್ಥವಾಗಿ ಹೋಗಿದ್ದರಿಂದ ಹೀಗೆ ಮಾಡುತ್ತಿದ್ದಾರೆ. ಅವರು ಮನೆಯಲ್ಲಿ ಕುಳಿತು ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದರು ಮತ್ತು ನಾನು ಅದನ್ನು ವಿರೋಧಿಸುತ್ತೇನೆ, ಆದ್ದರಿಂದ ನಾನು ಅವರ ವಿರುದ್ಧ ಹೋರಾಡಲು ನನ್ನ ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇನೆ ಎಂದು ಹೇಳಿದ್ದರು.