ಬಾಲಿವುಡ್‌ನಲ್ಲಿ ನಿಜವಾದ ಯಶಸ್ಸು ಕಾಣದವರು ಡ್ರಗ್ಸ್ ಗೆ ದಾಸರಾಗುತ್ತಾರೆ: ವಿವೇಕ್ ಅಗ್ನಿಹೋತ್ರಿ
ಯಾವುದೇ ವಿಚಾರಗಳಿರಲಿ ಅತ್ಯಂತ ಸ್ಪಷ್ಟವಾಗಿ ಯಾವಾಗಲೂ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಇದೀಗ ತಮ್ಮ ಟ್ವಿಟರ್ ಖಾತೆಯಲ್ಲಿ ಬಾಲಿವುಡ್ ಬಗ್ಗೆ ಸುದೀರ್ಘವಾದ ಟಿಪ್ಪಣಿಯೊಂದನ್ನು ಪೋಸ್ಟ್ ಮಾಡಿದ್ದಾರೆ.
Published: 21st August 2022 05:26 PM | Last Updated: 22nd August 2022 01:32 PM | A+A A-

ವಿವೇಕ್ ಅಗ್ನಿಹೋತ್ರಿ
ಯಾವುದೇ ವಿಚಾರಗಳಿರಲಿ ಅತ್ಯಂತ ಸ್ಪಷ್ಟವಾಗಿ ಯಾವಾಗಲೂ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಇದೀಗ ತಮ್ಮ ಟ್ವಿಟರ್ ಖಾತೆಯಲ್ಲಿ ಬಾಲಿವುಡ್ ಬಗ್ಗೆ ಸುದೀರ್ಘವಾದ ಟಿಪ್ಪಣಿಯೊಂದನ್ನು ಪೋಸ್ಟ್ ಮಾಡಿದ್ದಾರೆ. ಅದಕ್ಕೆ 'ಬಾಲಿವುಡ್ ಆ್ಯನ್ ಇನ್‌ಸೈಡ್ ಸ್ಟೋರಿ' ಎಂದು ಶೀರ್ಷಿಕೆ ನೀಡಿದ್ದಾರೆ.
'ಬಾಲಿವುಡ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾನು ಸಾಕಷ್ಟು ವರ್ಷಗಳನ್ನು ಕಳೆದಿದ್ದೇನೆ. ನೀವು ನೋಡುತ್ತಿರುವುದು ಬಾಲಿವುಡ್ ಅಲ್ಲ. ನಿಜವಾದ ಬಾಲಿವುಡ್ ಅದರ ಕತ್ತಲೆ ಗಲ್ಲಿಗಳಲ್ಲಿ ಕಂಡುಬರುತ್ತದೆ. ಅದರ ತುಂಬೆಲ್ಲ ಕತ್ತಲು. ಇದನ್ನು ಸಾಮಾನ್ಯ ಮನುಷ್ಯನು ಅರ್ಥಮಾಡಿಕೊಳ್ಳಲು ಅಸಾಧ್ಯ. ಹಾಗಿದ್ದರೆ ಬನ್ನಿ ಅದನ್ನು ಅರ್ಥಮಾಡಿಕೊಳ್ಳೋಣ: ಈ ಕತ್ತಲೆಯ ಗಲ್ಲಿಗಳಲ್ಲಿ ನೀವು ಛಿದ್ರಗೊಂಡ ಕನಸುಗಳು, ತುಳಿತಕ್ಕೊಳಗಾದ ಕನಸುಗಳು, ಹೂತು ಹೋದ ಕನಸುಗಳನ್ನು ಕಾಣಬಹುದು. ಬಾಲಿವುಡ್ ಕಥೆಗಳ ಸಂಗ್ರಹಾಲಯವಾಗಿರುವ ಜೊತೆ ಜೊತೆಗೆ ಪ್ರತಿಭೆಗಳ ಸ್ಮಶಾನವೂ ಆಗಿದೆ. ಇದು ಕೇವಲ ನಿರಾಕರಣೆ ಬಗ್ಗೆ ಅಲ್ಲ. ನಿರಾಕರಣೆಯೇ ಒಪ್ಪಂದದ ಭಾಗ ಎಂಬುದು ಇಲ್ಲಿಗೆ ಬರುವ ಯಾರಿಗಾದರೂ ತಿಳಿಸಿದೆ' ಎಂದಿದ್ದಾರೆ.
Bollywood. An Inside Story. Pl. read. pic.twitter.com/e4WcBvJLLU
— Vivek Ranjan Agnihotri (@vivekagnihotri) August 21, 2022
'ಇದು ನವಿರಾದ ಕನಸುಗಳು, ಭರವಸೆಗಳು ಮತ್ತು ಯಾವುದೇ ರೀತಿಯ ಮಾನವೀಯತೆಯ ನಂಬಿಕೆಯನ್ನು ಅವಮಾನ ಮತ್ತು ಶೋಷಣೆಯ ಮೂಲಕ ಛಿದ್ರಗೊಳಿಸುತ್ತದೆ. ಒಬ್ಬರು ಆಹಾರವಿಲ್ಲದೆ ಬದುಕಬಹುದು, ಆದರೆ ಗೌರವ, ಸ್ವಾಭಿಮಾನ ಮತ್ತು ಭರವಸೆ ಇಲ್ಲದೆ ಬದುಕುವುದು ಅಸಾಧ್ಯ. ಈ ಪರಿಸ್ಥಿತಿಯಲ್ಲಿ ಯಾವುದೇ ಮಧ್ಯಮ ವರ್ಗದ ಯುವಕರು ಬೆಳೆಯಬೇಕೆಂದು ಊಹಿಸಿಕೊಳ್ಳುವುದಿಲ್ಲ. ಇದೆಲ್ಲದರಿಂದ ಮನೆಗೆ ಹಿಂದಿರುಗಿದವರೇ ಅದೃಷ್ಟವಂತರು. ಯಾರು ಇಲ್ಲಿ ಉಳಿಯುತ್ತಾರೆ, ಬೇರ್ಪಡುತ್ತಾರೆ ಹಾಗೂ ನಿಜವಾದ ಯಶಸ್ಸನ್ನು ಕಂಡುಕೊಳ್ಳದವರು ಡ್ರಗ್ಸ್, ಆಲ್ಕೋಹಾಲ್ ಮತ್ತು ಎಲ್ಲಾ ರೀತಿಯ ಜೀವನ-ಹಾನಿಕಾರಕ ಸಂಗತಿಗಳಲ್ಲಿ ಮುಳುಗುತ್ತಾರೆ. ಆಗ ಅಂತವರಿಗೆ ಹಣದ ಅವಶ್ಯಕತೆ ಬಿದ್ದಾಗ, ಎಲ್ಲಾ ರೀತಿಯ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ. ಕೆಲವು ಯಶಸ್ಸು ಅತ್ಯಂತ ಅಪಾಯಕಾರಿಯಾಗಿರುತ್ತವೆ. ಯಾವುದೇ ಆದಾಯ ಮತ್ತು ಅಧಿಕಾರವಿಲ್ಲದಿದ್ದರೂ ಮನರಂಜನಾ ಉದ್ಯಮದಲ್ಲಿದ್ದೀರಿ, ನೀವು ಸ್ಟಾರ್‌ನಂತೆ ಕಾಣಬೇಕು, ಸ್ಟಾರ್‌ನಂತೆ ಪಾರ್ಟಿ ಮಾಡಬೇಕು, ಪಿಆರ್ ಸ್ಟಾರ್‌ನಂತೆ ಇರಬೇಕು ಆದರೆ ನೀವು ಸ್ಟಾರ್ ಅಲ್ಲ' ಎಂದು ಹೇಳಿದ್ದಾರೆ.
ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್: ತರೂರ್, ಕೇಜ್ರಿವಾಲ್, ಟ್ವಿಂಕಲ್ ಖನ್ನಾ ವಿರುದ್ಧ ವಿವೇಕ್ ಅಗ್ನಿಹೋತ್ರಿ ಟೀಕೆ
'ಒಂದು ಗ್ಯಾಂಗ್‌ಸ್ಟಾ ಗೆಟ್ಟೋದಲ್ಲಿ (gangsta ghetto) ನೀವು ಗನ್ ಅಥವಾ ಚಾಕು ಇಲ್ಲದೆ ದರೋಡೆಕೋರರಂತೆ ವರ್ತಿಸಬೇಕು ಎಂದು ಕಲ್ಪಿಸಿಕೊಳ್ಳಿ. ಇಲ್ಲಿ ನೀವು ಅವಮಾನ ಮತ್ತು ಶೋಷಣೆಗೆ ಒಳಗಾಗುವಿರಿ. ಇನ್‌ಸ್ಟಾಗ್ರಾಂ ಕೂಡ ಉಚಿತವಲ್ಲ. ಶೂಟ್ ಮಾಡಲು, ಚೆನ್ನಾಗಿ ಕಾಣಲು, ಬ್ಯುಸಿ ಎನ್ನಲು ಹಣದ ಬೇಡಿಕೆಯನ್ನಿಡುತ್ತದೆ. ಇದರಲ್ಲಿನ ಓಟವು ನೀವು ಡಾರ್ಕ್ ಹೋಲ್‌ನಿಂದ ಪ್ರಾರಂಭಿಸಿದ ಸ್ಥಳಕ್ಕೇ ನಿಮ್ಮನ್ನು ಮರಳಿ ತರುತ್ತದೆ. ಇದು ಪ್ರತಿ ಓಟದ ಜೊತೆಗೆ ಆಳವಾಗಿ ಮತ್ತು ಆಳವಾಗುತ್ತಲೇ ಇರುತ್ತದೆ. ನೀವು ತೋರಿಸುತ್ತೀರಿ, ಯಾರೂ ನೋಡುವುದಿಲ್ಲ. ನೀವು ಕಿರುಚುತ್ತೀರಿ, ಯಾರೂ ಕೇಳುವುದಿಲ್ಲ. ನೀನು ಅತ್ತರೂ ಯಾರೂ ಕಾಳಜಿ ವಹಿಸುವುದಿಲ್ಲ. ನೀವು ಕಂಡುಕೊಳ್ಳುವ ಎಲ್ಲಾ ಜನರು ನಿಮ್ಮನ್ನು ನೋಡಿ ನಗುತ್ತಿದ್ದಾರೆ. ಆಗ ಸದ್ದಿಲ್ಲದೆ ನೀವು ನಿಮ್ಮ ಕನಸುಗಳನ್ನು ಹೂತುಹಾಕುತ್ತೀರಿ. ನಂತರ ನಿಮ್ಮ ಕನಸುಗಳ ಸಮಾಧಿಯ ಮೇಲೆ ಜನರು ನೃತ್ಯ ಮಾಡುವುದನ್ನು ನೀವು ಕಾಣುತ್ತೀರಿ. ನಿಮ್ಮ ವೈಫಲ್ಯವು ಅವರ ಆಚರಣೆಯಾಗುತ್ತದೆ. ನೀವು ನಡೆದಾಡುತ್ತಿರುವ ಶವವಾಗುವಿರಿ. ವಿಪರ್ಯಾಸವೆಂದರೆ ನೀವು ಸತ್ತಿರುವುದನ್ನು ನಿಮ್ಮನ್ನು ಹೊರತುಪಡಿಸಿ ಯಾರೂ ನೋಡುವುದಿಲ್ಲ. ಒಂದು ದಿನ, ನೀವು ಅಕ್ಷರಶಃ ಸಾಯುತ್ತೀರಿ. ತದನಂತರ ಜಗತ್ತು ನಿಮ್ಮನ್ನು ನೋಡುತ್ತದೆ' ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: 'ದಿ ಕಾಶ್ಮೀರ್ ಫೈಲ್ಸ್' ಆಯ್ತು, ಇನ್ನು 'ದಿ ಡೆಲ್ಲಿ ಫೈಲ್ಸ್': ವಿವೇಕ್ ಅಗ್ನಿಹೋತ್ರಿ ಘೋಷಣೆ