'ಸಂವಿಧಾನ ಪ್ರಕಾರ ಈಗ ಹಿಂದಿ ರಾಷ್ಟ್ರಭಾಷೆ, ಆದರೆ ಸಂಸ್ಕೃತ ನಮ್ಮ ರಾಷ್ಟ್ರಭಾಷೆಯಾಗಬೇಕು': ಕಂಗನಾ ರಾನಾವತ್
ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ನೀಡಿರುವ ಹೇಳಿಕೆಗೆ ಬಾಲಿವುಡ್ ನಟ ಅಜಯ್ ದೇವಗನ್ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದು ಸಾಕಷ್ಟು ಸುದ್ದಿ ಮಾಡಿತು. ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
Published: 30th April 2022 11:07 AM | Last Updated: 30th April 2022 01:09 PM | A+A A-

ಕಂಗನಾ ರಾನಾವತ್
ನವದೆಹಲಿ/ಮುಂಬೈ: ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ನೀಡಿರುವ ಹೇಳಿಕೆಗೆ ಬಾಲಿವುಡ್ ನಟ ಅಜಯ್ ದೇವಗನ್ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದು ಸಾಕಷ್ಟು ಸುದ್ದಿ ಮಾಡಿತು. ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ವಿವಾದಾತ್ಮಕ, ಧೈರ್ಯದ ಮಾತುಗಳಿಗೆ ಹೆಸರಾಗಿರುವ ಬಾಲಿವುಡ್ ನಟಿ ಕಂಗನಾ ರಾನಾವತ್ ಹಿಂದಿಯ ಬದಲು ಸಂಸ್ಕೃತ ರಾಷ್ಟ್ರಭಾಷೆಯಾಗಬೇಕು ಎಂದಿದ್ದಾರೆ.
ಸಂಸ್ಕೃತ ನಮ್ಮ ರಾಷ್ಟ್ರೀಯ ಭಾಷೆಯಾಗಬೇಕು ಎಂದು ನನ್ನ ಅಭಿಪ್ರಾಯ, ಹಿಂದಿ, ಜರ್ಮನಿ, ಇಂಗ್ಲಿಷ್, ಫ್ರೆಂಚ್ ಮುಂತಾದ ಭಾಷೆಗಳು ಸಂಸ್ಕೃತದಿಂದ ಹುಟ್ಟಿಕೊಂಡಿವೆ. ನಮ್ಮಲ್ಲಿ ಸಂಸ್ಕೃತ ಏಕೆ ರಾಷ್ಟ್ರಭಾಷೆಯಾಗಿಲ್ಲ? ಶಾಲೆಗಳಲ್ಲಿ ಇದು ಏಕೆ ಕಡ್ಡಾಯವಿಲ್ಲ ಎಂದು ತಮ್ಮ ಹೊಸ ಚಿತ್ರ ಧಾಕಡ್ನ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಕಂಗನಾ ರಾನಾವತ್ ಕೇಳಿದ್ದಾರೆ.
ಇದನ್ನೂ ಓದಿ: ಹಿಂದಿ ರಾಷ್ಟ್ರ ಭಾಷೆ ವಾರ್: ಸುದೀಪ್ ಗೆ ಭಾರಿ ಬೆಂಬಲ, ಅಜಯ್ ದೇವಗನ್ ಗೆ ತಿರುಗೇಟು; ಸಿದ್ದು, ರಮ್ಯ ಹೇಳಿದ್ದೇನು?
ಇದೇ ಸಂದರ್ಭದಲ್ಲಿ ಅವರು ನಟ ಅಜಯ್ ದೇವಗನ್ ಗೆ ಬೆಂಬಲ ಸೂಚಿಸಿದ್ದಾರೆ. ಹಿಂದಿ ನಮ್ಮ ರಾಷ್ಟ್ರ ಭಾಷೆಯಾಗಿತ್ತು, ಹಿಂದಿ ಭಾಷೆ ರಾಷ್ಟ್ರಭಾಷೆ ಎಂದು ನಿರಾಕರಿಸಿದರೆ ಸಂವಿಧಾನವನ್ನು ನಿರಾಕರಿಸಿದಂತೆ ಎಂದು ಕಂಗನಾ ಅಭಿಪ್ರಾಯಪಟ್ಟಿದ್ದಾರೆ.
ಇಂದು ದೇಶದೊಳಗೆ ನಾವು ಇಂಗ್ಲಿಷ್ ಅನ್ನು ಸಂವಹನದ ಕೊಂಡಿಯಾಗಿ ಬಳಸುತ್ತಿದ್ದೇವೆ. ಅದು ಕೊಂಡಿಯಾಗಬೇಕೆ ಅಥವಾ ಹಿಂದಿ ಅಥವಾ ಸಂಸ್ಕೃತ ಆ ಕೊಂಡಿಯಾಗಬೇಕೆ ತಮಿಳೇ ಎಂಬ ಬಗ್ಗೆ ನಾವು ನಿರ್ಧಾರಕ್ಕೆ ಬರಬೇಕು. ಆದ್ದರಿಂದ, ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು, ತಕ್ಷಣವೇ ನಿರ್ಧಾರ ತೆಗೆದುಕೊಳ್ಳಬೇಕು. ಸದ್ಯಕ್ಕೆ, ಸಂವಿಧಾನದ ಪ್ರಕಾರ ಹಿಂದಿ ರಾಷ್ಟ್ರೀಯ ಭಾಷೆಯಾಗಿದೆ ಎಂದರು.